ADVERTISEMENT

PV Web Exclusive: ತಾರ್ಕಿಕ ಅಂತ್ಯದತ್ತ ಬಳ್ಳಾರಿ ಅಂತರರಾಜ್ಯ ಗಡಿ ವಿವಾದ

ಗಡಿ ಗುರುತು ಧ್ವಂಸವಾಗಿ 12 ವರ್ಷ ಕಳೆದ ಬಳಿಕ ಮರುಸ್ಥಾಪನೆ ಆರಂಭ

ವಿ.ಎಸ್.ಸುಬ್ರಹ್ಮಣ್ಯ
Published 15 ಅಕ್ಟೋಬರ್ 2020, 11:51 IST
Last Updated 15 ಅಕ್ಟೋಬರ್ 2020, 11:51 IST
ಬಳ್ಳಾರಿ ಮೀಸಲು ಅರಣ್ಯದಲ್ಲಿ ಹಾದುಹೋಗಿರುವ ಕರ್ನಾಟಕ– ಆಂಧ್ರಪ್ರದೇಶ ಅಂತರರಾಜ್ಯ ಗಡಿಯಲ್ಲಿ ತುಮಟಿ– ವಿಠಲಾಪುರ ಗ್ರಾಮದ ‘ಟ್ರೈಜಂಕ್ಷನ್‌’ ಬಿಂದುವಿನಲ್ಲಿ ಇದ್ದ ಗಡಿ ಗುರುತು
ಬಳ್ಳಾರಿ ಮೀಸಲು ಅರಣ್ಯದಲ್ಲಿ ಹಾದುಹೋಗಿರುವ ಕರ್ನಾಟಕ– ಆಂಧ್ರಪ್ರದೇಶ ಅಂತರರಾಜ್ಯ ಗಡಿಯಲ್ಲಿ ತುಮಟಿ– ವಿಠಲಾಪುರ ಗ್ರಾಮದ ‘ಟ್ರೈಜಂಕ್ಷನ್‌’ ಬಿಂದುವಿನಲ್ಲಿ ಇದ್ದ ಗಡಿ ಗುರುತು   
""
""
""

ಬೆಂಗಳೂರು: ಒಂದು ದಶಕದ ಕಾಲ ರಾಜ್ಯ ರಾಜಕಾರಣವನ್ನೇ ಅಲ್ಲೋಲಕಲ್ಲೋಲ ಮಾಡಿದ ಬಳ್ಳಾರಿಯ ಗಣಿ ಹಗರಣಕ್ಕೂ ಕರ್ನಾಟಕ– ಆಂಧ್ರಪ್ರದೇಶ ಅಂತರರಾಜ್ಯ ಗಡಿ ಧ್ವಂಸ ಪ್ರಕರಣಕ್ಕೂ ನಿಕಟ ನಂಟು. ಮಾಜಿ ಸಚಿವ ಜಿ. ಜನಾರ್ದನ ರೆಡ್ಡಿ ಒಡೆತನದ ಓಬಳಾಪುರಂ ಗಣಿ ಕಂಪನಿ (ಓಎಂಸಿ) ಬಳ್ಳಾರಿ ಮೀಸಲು ಅರಣ್ಯದಲ್ಲಿ ಹಾದುಹೋಗಿರುವ ಅಂತರರಾಜ್ಯ ಗಡಿಯ ಗುರುತುಗಳನ್ನೇ ಸ್ಫೋಟಿಸಿ ಧ್ವಂಸ ಮಾಡಿದ ಪ್ರಕರಣ ಬಯಲಿಗೆ ಬಂದು 12 ವರ್ಷಗಳಾಗುತ್ತಿವೆ. ಸುದೀರ್ಘ ಕಾನೂನು ಹೋರಾಟದ ಬಳಿಕ ಅಂತರಾಜ್ಯ ಗಡಿ ಗುರುತಿಸುವ ಕೆಲಸ ಶುಕ್ರವಾರ ಮತ್ತೆ ಆರಂಭವಾಗಲಿದ್ದು, ವಿವಾದಕ್ಕೆ ತಾರ್ಕಿಕ ಅಂತ್ಯ ದೊರಕುವ ನಿರೀಕ್ಷೆ ಮೂಡಿದೆ.

