ADVERTISEMENT

ಬೆಳಗಾವಿ ಅಧಿವೇಶನ: ಪ್ರಶ್ನೋತ್ತರದಲ್ಲೂ ‘ಉತ್ತರ’ಕ್ಕೆ ಆದ್ಯತೆ: ಹೊರಟ್ಟಿ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2025, 15:40 IST
Last Updated 6 ಡಿಸೆಂಬರ್ 2025, 15:40 IST
ಬಸವರಾಜ ಹೊರಟ್ಟಿ
ಬಸವರಾಜ ಹೊರಟ್ಟಿ   

ಬೆಂಗಳೂರು: ಬೆಳಗಾವಿಯಲ್ಲಿ ಡಿ.8 ರಿಂದ ಆರಂಭವಾಗುವ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಚರ್ಚೆಗಳಿಗೆ ಹೆಚ್ಚಿನ ಆದ್ಯತೆ ನೀಡುವ ಜತೆಗೆ, ಪ್ರಶ್ನೋತ್ತರ ಹಾಗೂ ಶೂನ್ಯವೇಳೆಯಲ್ಲೂ ಉತ್ತರ ಕರ್ನಾಟದ ಪ್ರಶ್ನೆ, ಪ್ರಸ್ತಾವಗಳಿಗೆ ಮೊದಲ ಆದ್ಯತೆ ನೀಡಲಾಗುವುದು ಎಂದು ವಿಧಾನಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.

ಸುದ್ದಿಗಾರರ ಜತೆ ಶನಿವಾರ ಮಾತನಾಡಿದ ಅವರು, ‘ಉತ್ತರ ಕರ್ನಾಟಕದ ಸಮಸ್ಯೆಗಳ ಮೇಲೆ ಪ್ರತಿ ಅಧಿವೇಶನದಲ್ಲೂ ಸದಸ್ಯರು ನಿರಂತರವಾಗಿ ಧ್ವನಿ ಎತ್ತುತ್ತಿದ್ದಾರೆ. ಕೃಷ್ಣಾ ಮೇಲ್ಡಂಡೆ ಯೋಜನೆ, ಆರೋಗ್ಯ, ಶಿಕ್ಷಣ ಕ್ಷೇತ್ರದ ಸಮಸ್ಯೆಗಳು ಸೇರಿದಂತೆ ಹಲವು ಬೇಡಿಕೆಗಳು ಈಡೇರಿಲ್ಲ. ಪ್ರತಿ ಬಾರಿಯೂ ಇಂತಹ ವಿಷಯಗಳು ಚರ್ಚೆಗೆ ಬಂದರೂ, ಪರಿಹಾರ ಸಿಕ್ಕಿಲ್ಲ. ಕಲ್ಯಾಣ ಕರ್ನಾಟಕದ ಜನರು ಇಂದಿಗೂ ಸಂಕಷ್ಟದ ಬುದಕು ಸಾಗಿಸುತ್ತಿದ್ದಾರೆ. ಈ ಬಾರಿ ವಿಸ್ತೃತ ಚರ್ಚೆಗೆ ಅವಕಾಶ ನೀಡುವ ಜತೆಗೆ, ಸಮಸ್ಯೆಗಳಿಗೆ ಪರಿಹಾರ ನೀಡಲು ಆಯಾ ಇಲಾಖೆಗಳ ಸಚಿವರಿಗೆ ಸೂಚಿಸಲಾಗುವುದು. ಅದಕ್ಕಾಗಿ ಪ್ರತಿ ಬುಧವಾರ ಇಡೀ ಸಮಯ ಉತ್ತರ ಕರ್ನಾಟಕದ ಸಮಸ್ಯೆಗಳ ಚರ್ಚೆಗೆ ಮೀಸಲಿಡಲಾಗುವುದು’ ಎಂದರು. 

ಕೆಲವರು ಸುದೀರ್ಘವಾಗಿ ಮಾತನಾಡಿ ಸಮಸ್ಯೆಗಳ ಮೇಲೆ ನಿಖರ ಬೆಳಕು ಚೆಲ್ಲುತ್ತಾರೆ. ಕೆಲವರು ಅನಗತ್ಯ ಸಮಯ ವ್ಯರ್ಥ ಮಾಡುತ್ತಾರೆ. ಪ್ರತಿಯೊಬ್ಬರೂ ಪ್ರತಿಷ್ಠೆಗಿಂತ, ಪರಿಸ್ಥಿತಿಗೆ, ವಿಷಯಕ್ಕೆ ಅನುಗುಣವಾಗಿ ಮಾತನಾಡಿದರೆ ಸಮಯದ ಅಭಾವ ತಲೆದೋರುವುದಿಲ್ಲ. ರಚನಾತ್ಮಕ ಚರ್ಚೆಗಳಿಂದ ಸದನಕ್ಕೂ ಗೌರವ ಸಿಗುತ್ತದೆ ಎಂದು ಹೇಳಿದರು.

