ADVERTISEMENT

ಅಧಿವೇಶನ: ಉತ್ತರ ಕರ್ನಾಟಕ ಸಮಸ್ಯೆ ಚರ್ಚೆಗೆ ಒತ್ತಡ ಹಾಕಲು ಬಿಜೆಪಿ ನಿರ್ಧಾರ

ಬೆಳಗಾವಿ ಅಧಿವೇಶನ: ಜೆಡಿಎಸ್‌ ಜತೆ ಕಾರ್ಯತಂತ್ರ ರೂಪಿಸಲು ಬಿಜೆಪಿ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2025, 15:28 IST
Last Updated 15 ನವೆಂಬರ್ 2025, 15:28 IST
<div class="paragraphs"><p>ವಿಜಯೇಂದ್ರ</p></div>

ವಿಜಯೇಂದ್ರ

   

(ಸಂಗ್ರಹ ಚಿತ್ರ)

ಬೆಂಗಳೂರು: ಉತ್ತರ ಕರ್ನಾಟಕದ ಸಮಸ್ಯೆಗಳ ಕುರಿತು ಬೆಳಗಾವಿ ಅಧಿವೇಶನದ ಮೊದಲ ದಿನದಿಂದಲೇ ಅವಕಾಶ ನೀಡುವಂತೆ ಒತ್ತಡ ಹಾಕಲು, ಜೆಡಿಎಸ್‌ ಜತೆ ಸಮನ್ವಯ ಸಭೆ ನಡೆಸಿ ಕಾರ್ಯತಂತ್ರ ರೂಪಿಸಲು ಬಿಜೆಪಿ ನಾಯಕರ ಸಭೆ ನಿರ್ಧರಿಸಿದೆ.

ADVERTISEMENT

ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌.ಅಶೋಕ ಅಧ್ಯಕ್ಷತೆಯಲ್ಲಿ ಶನಿವಾರ ಸಭೆ ನಡೆಯಿತು. ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ, ಸಂಸದರಾದ ಬಸವರಾಜ ಬೊಮ್ಮಾಯಿ, ಗೋವಿಂದ ಕಾರಜೋಳ, ಮುಖ್ಯಸಚೇಕರಾದ ದೊಡ್ಡನಗೌಡ ಪಾಟೀಲ ಪಾಲ್ಗೊಂಡಿದ್ದರು.

ಅತಿವೃಷ್ಟಿಯಿಂದ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಬೆಳೆಹಾನಿಯಾಗಿದೆ. ಇದುವರೆಗೂ ಸರ್ಕಾರ ರೈತರಿಗೆ ಸೂಕ್ತ ಪರಿಹಾರ ಬಿಡುಗಡೆ ಮಾಡಿಲ್ಲ. ಕಬ್ಬು ಬೆಳೆಗಾರರ ಸಂಕಷ್ಟವನ್ನು ಸಂಪೂರ್ಣವಾಗಿ ಪರಿಹರಿಸಿಲ್ಲ. ಕೃಷ್ಣಾ ಮೇಲ್ದಂಡೆ ಮೂರನೇ ಹಂತದ ಪ್ರಕ್ರಿಯೆಗಳು ಆಮೆಗತಿಯಲ್ಲಿ ಸಾಗಿವೆ. ಭೂಸ್ವಾಧೀನ, ಭೂಪರಿಹಾರ ಕಾರ್ಯಗಳಿಗೆ ಅಗತ್ಯ ಅನುದಾನವನ್ನು ಬಿಡುಗಡೆ ಮಾಡದೆ ರಾಜ್ಯ ಸರ್ಕಾರ ಕಾಲಹರಣ ಮಾಡುತ್ತಿದೆ. ತುಂಗಭದ್ರಾ ಜಲಾಶಯದ ಕ್ರಸ್ಟ್‌ಗೇಟ್‌ಗಳ ದುರಸ್ತಿಯನ್ನು ಸಕಾಲದಲ್ಲಿ ಕೈಗೊಳ್ಳದೆ ಅಚ್ಚುಕಟ್ಟು ಪ್ರದೇಶದ ಎರಡು ಬೆಳೆ ನಷ್ಟವಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಸಾರಿಗೆ ವ್ಯವಸ್ಥೆ ಸಮರ್ಪಕವಾಗಿಲ್ಲ ಎಂಬುದೂ ಸೇರಿದಂತೆ ಶೈಕ್ಷಣಿಕ, ಆರೋಗ್ಯ, ರಸ್ತೆ ಮೊದಲಾದ ಜ್ವಲಂತ ಸಮಸ್ಯೆಗಳ ಕುರಿತು ವಿಸ್ತೃತ ಚರ್ಚೆ ನಡೆಸಲು ಸಮಯ ಮೀಸಲಿಡುವಂತೆ ಒತ್ತಡ ಹಾಕಲು ತೀರ್ಮಾನಿಸಿದ್ದಾರೆ.

ಉತ್ತರ ಕರ್ನಾಟಕದ ಸರ್ಕಾರಿ ಶಾಲೆಗಳು ದುರಸ್ತಿ, ಮಕ್ಕಳಿಗೆ ಶೂ, ಸಾಕ್ಸ್ ವಿತರಣೆ ವಿಳಂಬ. ಶಿಕ್ಷಣ ಸಂಸ್ಥೆಗಳ ವ್ಯಾ‍ಪ್ತಿಯಲ್ಲಿ ಮಾದಕ ದ್ರವ್ಯಗಳ ಮಾರಾಟ ಸೇರಿದಂತೆ ಸರ್ಕಾರಿ ಶಾಲೆಗಳ ಸಬಲೀಕರಣ ಹಾಗೂ ಗುಣಮಟ್ಟದ ಶಿಕ್ಷಣದ ಅಗತ್ಯತೆ ಕುರಿತು ವಿಧಾನಸಭಾಧ್ಯಕ್ಷರಿಗೆ ಪತ್ರ ಬರೆಯಲೂ ಸಭೆ ನಿರ್ಧರಿಸಿದೆ.

ಉತ್ತರ ಕರ್ನಾಟಕದ ಸಮಸ್ಯೆಗಳ ಜತೆಗೆ, ರಾಜ್ಯದ ಕಾನೂನು ಸುವ್ಯವಸ್ಥೆ, ಬೆಂಗಳೂರಿನ ರಸ್ತೆ ಗುಂಡಿಗಳು, ಸುರಂಗ ರಸ್ತೆ, ರಾಜ್ಯದಲ್ಲಿನ ಕಾರಾಗೃಹಗಳ ಅವ್ಯವಸ್ಥೆ, ಪರಪ್ಪನ ಅಗ್ರಹಾರ ಜೈಲಿನಲ್ಲಿ ಭಯೋತ್ಪಾದಕರಿಗೆ ವಿಶೇಷ ಸವಲತ್ತು ನೀಡುತ್ತಿರುವ ವಿಷಯಗಳನ್ನು ಕೈಗೆತ್ತಿಕೊಳ್ಳಲು ತೀರ್ಮಾನ ತೆಗೆದುಕೊಂಡಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.