ಬಳ್ಳಾರಿ ಜಿಲ್ಲೆಯ ತುಮಟಿ, ವಿಠಲಾಪುರ ಮತ್ತು ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಎಚ್‌. ಸಿದ್ದಾಪುರ ಹಾಗೂ ಮಲಪನಗುಡಿ ಗ್ರಾಮಗಳು ಸಂಧಿಸುವ ‘ಟ್ರೈ ಜಂಕ್ಷನ್‌’ ಬಿಂದುವಿನಲ್ಲಿ ಅಂತರರಾಜ್ಯ ಗಡಿ ಹಾದುಹೋಗಿದೆ. ಗಡಿಯ ಎರಡೂ ಭಾಗದಲ್ಲಿ ಕರ್ನಾಟಕ ಮತ್ತು ಆಂಧ್ರಪ್ರದೇಶ ರಾಜ್ಯಗಳ ಗಣಿ ಕ್ಲಸ್ಟರ್‌ಗಳಿವೆ. ಆಂಧ್ರಪ್ರದೇಶ ರಾಜ್ಯದ ಕ್ಲಸ್ಟರ್‌ನಲ್ಲಿದ್ದ ಓಬಳಾಪುರಂ ಗಣಿ ಕಂಪನಿಯನ್ನು ಖರೀದಿಸಿದ್ದ ಜನಾರ್ದನ ರೆಡ್ಡಿ ಕುಟುಂಬ, ಆ ಭಾಗದಿಂದ ರಾಜ್ಯದ ಭೂ ಪ್ರದೇಶವನ್ನೂ ಒತ್ತುವರಿ ಮಾಡಿ ಗಣಿಗಾರಿಕೆ ನಡೆಸಿದ್ದ ಆರೋಪ 2007ರಿಂದಲೂ ವ್ಯಕ್ತವಾಗಿತ್ತು.

ಜನಾರ್ದನ ರೆಡ್ಡಿ

2008ರ ಅಕ್ಟೋಬರ್‌ನಲ್ಲಿ ವಿಧಾನಪರಿಷತ್‌ನ ಆಗಿನ ವಿರೋಧ ಪಕ್ಷದ ನಾಯಕ ವಿ.ಎಸ್‌. ಉಗ್ರಪ್ಪ ನೇತೃತ್ಬದ ಸತ್ಯಶೋಧನಾ ಸಮಿತಿ ಅಂತರರಾಜ್ಯ ಗಡಿ ಪ್ರದೇಶಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿತ್ತು. ನವೆಂಬರ್‌ ತಿಂಗಳಲ್ಲಿ ಸತ್ಯಶೋಧನಾ ವರದಿಯೊಂದನ್ನು ಬಿಡುಗಡೆ ಮಾಡಿದ್ದ ಸಮಿತಿ, ಜನಾರ್ದನ ರೆಡ್ಡಿ ಒಡೆತನದ ಓಎಂಸಿ ಗಣಿ ಗುರುತುಗಳನ್ನು ನಾಶ ಮಾಡಿರುವುದಲ್ಲದೇ ಅಂತರಾಜ್ಯ ಗಡಿಯಲ್ಲಿದ್ದ ಐತಿಹಾಸಿಕ ಸುಗ್ಗಲಮ್ಮ ದೇವಿಯ ದೇವಸ್ಥಾನವನ್ನೂ ಸ್ಫೋಟಿಸಿದೆ ಎಂದು ಬಹಿರಂಗಪಡಿಸಿತ್ತು.

ADVERTISEMENT

ಅದೇ ಸಮಯದಲ್ಲಿ ಆಗಿನ ಲೋಕಾಯುಕ್ತ ಎನ್‌. ಸಂತೋಷ್‌ ಹೆಗ್ಡೆ ಅವರು ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದ ಮೊದಲ ವರದಿಯನ್ನು ನೀಡಿದ್ದರು. ಹಿರಿಯ ಐಎಫ್‌ಎಸ್‌ ಅಧಿಕಾರಿ ಯು.ವಿ. ಸಿಂಗ್‌ ಅವರು ತಮ್ಮ ವರದಿಯಲ್ಲಿ ಅಂತರರಾಜ್ಯ ಗಡಿಯಲ್ಲಿ ಒತ್ತುವರಿ ಆಗಿರುವ ಕುರಿತು ಸಂಶಯ ವ್ಯಕ್ತಪಡಿಸಿದ್ದರು. ‘ಪ್ರಕರಣದಲ್ಲಿ ಎರಡು ರಾಜ್ಯಗಳ ವಿಷಯ ಅಡಕವಾಗಿರುವುದರಿಂದ ಕೇಂದ್ರ ಮತ್ತು ಎರಡೂ ರಾಜ್ಯ ಸರ್ಕಾರಗಳ ಸಹಭಾಗಿತ್ವದಲ್ಲಿ ಪರಿಶೀಲನೆ ನಡೆಸಬೇಕು’ ಎಂದು ಸಂತೋಷ್‌ ಹೆಗ್ಡೆ ಶಿಫಾರಸು ಮಾಡಿದ್ದರು.

