ADVERTISEMENT

ಕರ್ನಾಟಕ– ಆಂಧ್ರ ಗಡಿ ಗುರುತಿಗೆ 6 ವಾರ ಗಡುವು: ಗಣಿಗಾರಿಕೆಯಿಂದ ನಾಶವಾಗಿತ್ತು

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2022, 22:37 IST
Last Updated 2 ಅಕ್ಟೋಬರ್ 2022, 22:37 IST
ಬಳ್ಳಾರಿ
ಬಳ್ಳಾರಿ    

ಬೆಂಗಳೂರು: ಬಳ್ಳಾರಿ ಮೀಸಲು ಅರಣ್ಯದ ವ್ಯಾಪ್ತಿಯಲ್ಲಿ ಅಕ್ರಮ ಗಣಿಗಾರಿಕೆಯಿಂದ ನಾಶವಾಗಿರುವ ಕರ್ನಾಟಕ ಮತ್ತು ಆಂಧ್ರಪ್ರದೇಶದ ನಡುವಣ ಅಂತರ ರಾಜ್ಯ ಗಡಿಯ ಗುರುತುಗಳನ್ನು ಆರು ವಾರಗಳ ಒಳಗೆ ಸ್ಥಳದಲ್ಲೇ ನಿಖರವಾಗಿ ಗುರುತಿಸುವಂತೆ ಸುಪ್ರೀಂ ಕೋರ್ಟ್‌ ನಿರ್ದೇಶನ ನೀಡಿದೆ.

ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಧಾರವಾಡದ ಸಮಾಜ ಪರಿವರ್ತನಾ ಸಮುದಾಯ (ಎಸ್‌ಪಿಎಸ್‌) ಮತ್ತು ಇತರರು 2009 ರಲ್ಲಿ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಕೆ.ಎಂ. ಜೋಸೆಫ್‌, ಅನಿರುದ್ಧ ಬೋಸ್‌ ಮತ್ತು ಹೃಷಿಕೇಶ್‌ ರಾಯ್‌ ಅವರಿದ್ದ ತ್ರಿಸದಸ್ಯ ಪೀಠ, ಸೆಪ್ಟೆಂಬರ್‌ 28 ರಂದು ಈ ಆದೇಶ ಹೊರಡಿಸಿದೆ.

ಬಳ್ಳಾರಿ ಜಿಲ್ಲೆಯ ತುಮಟಿ, ವಿಠಲಾಪುರ ಮತ್ತು ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಎಚ್‌. ಸಿದ್ದಾಪುರ ಹಾಗೂ ಮಲಪನಗುಡಿ ಗ್ರಾಮಗಳು ಸಂಧಿಸುವ ‘ಟ್ರೈ ಜಂಕ್ಷನ್‌’ ಬಿಂದುವಿನಲ್ಲಿ ಅಂತರ ರಾಜ್ಯ ಗಡಿ ಹಾದು
ಹೋಗಿದೆ. ಗಡಿಯ ಎರಡೂ ಭಾಗದಲ್ಲಿ ಕರ್ನಾಟಕ ಮತ್ತು ಆಂಧ್ರಪ್ರದೇಶ ರಾಜ್ಯಗಳ ಗಣಿ ಪ್ರದೇಶಗಳಿವೆ. ಗಣಿ ಪ್ರದೇಶದ ಮಧ್ಯೆ ಹಾದು ಹೋಗಿದ್ದ ಗಡಿಯ ಗುರುತುಗಳು ನಾಶವಾಗಿರುವುದು ವರದಿಯಾಗಿ 15 ವರ್ಷಗಳು ಕಳೆದಿವೆ. ಈಗ ಸುಪ್ರೀಂ ಕೋರ್ಟ್‌ ಆದೇಶದಿಂದಾಗಿ ಅಲ್ಲಿ ಅಂತರ ರಾಜ್ಯ ಗಡಿಯನ್ನು ಮರು ಗುರುತಿಸುವ ಪ್ರಕ್ರಿಯೆ ಅಂತಿಮಗೊಳ್ಳಲಿದೆ.

