ನವದೆಹಲಿ: ಬೆಂಗಳೂರು ನಗರವನ್ನು ದಕ್ಷಿಣ ಏಷ್ಯಾದ ಡೀಪ್ ಟೆಕ್ ರಾಜಧಾನಿಯನ್ನಾಗಿ ಮಾಡಲು ರಾಜ್ಯ ಸರ್ಕಾರ ಕೆಲಸ ಮಾಡುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಹೇಳಿದರು.
ಬೆಂಗಳೂರು ಟೆಕ್ ಶೃಂಗಸಭೆ -2025 ಅಂಗವಾಗಿ ಇಲ್ಲಿ ನಡೆದ ರೋಡ್ ಶೋನ ಭಾಗವಾಗಿ 'ಬ್ರಿಡ್ಜ್ ಟು ಬೆಂಗಳೂರು' ರಾಜತಾಂತ್ರಿಕ ಸಂವಾದದಲ್ಲಿ ಅವರು ಮಾತನಾಡಿದರು.
ಭಾರತದಲ್ಲಿ ಎಂಜಿನಿಯರಿಂಗ್, ವಿಜ್ಞಾನ ಮತ್ತು ವಿನ್ಯಾಸ ಪ್ರತಿಭೆಗಳ ಅತ್ಯಧಿಕ ಸಾಂದ್ರತೆಯೊಂದಿಗೆ, ನಗರವು ಈಗ ಜಾಗತಿಕವಾಗಿ ಅಗ್ರ 5 ಎಐ ಪ್ರತಿಭಾನ್ವಿತ ನಗರಗಳಲ್ಲಿ ಸ್ಥಾನ ಪಡೆದಿದೆ. ಉದಯೋನ್ಮುಖ ಎಐ ಕೇಂದ್ರಗಳಲ್ಲಿ ಸ್ಯಾನ್ ಫ್ರಾನ್ಸಿಸ್ಕೋ ನಂತರ ಎರಡನೇ ಸ್ಥಾನದಲ್ಲಿದೆ ಎಂದು ಅವರು ಹೇಳಿದರು.
ರಾಜ್ಯವು ಎಲ್ಲರನ್ನೊಳಗೊಳ್ಳುವ ಅಭಿವೃದ್ಧಿಯಲ್ಲಿ ಬದ್ಧತೆ ಹೊಂದಿದೆ. ನಮ್ಮ ಹೊಸ ಆವಿಷ್ಕಾರ ಜಿಲ್ಲೆಗಳಾದ ಬೆಂಗಳೂರು, ಮೈಸೂರು ಹಾಗೂ ಬೆಳಗಾವಿ ಸಂಶೋಧನೆ ಹಾಗೂ ಉದ್ಯೋಗದಲ್ಲಿ ಪ್ರಗತಿ ಕಾಣಲಿವೆ. ಮಂಗಳೂರಿನಲ್ಲಿ ಫಿನ್ ಟೆಕ್ ಯೋಜನೆ ಹಾಗೂ ಹುಬ್ಬಳ್ಳಿ– ಧಾರವಾಡದಲ್ಲಿ ಡ್ರೋನ್ ಅಭಿವೃದ್ಧಿ ಯೋಜನೆಗಳು ನಮ್ಮ ಸಮತೋಲಿತ ಬೆಳವಣಿಗೆಯಲ್ಲಿನ ದೂರದೃಷ್ಟಿಯನ್ನು ಬಿಂಬಿಸುತ್ತದೆ ಎಂದರು.
ಕರ್ನಾಟಕ ಕೇವಲ ಸಾಂಸ್ಕೃತಿಕ ಕೇಂದ್ರವಾಗಿಲ್ಲ: ಬದಲಿಗೆ ಅದೊಂದು ಆರ್ಥಿಕ ಶಕ್ತಿಕೇಂದ್ರ. 337 ಬಿಲಿಯನ್ ಡಾಲರ್ ಜಿಎಸ್‌ಡಿಪಿ ಹೊಂದಿರುವ ನಾವು ಭಾರತದ ನಾಲ್ಕನೇ ದೊಡ್ಡ ಆರ್ಥಿಕತೆ ಹೊಂದಿದ್ದು ರಾಷ್ಟ್ರದ ಜಿಡಿಪಿಗೆ ಶೇ 9 ರಷ್ಟು ಕೊಡುಗೆ ನೀಡುತ್ತಿದೆ ಎಂದು ಅವರು ಹೇಳಿದರು.