ಸುಪ್ರೀಂಕೋರ್ಟ್‌ನಲ್ಲಿ ಪ್ರಕರಣ:

ಅದೇ ಸಮಯ ಆಂಧ್ರಪ್ರದೇಶದಲ್ಲಿ ನಡೆದಿದ್ದ ಅಕ್ರಮ ಗಣಿಗಾರಿಕೆ ಕುರಿತು ಅಲ್ಲಿನ ಸರ್ಕಾರ ಸಿಬಿಐ ತನಿಖೆಗೆ ಆದೇಶಿಸಿತ್ತು. ರಾಜ್ಯದಲ್ಲಿ ನಡೆದಿರುವ ಅಕ್ರಮಗಳ ಬಗ್ಗೆಯೂ ಸಿಬಿಐ ತನಿಖೆಗೆ ಆದೇಶಿಸುವಂತೆ ಧಾರವಾಡದ ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್‌.ಆರ್‌. ಹಿರೇಮಠ ಸುಪ್ರೀಂಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ತುಮಟಿ ಗ್ರಾಮದಲ್ಲಿ ಗಣಿ ಗುತ್ತಿಗೆ ಹೊಂದಿರುವ ಟಪಾಲ್‌ ನಾರಾಯಣ ರೆಡ್ಡಿ ಅವರ ಮಗ ಟಪಾಲ್‌ ಗಣೇಶ್‌ ಕೂಡ ಮಧ್ಯಂತರ ಅರ್ಜಿ ಸಲ್ಲಿಸಿದ್ದರು.

ಆ ಬಳಿಕ ಸುಪ್ರೀಂ ಕೋರ್ಟ್‌ ಆದೇಶದಂತೆ ತನಿಖೆ ನಡೆಸಿದ್ದ ಕೇಂದ್ರ ಉನ್ನತಾಧಿಕಾರ ಸಮಿತಿ (ಸಿಇಸಿ) ಕೂಡ ಅಂತರರಾಜ್ಯ ಗಡಿ ಗುರುತುಗಳನ್ನು ನಾಶ ಮಾಡಿ, ಗಣಿಗಾರಿಕೆ ನಡೆಸಿರುವುದನ್ನು ದೃಢಪಡಿಸಿತ್ತು. ಆದರೆ, ಆರಂಭಿಕ ಹಂತದಲ್ಲಿ ಸುಪ್ರೀಂಕೋರ್ಟ್‌ ಈ ವರದಿಯನ್ನು ಸ್ವೀಕರಿಸಿರಲಿಲ್ಲ. ಅಂತರರಾಜ್ಯ ಗಡಿಯನ್ನು ನಿಖರವಾಗಿ ಗುರುತಿಸಿ ವರದಿ ನೀಡುವಂತೆ 2012ರಿಂದಲೂ ಸುಪ್ರೀಂಕೋರ್ಟ್‌ ಹಲವು ಬಾರಿ ಆದೇಶ ಹೊರಡಿಸಿತ್ತು. ಸರ್ವೆ ಆಫ್‌ ಇಂಡಿಯಾ, ಕರ್ನಾಟಕ ಮತ್ತು ಆಂಧ್ರಪ್ರದೇಶ ರಾಜ್ಯಗಳ ಕಂದಾಯ ಇಲಾಖೆಗಳ ನಡುವಿನ ಸಮನ್ವಯದ ಕೊರೆತೆಯಿಂದ ಸರ್ವೆ, ಗಡಿ ಗುರುತಿಸುವ ಕೆಲಸ ಬಾಕಿ ಉಳಿದಿತ್ತು.

2018ರಿಂದ ಚುರುಕು:

2018ರ ಸೆಪ್ಟೆಂಬರ್‌ 17ರಂದು ಮತ್ತೊಂದು ಆದೇಶ ಹೊರಡಿಸಿದ್ದ ಸುಪ್ರೀಂ ಕೋರ್ಟ್‌, ನಿಗದಿತ ಕಾಲಮಿತಿಯೊಳಗೆ ಗಡಿ ಗುರುತಿಸಿ ವರದಿ ನೀಡುವಂತೆ ನಿರ್ದೇಶನ ನೀಡಿತ್ತು. ಆ ಬಳಿಕ ವಾಸ್ತವಿಕ ಸರ್ವೆ ಕಾರ್ಯ ಆರಂಭವಾಗಿತ್ತು. ಎರಡು ವರ್ಷಗಳ ಬಳಿಕ ಗಡಿ ಗುರುತುಗಳನ್ನು ಅಂತಿಮಗೊಳಿಸುವ ಕೆಲಸ ಆರಂಭವಾಗುತ್ತಿದೆ.