ADVERTISEMENT

ಆಂಧ್ರಪ್ರದೇಶದಲ್ಲಿರುವ ಓಬಳಾಪುರಂ ಗಣಿ ಕಂಪನಿಯ ಗಣಿ ಗುತ್ತಿಗೆ ಪ್ರದೇಶಗಳನ್ನು ಖರೀದಿಸಿದ್ದ ರಾಜ್ಯದ ಆಗಿನ ಸಚಿವ ಜಿ. ಜನಾರ್ದನ ರೆಡ್ಡಿ ಕುಟುಂಬ, ಅಂತರ ರಾಜ್ಯ ಗಡಿ ಗುರುತುಗಳನ್ನೇ ಸ್ಫೋಟಿಸಿ, ರಾಜ್ಯದ ಭೂಪ್ರದೇಶವನ್ನು ಅತಿಕ್ರಮಿಸಿ ಅಕ್ರಮ ಗಣಿಗಾರಿಕೆ ನಡೆಸಿದ ಆರೋಪ 2007 ರಲ್ಲಿ ಕೇಳಿಬಂದಿತ್ತು. ಅಕ್ರಮ ಗಣಿಗಾರಿಕೆ ಕುರಿತು ತನಿಖೆ ನಡೆಸಿದ್ದ ಹಿಂದಿನ ಲೋಕಾಯುಕ್ತ ಎನ್‌. ಸಂತೋಷ್‌ ಹೆಗ್ಡೆ ಅವರು, ‘ಅಂತರ ರಾಜ್ಯ ಗಡಿ ಗುರುತು ನಾಶದ ಕುರಿತು ಉಭಯ ರಾಜ್ಯಗಳ ಸಹಭಾಗಿತ್ವದಲ್ಲಿ ತನಿಖೆ ನಡೆಸುವ ಅಗತ್ಯವಿದೆ’ ಎಂದು ಶಿಫಾರಸು ಮಾಡಿದ್ದರು.

ಸುಪ್ರೀಂ ಕೋರ್ಟ್‌ ಆದೇಶದಂತೆ ತನಿಖೆ ನಡೆಸಿದ್ದ ಕೇಂದ್ರ ಉನ್ನತಾಧಿಕಾರ ಸಮಿತಿ (ಸಿಇಸಿ), ಅಕ್ರಮ ಗಣಿಗಾರಿಕೆಯಿಂದ ಅಂತರ ರಾಜ್ಯ ಗಡಿ ಗುರುತುಗಳು ನಾಶವಾಗಿರುವುದನ್ನು ದೃಢಪಡಿಸಿತ್ತು. ಕರ್ನಾಟಕ ಮತ್ತು ಆಂಧ್ರಪ್ರದೇಶ ಸರ್ಕಾರಗಳ ಸಹಭಾಗಿತ್ವದೊಂದಿಗೆ ಅಂತರ ರಾಜ್ಯ ಗಡಿಯನ್ನು ಗುರುತಿಸುವಂತೆ ಸರ್ವೇ ಆಫ್‌ ಇಂಡಿಯಾಕ್ಕೆ ಸುಪ್ರೀಂ ಕೋರ್ಟ್‌ 2010 ರಿಂದ ಹಲವು ಬಾರಿ ಆದೇಶಿಸಿತ್ತು. ಆದರೆ, ಹತ್ತು ವರ್ಷಗಳ ಬಳಿಕ 2020ರ ಅಕ್ಟೋಬರ್‌ನಲ್ಲಿ ಗಡಿ ಗುರುತಿಸುವ ಪ್ರಕ್ರಿಯೆ ಆರಂಭವಾಗಿತ್ತು.

