ADVERTISEMENT

ಸ್ಮಾರ್ಟ್ ಸಿಟಿ: ಕಳಪೆಯಾಗಿದ್ದರೆ ತನಿಖೆ– ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2022, 21:45 IST
Last Updated 22 ಡಿಸೆಂಬರ್ 2022, 21:45 IST
   

ಬೆಳಗಾವಿ: ಸ್ಮಾರ್ಟ್ ಸಿಟಿ ಯೋಜನೆಯಡಿ ಬಿಬಿಎಂಪಿ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಕಾಮಗಾರಿ ಕಳಪೆಯಾಗಿದ್ದರೆ ಆ ಬಗ್ಗೆ ತನಿಖೆ ನಡೆಸಲು ಸಿದ್ಧ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ವಿಧಾನಪರಿಷತ್ತಿನಲ್ಲಿ ಕಾಂಗ್ರೆಸ್‌ನ ಪಿ.ಆರ್. ರಮೇಶ್ ಅವರು ಸ್ಮಾರ್ಟ್ ಯೋಜನೆ ಕುರಿತು ವಿವರ ಕೇಳಿದ್ದರು.

ಅದಕ್ಕೆ ಸರ್ಕಾರ ನೀಡಿದ ಉತ್ತರಕ್ಕೆ ಆಕ್ಷೇಪಿಸಿದ ರಮೇಶ್, ‘ಸರಿಯಾಗಿ ಕಾಮಗಾರಿಯನ್ನೇ ನಡೆಸಿಲ್ಲ. ಒಟ್ಟು ₹1000 ಕೋಟಿ ಮೊತ್ತದಲ್ಲಿ ₹800 ಕೋಟಿ ಪಾವತಿಸಲಾಗಿದೆ. 44 ಯೋಜನೆಗಳ ಪೈಕಿ ₹450 ಕೋಟಿ ರಸ್ತೆಗಳಿಗೆ ವೆಚ್ಚ ಮಾಡಲಾಗಿದೆ. ಐತಿಹಾಸಿಕ ನಗರದ ಪುನಶ್ಚೇತನ ಮಾಡುವಾಗ, ಆ ಕಾಲದ ಮರುಸೃಷ್ಟಿ ಮಾಡಬೇಕಿತ್ತು. ರಸ್ತೆ ಜತೆಗೆ ಪಾದಚಾರಿ ಮಾರ್ಗವನ್ನು ಮಾಡಿದ್ದು ಬಿಟ್ಟರೆ ಬೇರೇನೂ ಮಾಡಿಲ್ಲ. ಕೆ.ಆರ್. ಮಾರ್ಕೆಟ್ ಸ್ಮಾರ್ಟ್ ಮಾರ್ಕೆಟ್ ಹೇಗಾಗಿದೆ ಎಂದು ನೀವೇ ಬಂದು ನೋಡಿ‘ ಎಂದು ಬೆಂಗಳೂರು ಅಭಿವೃದ್ಧಿ ಸಚಿವರೂ ಆಗಿರುವ ಬೊಮ್ಮಾಯಿಯವರೆಗೆ ಆಹ್ವಾನ ನೀಡಿದರು.

ADVERTISEMENT

ಇದಕ್ಕೆ ಪ್ರತಿಕ್ರಿಯಿಸಿದ ಬೊಮ್ಮಾಯಿ, ‘ಸ್ಮಾರ್ಟ್‌ ಸಿಟಿ ಸಲಹಾ ಸಮಿತಿಯಲ್ಲಿ ಸಂಸದರು, ಶಾಸಕರು ಇರುತ್ತಾರೆ. ಈಗ ಬೆಂಗಳೂರು ಕೇಂದ್ರವನ್ನಷ್ಟೇ ಯೋಜನೆಯಡಿ ತೆಗೆದುಕೊಳ್ಳಲಾಗಿದೆ. ಸಂಸದ ಪಿ.ಸಿ. ಮೋಹನ್ ಅಧ್ಯಕ್ಷರಾಗಿದ್ದರೆ, ಶಿವಾಜಿನಗರ, ಶಾಂತಿನಗರ, ಚಾಮರಾಜಪೇಟೆ, ಗಾಂಧಿನಗರ ಶಾಸಕರು ಸದಸ್ಯರಾಗಿದ್ದಾರೆ. ಅವರ ಸಲಹೆ ಆಧರಿಸಿ ಯೋಜನೆ ರೂಪಿಸಲಾಗಿದ್ದು, ಕೇಂದ್ರ ಸರ್ಕಾರದ ಅನುಮೋದನೆಯನ್ನೂ ಪಡೆಯಲಾಗಿದೆ. ವೈಟ್ ಟಾಪಿಂಗ್‌ಗೆ ಅನುದಾನ ಬಳಸಲಾಗಿದೆ. ಶಿವಾಜಿನಗರದಲ್ಲಿ ಪಾರಂಪರಿಕ ಕಟ್ಟಡ ಇದ್ದು, ಅಲ್ಲಿ ಆಗಿರುವ ಅಭಿವೃದ್ಧಿಯನ್ನೊಮ್ಮೆ ನೋಡಿ. ನಿಮ್ಮ ಪಕ್ಷದ ಶಾಸಕರೂ ಇದ್ದಾರೆ’ ಎಂದರು.

ಮಾರ್ಕೆಟ್‌ಗೆ ಬನ್ನಿ ಎಂದು ರಮೇಶ್ ಆಹ್ವಾನಿಸಿದಾಗ, ‘ನಿಮ್ಮನ್ನೇ ಕರೆದುಕೊಂಡು ಭೇಟಿ ನೀಡುತ್ತೇನೆ. ಲೋಪದೋಷಗಳು ಕಂಡುಬಂದರೆ ತನಿಖೆಗೆ ಆದೇಶಿಸುತ್ತೇನೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.