ADVERTISEMENT

ವಿಧಾನ ಪರಿಷತ್: ಅರಣ್ಯ ಸಾಗುವಳಿ– ಮೂರು ತಿಂಗಳಲ್ಲಿ ಭೂಹಕ್ಕು

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2023, 15:44 IST
Last Updated 6 ಡಿಸೆಂಬರ್ 2023, 15:44 IST
<div class="paragraphs"><p>ಈಶ್ವರ ಖಂಡ್ರೆ</p></div>

ಈಶ್ವರ ಖಂಡ್ರೆ

   

ವಿಧಾನ ಪರಿಷತ್: ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ 1978ಕ್ಕೂ ಮೊದಲು ಸಾಗುವಳಿ ಮಾಡಿದ್ದವರಿಗೆ ಮೂರು ತಿಂಗಳ ಒಳಗೆ ಭೂಹಕ್ಕು ನೀಡಲಾಗುವುದು ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದರು.

ಬಿಜೆಪಿಯ ಪ್ರತಾಪ ಸಿಂಹ ನಾಯಕ್ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯದ 31 ಜಿಲ್ಲೆಗಳಲ್ಲಿ ಸ್ವೀಕರಿಸಿದ ಎಲ್ಲ ಅರ್ಜಿಗಳನ್ನು ಪರಿಶೀಲಿಸಲಾಗಿದೆ. ಅರ್ಜಿ ಸಲ್ಲಿಕೆಯಾದ ಸ್ಥಳದ ಜಂಟಿ ಸರ್ವೆ ಕಾರ್ಯವೂ ಮುಗಿದಿದೆ. ಸುಮಾರು 8 ಸಾವಿರ ರೈತರಿಗೆ ಸಾಗುವಳಿ ಪತ್ರ ದೊರೆಯಲಿದೆ ಎಂದರು.

ADVERTISEMENT

ಡ್ರೋನ್‌ ಸೇರಿದಂತೆ ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಅರಣ್ಯ ಹಾಗೂ ಕಂದಾಯ ಭೂಮಿಯ ಜಂಟಿ ಸರ್ವೆ ಕಾರ್ಯ ನಡೆಸಲಾಗುವುದು. ನಿಖರವಾಗಿ ಕಂದಾಯ, ಅರಣ್ಯ, ಖಾಸಗಿ ಭೂಮಿ ಗುರುತಿಸಲಾಗುವುದು. ಅಲ್ಲಿಯವರೆಗೂ ಒತ್ತುವರಿ ತೆರವು ಮಾಡುವುದಿಲ್ಲ. ಯಥಾಸ್ಥಿತಿ ಕಾಪಾಡಲಾಗುವುದು. ಜನರು ತಮ್ಮ ಬಳಿ ಇರುವ ದಾಖಲೆಗಳನ್ನು ಸಲ್ಲಿಸಬೇಕು. ಸರ್ವೆ ನಂತರವೂ 30ರಿಂದ 40 ವರ್ಷಗಳ ಹಿಂದೆ ಮನೆಕಟ್ಟಿಕೊಂಡವರಿಗೆ, ಜನವಸತಿಗೆ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಜನವಸತಿಯಷ್ಟೇ ಅರಣ್ಯ ಭೂಮಿಯೂ ಮುಖ್ಯ. ವನ್ಯಜೀವಿಗಳ ದಾಳಿಯಿಂದ ಎರಡು ವರ್ಷಗಳಲ್ಲಿ 93 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಹಾಗಾಗಿ, ಸುಪ್ರೀಂಕೋರ್ಟ್‌ ಆದೇಶಗಳನ್ನು ಗಮನದಲ್ಲಿ ಇಟ್ಟುಕೊಂಡು ದೊಡ್ಡ ಒತ್ತುವರಿಯನ್ನು ತೆರವುಗೊಳಿಸಲಾಗುವುದು, ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.