ನಮ್ಮ ಬಿಯಾಂಡ್ ಬೆಂಗಳೂರು ಯೋಜನೆಯು ಮೈಸೂರು, ಮಂಗಳೂರು, ಹುಬ್ಬಳ್ಳಿ- ಧಾರವಾಡ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಬೆಳವಣಿಗೆ ಪಸರಿಸುತ್ತಿದ್ದು, ಪ್ರತಿ ಪ್ರದೇಶವೂ ಏಳಿಗೆಯಾಗುವುದನ್ನು ಖಾತ್ರಿಪಡಿಸುತ್ತಿದೆ ಎಂದರು.
ಕರ್ನಾಟಕ ವಿಶ್ವದೊಂದಿಗಿನ ಪಾಲುದಾರಿಕೆಗೆ ಸಿದ್ದವಾಗಿದೆ. ತಂತ್ರಜ್ಞಾನ, ಪ್ರವಾಸೋದ್ಯಮ ಅಥವಾ ಪ್ರತಿಭೆಯ ಮೂಲಕ ಜಾಗತಿಕ ಸಹಯೋಗವು ಒಟ್ಟು ಯಶಸ್ಸಿಗೆ ರಹದಾರಿಯಾಗಿದೆ ಎಂದು ಅವರು ತಿಳಿಸಿದರು.
ಕರ್ನಾಟಕವು ಭಾರತದ ಐಟಿ ಕ್ಷೇತ್ರದ ರಫ್ತಿಗೆ ಸುಮಾರು 64 ಬಿಲಿಯನ್ ಡಾಲರ್‌ನಷ್ಟು ಕೊಡುಗೆ ನೀಡಿದೆ.ಇದು ರಾಷ್ಟ್ರದ ಒಟ್ಟು ರಫ್ತಿನ ಮೂರನೇ ಒಂದು ಭಾಗವಾಗಿದೆ ಎಂದರು.
ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಮಾತನಾಡಿ, ತಂತ್ರಜ್ಞಾನ ಶೃಂಗದ ಮೂಲಕ ಪರಿಹಾರಗಳನ್ನು ಕಂಡು ಹಿಡಿಯಲು ಹಾಗೂ ಆಲೋಚನೆಗಳನ್ನು ಹಂಚಿಕೊಳ್ಳಲಿದ್ದೇವೆ. ನಮ್ಮ ಕರ್ನಾಟಕವನ್ನು ಬ್ರ್ಯಾಂಡ್ ಮಾಡಬೇಕಿದೆ. ನೆರೆ ರಾಜ್ಯಗಳ ಸವಾಲನ್ನು ಮೆಟ್ಟಿ ನಿಂತು ಉದ್ಯಮಗಳಿಗೆ ಎಲ್ಲ ಸವಲತ್ತುಗಳನ್ನು ಒದಗಿಸಲಾಗುವುದು ಎಂದರು.
ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ, ’ನವೆಂಬರ್ 18 ರಿಂದ 20 ರವರೆಗೆ ಬೆಂಗಳೂರು ಅಂತರರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ ಈ ಶೃಂಗ ನಡೆಯಲಿದೆ. ಸೆಮಿಕಂಡಕ್ಟರ್, ಆರೋಗ್ಯ ಹಾಗೂ ಹವಾಮಾನ ತಂತ್ರಜ್ಞಾನಗಳಲ್ಲಿ ಅನ್ವೇಷಣೆಗಳನ್ನು ಕೈಗೊಳ್ಳಲಾಗುವುದು. 60 ದೇಶಗಳ ಸುಮಾರು 1200 ಪ್ರದರ್ಶಕರು, 600 ಭಾಷಣಕಾರರು ಹಾಗೂ 1 ಲಕ್ಷ ಜನರು ಭಾಗವಹಿಸುವ ನಿರೀಕ್ಷೆಯಿದೆ‘ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.