ADVERTISEMENT

ಸಚಿವರ ಹಾಜರಿ ಕಡ್ಡಾಯ

‘ಸದನದ ಸಮಯ ವ್ಯರ್ಥವಾಗುವುದನ್ನು ತಪ್ಪಿಸಲು ಹೆಚ್ಚಿನ ಸಂಖ್ಯೆಯ ಸಚಿವರು ವಿಧಾನಪರಿಷತ್‌ ಕಲಾಪಗಳಲ್ಲಿ ಕಡ್ಡಾಯವಾಗಿ ಹಾಜರಿರಬೇಕು. ಪ್ರತಿ ಬಾರಿಯೂ ಸಚಿವರ ಸಂಖ್ಯೆ ಕಡಿಮೆ ಇರುತ್ತದೆ. ಈ ಕುರಿತು ಕಟ್ಟುನಿಟ್ಟಿನ ಸೂಚನೆ ನೀಡಿದರೂ ಪ್ರಯೋಜನವಾಗಿಲ್ಲ’ ಎಂದು ಹೊರಟ್ಟಿ ಹೇಳಿದರು. ‘ಬೆಳಗಾವಿಯ ಅಧಿವೇಶನದಲ್ಲಿ ಸಚಿವರ ಹಾಜರಾತಿ ಖಚಿತಪಡಿಸಬೇಕು. ಸಂಪುಟದ ಎಲ್ಲ ಸದಸ್ಯರಿಗೂ ಹಾಜರಿರುವಂತೆ ಸೂಚಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವೆ. ಎಲ್ಲ ಪ್ರಶ್ನೆಗಳಿಗೂ ಸಭಾನಾಯಕರೇ ಉತ್ತರ ನೀಡುವ ಸಂಪ್ರದಾಯ ಮುಕ್ತಾಯವಾಗಬೇಕು. ಆಯಾ ಸಚಿವರೇ ಹಾಜರಿದ್ದು ಉತ್ತರ ನೀಡಬೇಕು’ ಎಂದರು. 

ಜ್ವಲಂತ ಸಮಸ್ಯೆಗಳತ್ತ ಚಿತ್ತ: ವಿಜಯೇಂದ್ರ

ಅಧಿವೇಶನದಲ್ಲಿ ರಾಜ್ಯದ ಜ್ವಲಂತ ಸಮಸ್ಯೆ ಕಾಂಗ್ರೆಸ್‌ ಸರ್ಕಾರದ ವೈಫಲ್ಯಗಳ ಕುರಿತು ಚರ್ಚಿಸಲಾಗುವುದು ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.  ಸುದ್ದಿಗಾರರ ಜತೆ ಮಾತನಾಡಿದ ಅವರು ‘ಉತ್ತರ ಕರ್ನಾಟಕದ ರೈತರ ಸಂಕಷ್ಟ ನೀರಾವರಿ ಸಮಸ್ಯೆಗಳ ಚರ್ಚೆಗೆ ಹೆಚ್ಚಿನ ಸಮಯ ಮೀಸಲಿಡಬೇಕಿದೆ. ಪ್ರತಿ ಬಾರಿ ಬೆಳಗಾವಿ ಅಧಿವೇಶನದಲ್ಲಿ ನಾಮಕಾವಾಸ್ತೆ  ಚರ್ಚೆ ನಡೆಯುತ್ತಿದೆ. ಈ ಬಾರಿ ಸಮಯ ವ್ಯರ್ಥ ಮಾಡಲು ಬರೀ ಭರವಸೆಗೆ ಸೀಮಿತವಾಗಲು ಬಿಡುವುದಿಲ್ಲ. ಅಧಿವೇಶನದ ಆರಂಭದ ದಿನಗಳಲ್ಲೇ ಉತ್ತರ ಕರ್ನಾಟಕದ ಸಮಸ್ಯೆಗಳನ್ನು ಚರ್ಚಿಸಲು ತೀರ್ಮಾನಿಸಿದ್ದೇವೆ. ಕಬ್ಬಿನ ಬೆಳೆಗಾರರು ಮೆಕ್ಕೆ ಜೋಳ ಬೆಳೆಯುವ ರೈತರ ಸಮಸ್ಯೆ ಪರಿಹಾರಕ್ಕೆ ಪಟ್ಟು ಹಿಡಿಯಲಾಗುವುದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.