ADVERTISEMENT

ಬೆಳಗಾವಿ| ಮೇಯರ್‌, ಉಪಮೇಯರ್‌; ಕೊನೆಕ್ಷಣದ ಕಸರತ್ತು

ಮೇಯರ್‌ಗಿಂತ ಉಪಮೇಯರ್‌ ಸ್ಥಾನದ ಆಯ್ಕೆಯೇ ರೋಚಕ

ಸಂತೋಷ ಈ.ಚಿನಗುಡಿ
Published 6 ಫೆಬ್ರುವರಿ 2023, 7:13 IST
Last Updated 6 ಫೆಬ್ರುವರಿ 2023, 7:13 IST
ಬೆಳಗಾವಿ ಮಹಾನಗರ ಪಾಲಿಕೆ ಆವರಣದಲ್ಲಿ ಸಿಬ್ಬಂದಿಯೊಬ್ಬರು ಮೇಯರ್‌ ಕಾರನ್ನು ಸಿದ್ಧಗೊಳಿಸಿದರು / ಪ್ರಜಾವಾಣಿ ಚಿತ್ರ: ಏಕನಾಥ ಅಗಸಿಮನಿ
ಬೆಳಗಾವಿ ಮಹಾನಗರ ಪಾಲಿಕೆ ಆವರಣದಲ್ಲಿ ಸಿಬ್ಬಂದಿಯೊಬ್ಬರು ಮೇಯರ್‌ ಕಾರನ್ನು ಸಿದ್ಧಗೊಳಿಸಿದರು / ಪ್ರಜಾವಾಣಿ ಚಿತ್ರ: ಏಕನಾಥ ಅಗಸಿಮನಿ   

ಬೆಳಗಾವಿ: ಬೆಳಗಾವಿ ಮೇಯರ್‌, ಉಪಮೇಯರ್‌ ಆಯ್ಕೆ ಚುನಾವಣೆಗೆ ಸಂಬಂಧಿಸಿದಂತೆ ನಗರದಲ್ಲಿ ಭಾನುವಾರ ಇಡೀ ದಿನ ತುರುಸಿನ ಚಟುವಟಿಕೆಗಳು ನಡೆದವು. ಮೇಯರ್‌ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದರಿಂದ ಆಕಾಂಕ್ಷಿಗಳು ಒಬ್ಬರಿಗಿಂತ ಒಬ್ಬರು ಉಮೇದಿನಲ್ಲಿದ್ದಾರೆ. ಉಪ ಮೇಯರ್‌ ಸ್ಥಾನಕ್ಕೂ ಬಿಜೆಪಿ, ಕಾಂಗ್ರೆಸ್‌ ಹಾಗೂ ಎಂಇಎಸ್‌ಗಳಲ್ಲಿ ಇನ್ನಿಲ್ಲದ ಕಸರತ್ತು ನಡೆದವು.

ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ನಿರ್ಮಲ್‌ಕುಮಾರ್‌ ಸುರಾನಾ ನೇತೃತ್ವದಲ್ಲಿ ಶಾಸಕರಾದ ಅಭಯ ಪಾಟೀಲ, ಅನಿಲ ಬೆನಕೆ ಹಾಗೂ ಬಿಜೆಪಿ ಜಿಲ್ಲಾ ಘಟಕದ ಮುಖಂಡರು ರಾತ್ರಿ ಕೋರ್ ಕಮಿಟಿ ಸಭೆ ನಡೆಸಿದರು. ಅವಿರೋಧ ಆಯ್ಕೆಗೆ ಯಾರೂ ಸಿದ್ಧವಾಗದ ಕಾರಣ ಸೋಮವಾರ ಮತದಾನ ನಡೆಯುವುದು ಬಹುತೇಕ ಖಚಿತವಾಗಿದೆ.

ಮೇಯರ್‌ ಸ್ಥಾನ ‘ಸಾಮಾನ್ಯ ಮಹಿಳೆ’ ಮತ್ತು ಉಪಮೇಯರ್‌ ‘ಹಿಂದುಳಿದ ವರ್ಗ ಬಿ ಮಹಿಳೆ’ಗೆ ಮೀಸಲಾಗಿದೆ.‌ 58 ವಾರ್ಡ್‌ಗಳಿಗೆ ನಡೆದ ಚುನಾವಣೆಯಲ್ಲಿ 35 ಸ್ಥಾನಗಳೊಂದಿಗೆ ಬಿಜೆಪಿ ಬಹುಮತ ಗಳಿಸಿದೆ. ಕಾಂಗ್ರೆಸ್ 10, ಎಐಎಂಐಎಂ 1 ಸ್ಥಾನ ಗೆದ್ದರೆ, 12 ವಾರ್ಡ್‌ಗಳಲ್ಲಿ ಪಕ್ಷೇತರರು ಗೆಲುವು ಸಾಧಿಸಿವೆ. ಪಕ್ಷೇತರವಾಗಿ ಗೆದ್ದ 12 ಮಂದಿಯಲ್ಲಿ ಇಬ್ಬರು ಬಿಜೆಪಿ ಪರವಾಗಿ ಮತ್ತೆ ಇಬ್ಬರು ಎಂಇಎಸ್‌ ಬೆಂಬಲಿತರಾಗಿ ನಿಂತಿದ್ದಾರೆ.

