ADVERTISEMENT

ಬಳ್ಳಾರಿಯ ಮೂವರು ಕಾಂಗ್ರೆಸ್‌ ಶಾಸಕರು ಸಂಪರ್ಕದಲ್ಲಿ ಇಲ್ಲ: ಸಂಸದ ಉಗ್ರಪ್ಪ

​ಪ್ರಜಾವಾಣಿ ವಾರ್ತೆ
Published 15 ಜನವರಿ 2019, 13:51 IST
Last Updated 15 ಜನವರಿ 2019, 13:51 IST
   

ಹೊಸಪೇಟೆ: ‘ಬಳ್ಳಾರಿ ಜಿಲ್ಲೆಯ ಮೂವರು ಶಾಸಕರು ಎರಡು ದಿನಗಳಿಂದ ನನ್ನ ಸಂಪರ್ಕಕ್ಕೆ ಸಿಕ್ಕಿಲ್ಲ’ ಎಂದು ಸಂಸದ ವಿ.ಎಸ್‌. ಉಗ್ರಪ್ಪ ತಿಳಿಸಿದರು.

ಮಕರ ಸಂಕ್ರಮಣದ ನಿಮಿತ್ತ ಮಂಗಳವಾರ ಹಂಪಿ ವಿರೂಪಾಕ್ಷೇಶ್ವರನ ದರ್ಶನ ಪಡೆದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

‘ಎರಡು ದಿನಗಳ ಹಿಂದೆ ಶಾಸಕರಾದ ಭೀಮಾ ನಾಯ್ಕ, ಜೆ.ಎನ್‌. ಗಣೇಶ್‌ ನನ್ನ ಸಂಪರ್ಕದಲ್ಲಿ ಇದ್ದರು. ಆದರೆ, ಅದಾದ ನಂತರ ಸಂಪರ್ಕಕ್ಕೆ ಸಿಕ್ಕಿಲ್ಲ. ಶಾಸಕ ಬಿ. ನಾಗೇಂದ್ರ ಅವರ ಮೊಬೈಲ್‌ ಯಥಾರೀತಿಯಂತೆ ಸ್ವಿಚ್‌ ಆಫ್‌ ಆಗಿದೆ. ಆದರೆ, ಯಾರು ಪಕ್ಷ ಬಿಡುವುದಿಲ್ಲ. ಸಂಕ್ರಾಂತಿ ಹಬ್ಬದ ನಿಮಿತ್ತ ನನ್ನಂತೆ ಅವರು ಕೂಡ ಎಲ್ಲಿಗಾದರೂ ದೇವರ ದರ್ಶನಕ್ಕೆ ಹೋಗಿರಬಹುದು’ ಎಂದು ಹೇಳಿದರು.

ADVERTISEMENT

‘ಬಿಜೆಪಿಯ ಆಪರೇಷನ್‌ ಕಮಲ ಯಶಸ್ವಿಯಾಗುವುದಿಲ್ಲ. ರಾಜ್ಯದ ಸಮ್ಮಿಶ್ರ ಸರ್ಕಾರ ಐದು ವರ್ಷ ಪೂರೈಸುತ್ತದೆ. ರಾಜ್ಯದ ಜನ ಪ್ರಬುದ್ಧರು. ಬರುವ ದಿನಗಳಲ್ಲಿ ಬಿಜೆಪಿಗೆ ತಕ್ಕ ಪಾಠ ಕಲಿಸುತ್ತಾರೆ. ವಾಮ ಮಾರ್ಗದಲ್ಲಿ ಅಧಿಕಾರ ಹಿಡಿಯಬೇಕೆಂಬ ಬಿಜೆಪಿಯ ಕನಸು ಈಡೇರುವುದಿಲ್ಲ’ ಎಂದರು.

ಭೀಮಾ ನಾಯ್ಕ ಹಗರಿ ಬೊಮ್ಮನಹಳ್ಳಿ ಶಾಸಕ, ಜೆ.ಎನ್.ಗಣೇಶ್ ಕಂಪ್ಲಿ ಶಾಸಕರಾಗಿದ್ದಾರೆ. ನಾಗೇಂದ್ರ ಬಳ್ಳಾರಿ ಗ್ರಾಮಾಂತರ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.