ಗಡಿ ಗುರುತಿಸುವ ಪ್ರಕ್ರಿಯೆ ಆರಂಭವಾದ ಬಳಿಕವೂ ಕರ್ನಾಟಕ ಮತ್ತು ಆಂಧ್ರಪ್ರದೇಶ ಅಧಿಕಾರಿಗಳ ತಂಡಗಳ ನಡುವೆ ಹಲವು ಬಾರಿ ಒಮ್ಮತ ಮೂಡಿರಲಿಲ್ಲ. 2021ರ ಫೆಬ್ರುವರಿಯಲ್ಲಿ ಸಮೀಕ್ಷೆ ಪೂರ್ಣಗೊಳಿಸಿ, ಅಂತಿಮಗೊಳಿಸಿದ್ದ ನಕ್ಷೆಗೆ ಸರ್ವೇ ಆಫ್‌ ಇಂಡಿಯಾ ಹಾಗೂ ಆಂಧ್ರಪ್ರದೇಶದ ಅಧಿಕಾರಿಗಳು ಸಹಿ ಮಾಡಿದ್ದರು. ‘ಕರ್ನಾಟಕದ ಪರವಾಗಿ ನಕ್ಷೆಗೆ ಸಹಿ ಪಡೆಯಲು ಇನ್ನೂ ಸಾಧ್ಯವಾಗಿಲ್ಲ’ ಎಂದು ಕೇಂದ್ರ ಸರ್ಕಾರದ ಪರ ವಕೀಲರು ಜುಲೈ 21 ರಂದು ನಡೆದ ವಿಚಾರಣೆಯಲ್ಲಿ ಸುಪ್ರೀಂ ಕೋರ್ಟ್‌ಗೆ ತಿಳಿಸಿದ್ದರು.

ಸೆ.28 ರಂದು ರಾಜ್ಯದ ಪರವಾಗಿ ವಿಚಾರಣೆಗೆ ಹಾಜರಾಗಿದ್ದ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ನಿಖಿಲ್‌ ಗೋಯಲ್‌, ಕರ್ನಾಟಕ– ಆಂಧ್ರಪ್ರದೇಶ ಅಂತರರಾಜ್ಯ ಗಡಿ ಹಾದುಹೋಗಿರುವ ಸ್ಥಳದಲ್ಲಿ ಗುರುತುಗಳನ್ನು ಅಳವಡಿಸಲು ಆರು ವಾರಗಳ ಕಾಲಾವಕಾಶ ಕೋರಿದ್ದರು. ಅದನ್ನು ಸುಪ್ರೀಂ ಕೋರ್ಟ್‌ ಮಾನ್ಯ ಮಾಡಿದೆ.

ಏಳು ಗಣಿಗಳ ಸರ್ವೆಗೆ ಆದೇಶ

ಕರ್ನಾಟಕ– ಆಂಧ್ರಪ್ರದೇಶ ಅಂತರ ರಾಜ್ಯ ಗಡಿಗೆ ಹೊಂದಿಕೊಂಡಂತೆ ರಾಜ್ಯದ ಭೂ ಭಾಗದಲ್ಲಿರುವ ಏಳು ಗಣಿಗಳನ್ನು ಸಮಗ್ರವಾಗಿ ಸರ್ವೆ ಮಾಡಿ, ವರದಿ ಸಲ್ಲಿಸುವಂತೆ ಈ ಹಿಂದೆ ಸುಪ್ರೀಂ ಕೋರ್ಟ್‌ ನೇಮಿಸಿದ್ದ ‘ಜಂಟಿ ತಂಡ’ಕ್ಕೆ ತ್ರಿಸದಸ್ಯ ಪೀಠ ನಿರ್ದೇಶನ ನೀಡಿದೆ. ಸಿಇಸಿ ಶಿಫಾರಸಿನಂತೆ ‘ಬಿ–1’ ದರ್ಜೆಯಲ್ಲಿ ಗುರುತಿಸಿರುವ ಈ ಗಣಿಗಳ ಗುತ್ತಿಗೆ ಪ್ರದೇಶ, ಗಣಿಗಾರಿಕೆ, ಅತಿಕ್ರಮಣದ ಕುರಿತು ಅಂತರ ರಾಜ್ಯ ಗಡಿ ಗುರುತಿಸಿದ ದಿನದಿಂದ ಮೂರು ತಿಂಗಳೊಳಗೆ ಸರ್ವೆ ಪೂರ್ಣಗೊಳಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.