‘ಅಂತರರಾಜ್ಯ ಗಡಿಯಲ್ಲಿ ಮರು ಸರ್ವೆ ನಡೆಸಿ, ಗುರುತುಗಳನ್ನು ನಿರ್ಮಿಸುವಂತೆ 1982ರಲ್ಲೇ ಒಂದು ಪ್ರಕರಣದಲ್ಲಿ ಹೈಕೋರ್ಟ್‌ ಆದೇಶಿಸಿತ್ತು. ಆದರೆ, ಎರಡೂ ರಾಜ್ಯ ಸರ್ಕಾರಗಳು ಮತ್ತು ಕೇಂದ್ರ ಸರ್ಕಾರ ಅದನ್ನು ಪಾಲಿಸಿರಲಿಲ್ಲ. 2000ದಿಂದ ಈಚೆಗೆ ಅಕ್ರಮ ಗಣಿಗಾರಿಕೆಯ ಪರಿಣಾಮವಾಗಿ ಗಡಿಯಲ್ಲಿ ಚಿತ್ರಣವೇ ಬದಲಾಗಿತ್ತು. 2008ರಲ್ಲಿ ನಾನು ಸ್ಥಳಕ್ಕೆ ಭೇಟಿನೀಡಿದ್ದ ಸಂದರ್ಭದಲ್ಲಿ ಅಲ್ಲಿ ಅಂತರರಾಜ್ಯ ಗಡಿಯ ಯಾವುದೇ ಕುರುಹುಗಳೂ ಇರಲಿಲ್ಲ’ ಎಂದು ನೆನಪಿಸಿಕೊಳ್ಳುತ್ತಾರೆ ಕಾಂಗ್ರೆಸ್‌ ಮುಖಂಡ ವಿ.ಎಸ್‌. ಉಗ್ರಪ್ಪ.


ಸಿಬಿಐ ಕೆಲಸ ಬಾಕಿ ಇದೆ:

‘ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಆಂಧ್ರಪ್ರದೇಶ ಸರ್ಕಾರ ಸಿಬಿಐ ತನಿಖೆಗೆ ವಹಿಸಿದ್ದ ಕೆಲವು ಪ್ರಕರಣಗಳು ಇನ್ನೂ ಬಾಕಿ ಇವೆ. ಅಂತರರಾಜ್ಯ ಗಡಿ ಗುರುತುಗಳನ್ನು ಪತ್ತೆಮಾಡಿ, ಹೊಸದಾಗಿ ಗಡಿ ಗುರುತಿಸುವವರೆಗೆ ಆ ಪ್ರಕರಣಗಳ ತನಿಖೆ ಮುಂದುವರಿಸದಂತೆ ಸುಪ್ರೀಂಕೋರ್ಟ್‌ ಸಿಬಿಐಗೆ ನಿರ್ದೇಶನ ನೀಡಿತ್ತು. ಈಗ ಗಡಿ ಗುರುತಿಸುವ ಕೆಲಸ ಮುಗಿದರೆ, ಸಿಬಿಐ ಮತ್ತೆ ಬಾಕಿ ಇರುವ ತನಿಖೆಯನ್ನು ಆರಂಭಿಸಬೇಕಾಗುತ್ತದೆ’ ಎನ್ನುತ್ತಾರೆ ಎಸ್‌.ಆರ್‌. ಹಿರೇಮಠ.

ಕೇಂದ್ರ ಮತ್ತು ಎರಡೂ ರಾಜ್ಯ ಸರ್ಕಾರಗಳ ನಡುವೆ ಸಮನ್ವಯದ ಕೊರತೆ ಇದ್ದ ಕಾರಣದಿಂದ ಹತ್ತು ವರ್ಷಗಳಿಂದಲೂ ಗಡಿ ಗುರುತಿಸುವ ಕೆಲಸ ಬಾಕಿ ಇತ್ತು. ನಿಖರವಾಗಿ ಅಂತರರಾಜ್ಯ ಗಡಿಯನ್ನು ಗುರುತಿಸಿದಲ್ಲಿ ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದ ಮತ್ತಷ್ಟು ಸತ್ಯಗಳು ಹೊರಬರುತ್ತವೆ ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.