
ಬೆಂಗಳೂರು: ‘ಶಾಸಕ ಜನಾರ್ದನ ರೆಡ್ಡಿ ವಿರುದ್ಧ ಸಂಚು ಮಾಡಿ, ದಾಳಿ ನಡೆಸಲಾಗಿದೆ. ಆಡಳಿತ ಪಕ್ಷವೇ ಇದರಲ್ಲಿ ಶಾಮೀಲಾಗಿದ್ದು, ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕು’ ಎಂದು ವಿಧಾನ ಪರಿಷತ್ತಿನಲ್ಲಿ ಜೆಡಿಎಸ್ ಉಪನಾಯಕ ಟಿ.ಎ.ಶರವಣ ಒತ್ತಾಯಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಶರವಣ, ‘ಈ ಹಿಂಸಾಚಾರದಲ್ಲಿ ಕಾಂಗ್ರೆಸ್ ಶಾಸಕರು, ಕಾರ್ಯಕರ್ತರು ಹೇಗೆ ವರ್ತಿಸಿದ್ದಾರೆ ಎಂಬುದನ್ನು ನಾಡಿನ ಜನ ನೋಡಿದ್ದಾರೆ. ರಾಜ್ಯದಲ್ಲಿ ಹೊಸ ರೀತಿಯ ಅಪಾಯಕಾರಿ ರಕ್ತರಾಜಕಾರಣವನ್ನು ಕಾಂಗ್ರೆಸ್ ಆರಂಭಿಸಿದೆ. ಶಾಸಕ ಭರತ್ ರೆಡ್ಡಿ ಅಂಗರಕ್ಷಕರು ಜನಾರ್ದನ ರೆಡ್ಡಿ ಮನೆಯನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿರುವ ರೀತಿಯು, ಅದು ಪೂರ್ವಯೋಜಿತ ಎಂಬುದನ್ನು ಸಾಬೀತು ಮಾಡುತ್ತದೆ’ ಎಂದಿದ್ದಾರೆ.
‘ರಾಜ್ಯದಲ್ಲಿ ಆಡಳಿತ ವ್ಯವಸ್ಥೆ ಕುಸಿದು ಬಿದ್ದಿದ್ದು, ಗೂಂಡಾ ರಾಜ್ ಬಂದಿದೆ. ಸರ್ಕಾರ ನಿಷ್ಪಕ್ಷಪಾತವಾಗಿ ತನಿಖೆ ನಡೆಯಲು ಬಿಡುತ್ತದೆ ಎಂಬ ನಂಬಿಕೆ ಇಲ್ಲ. ಹೀಗಾಗಿ ಸಿಬಿಐ ಅಥವಾ ನ್ಯಾಯಾಂಗ ತನಿಖೆ ನಡೆಸಬೇಕು’ ಎಂದು ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.