ADVERTISEMENT

ಉಪಮೇಯರ್‌ಗೂ ಕಸರತ್ತು: ಉಪಮೇಯರ್‌ ಮೀಸಲಾತಿಗೆ ಬಿಜೆಪಿಯಲ್ಲಿ ರೇಷ್ಮಾ ಪಾಟೀಲ ಅರ್ಹ ಇದ್ದು, ಈಗಾಗಲೇ ಹಿಂದುಳಿದ ವರ್ಗ ಬ–ಮಹಿಳೆ ಪ್ರಮಾಣ ಪತ್ರ ಕೂಡ ತೆಗೆಸಿಟ್ಟುಕೊಂಡಿದ್ದಾರೆ ಎಂದು ಬಿಜೆಪಿ ಮೂಲಗಳು ಹೇಳುತ್ತವೆ. ಆದರೆ, ರೇಷ್ಮಾ ಅವರು ದೊಡ್ಡ ಮೊತ್ತದ ತೆರಿಗೆ ಪಾವತಿದಾರರಿದ್ದಾರೆ. ಹಾಗಾಗಿ, ಅವರಿಗೆ ಮೀಸಲಾತಿ ಪ್ರಮಾಣ ಪತ್ರ ಅನ್ವಯ ಆಗುವುದಿಲ್ಲ ಎನ್ನುವುದು ಕಾಂಗ್ರೆಸ್‌ ನಾಯಕರ ವಾದ. ಇದರ ಬಲಾಬಲ ಏನಾಗುತ್ತದೆ ಎನ್ನುವುದು ಪಾಲಿಕೆಯಲ್ಲಿ ನಡೆಯುವ ಚುನಾವಣೆ ವೇಳೆ ಗೊತ್ತಾಗಲಿದೆ.

*

ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ

ಬಿಜೆಪಿಯಲ್ಲಿ ಮೇಯರ್‌ ಸ್ಥಾನ ನಿಚ್ಛಳವಾಗಿದ್ದರೂ 12 ಮಹಿಳಾ ಮಣಿಗಳ ಪೈಕಿ ಯಾರನ್ನು ಆಯ್ಕೆ ಮಾಡಬೇಕು ಎಂಬುದು ಇನ್ನೂ ನಿಗೂಢವಾಗಿದೆ. ಆದರೆ, ಉಪ ಮೇಯರ್‌ ಸ್ಥಾನಕ್ಕೆ ಒಬ್ಬ ಮರಾಠಿ ಭಾಷಿಕರನ್ನು ಆಯ್ಕೆ ಮಾಡುವ ಕುರಿತೂ ಚರ್ಚೆ ನಡೆದಿವೆ.

ಸದ್ಯ ಎಂಇಎಸ್‌ನಿಂದ ಆಯ್ಕೆಯಾದ ವೈಶಾಲಿ ಭಾತಖಾಂಡೆ, ಕಾಂಗ್ರೆಸ್‌ನ ಜ್ಯೋತಿ ಕಡೋಲ್ಕರ್‌ ಹಿಂದುಳಿದ ವರ್ಗ ಬ ಮೀಸಲಾತಿ ಹೊಂದಿದ್ದಾರೆ. ಹೀಗಾಗಿ, ತೆರೆಮರೆಯಲ್ಲಿ ಇಬ್ಬರೂ ಯತ್ನ ನಡೆಸಿದ್ದಾರೆ.

ಸದ್ಯ ಮೇಯರ್‌ ಹಾಗೂ ಉಪಮೇಯರ್‌ ಸ್ಥಾನಗಳ ಆಯ್ಕೆ ಮುಂದಿನ ವಿಧಾನಸಭಾ ಚುನಾವಣೆ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ. ಬೆಳಗಾವಿ ಉತ್ತರ ಹಾಗೂ ಗ್ರಾಮೀಣ ಕ್ಷೇತ್ರಗಳಲ್ಲಿ ಮರಾಠಿ ಮತದಾರರ ಸಂಖ್ಯೆಯೇ ದೊಡ್ಡದು. ಹೀಗಾಗಿ, ಮರಾಠಿ ಮಹಿಳೆಯನ್ನೇ ಉಪಮೇಯರ್‌ ಆಗಿ ಆಯ್ಕೆ ಮಾಡುವ ತಂತ್ರವನ್ನು ಮೂರೂ ಪಕ್ಷಗಳು ನಡೆಸಿವೆ.

ಎಂಇಎಸ್‌ನ ವೈಶಾಲಿ ಅವರಿಗೆ ಬೆಂಬಲ ನೀಡುವ ಮೂಲಕ ಈ ಎರಡೂ ವಿಧಾನಸಭಾ ಕ್ಷೇತ್ರಗಳಲ್ಲಿ ಮರಾಠಿ ಮತಗಳನ್ನು ಸೆಳೆಯಬೇಕು ಎಂಬುದು ಕಾಂಗ್ರೆಸ್‌ ತಂತ್ರ.

ಈ ಗಾಳಕ್ಕೆ ಬಿಜೆಪಿಯ ಘಟಾನುಘಟಿ ನಾಯಕರು ಅವಕಾಶ ಕೊಡುತ್ತಾರೆ ಎಂಬುದು ಸೋಮವಾರ ಬಹಿರಂಗವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.