ADVERTISEMENT

Bengaluru Stampede | ಕಾಲ್ತುಳಿತಕ್ಕೆ ಆರ್‌ಸಿಬಿಯೇ ಕಾರಣ: ಸಿಐಡಿ ತನಿಖಾ ವರದಿ

​ಪ್ರಜಾವಾಣಿ ವಾರ್ತೆ
Published 8 ಜುಲೈ 2025, 23:56 IST
Last Updated 8 ಜುಲೈ 2025, 23:56 IST
ಆರ್‌ಸಿಬಿ ತಂಡದ ವಿಜಯೋತ್ಸವಕ್ಕೆ ಸೇರಿದ್ದ ಅಭಿಮಾನಿಗಳು 
ಆರ್‌ಸಿಬಿ ತಂಡದ ವಿಜಯೋತ್ಸವಕ್ಕೆ ಸೇರಿದ್ದ ಅಭಿಮಾನಿಗಳು    

ಬೆಂಗಳೂರು: ಎಂ.ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಜೂನ್‌ 4ರಂದು ಸಂಭವಿಸಿದ್ದ ಕಾಲ್ತುಳಿತ ಘಟನೆಯ ತನಿಖೆ ನಡೆಸುತ್ತಿರುವ ಸಿಐಡಿ, ತಂಡದ ಆಟಗಾರ ವಿರಾಟ್ ಕೊಹ್ಲಿಗಾಗಿ ರಾಯಲ್ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ಆಡಳಿತ ಮಂಡಳಿ ತೆಗೆದುಕೊಂಡ ತರಾತುರಿಯ ನಿರ್ಧಾರವೇ 11 ಮಂದಿಯ ಸಾವಿಗೆ ಕಾರಣವಾಗಿದೆ ಎಂಬುದಾಗಿ ವರದಿ ಸಿದ್ಧಪಡಿಸಿದೆ ಎಂದು ಮೂಲಗಳು ಹೇಳಿವೆ.

‘ಈ ತನಿಖಾ ವರದಿಗೆ ಇನ್ನಷ್ಟು ಸಾಕ್ಷ್ಯಾಧಾರಗಳನ್ನು ಕಲೆ ಹಾಕಲಾಗುತ್ತಿದೆ. ಅದು ಪೂರ್ಣಗೊಂಡ ಬಳಿಕ ನ್ಯಾಯಾಲಯಕ್ಕೆ ವರದಿ ಸಲ್ಲಿಸಲಾಗುವುದು’ ಎಂದು ಸಿಐಡಿ ಮೂಲಗಳು ತಿಳಿಸಿವೆ.

ಘಟನೆಯ ಬಳಿಕ ಕಬ್ಬನ್‌ಪಾರ್ಕ್‌ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಪ್ರಕರಣ ದಾಖಲಾಗಿತ್ತು. ಮೃತ ಕುಟುಂಬಸ್ಥರ ಆಕ್ರೋಶ ಹೆಚ್ಚಾದ ಬೆನ್ನಲ್ಲೇ ಕೆಎಸ್‌ಸಿಎ, ಡಿಎನ್‌ಎ (ಇವೆಂಟ್‌ ಮ್ಯಾನೇಜ್‌ಮೆಂಟ್‌) ಹಾಗೂ ಆರ್‌ಸಿಬಿ ಫ್ರಾಂಚೈಸಿಯ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡು ಪೊಲೀಸರು ತನಿಖೆ ಆರಂಭಿಸಿದ್ದರು. ನಾಲ್ವರನ್ನು ಬಂಧಿಸಿದ್ದರು.

ADVERTISEMENT

ಅದಾದ ಮೇಲೆ ಕಬ್ಬನ್‌ಪಾರ್ಕ್ ಠಾಣೆಯಲ್ಲಿ ದಾಖಲಾಗಿದ್ದ ಎರಡೂ ಪ್ರಕರಣಗಳ ತನಿಖೆಯನ್ನೂ ರಾಜ್ಯ ಸರ್ಕಾರವು ಸಿಐಡಿಗೆ ವಹಿಸಿತ್ತು. ಕಾಲ್ತುಳಿತಕ್ಕೆ ಕಾರಣವಾದ ಅಂಶಗಳನ್ನು ಸಿಐಡಿ ತನಿಖಾಧಿಕಾರಿಗಳು ಪತ್ತೆ ಮಾಡಿದ್ದಾರೆ.

‘ಘಟನೆಗೆ ಸಂಬಂಧಿಸಿದಂತೆ ಸಾಮಾಜಿಕ ಮಾಧ್ಯಮ ಹಾಗೂ ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ಹರಿದಾಡಿದ ವಿಡಿಯೊಗಳನ್ನು ವಶಕ್ಕೆ ಪಡೆದು ಪರಿಶೀಲಿಸಲಾಗಿದೆ. ಕ್ರೀಡಾಂಗಣದ ಗೇಟ್‌ಗಳ ಬಳಿಯ ಅವ್ಯವಸ್ಥೆ, ಪೊಲೀಸರ ನಿಯೋಜನೆ ಹಾಗೂ ನೂಕುನುಗ್ಗಲು ಉಂಟಾಗಲು ಕಾರಣವೇನು ಎಂಬುದರ ಬಗ್ಗೆ ತನಿಖೆ ನಡೆಸಲಾಗಿದೆ. ಈ ಎಲ್ಲ ಅಂಶಗಳನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ’ ಎಂದು ಮೂಲಗಳು ತಿಳಿಸಿವೆ.

‘ಆರ್‌ಸಿಬಿ ತಂಡವು ಐಪಿಎಲ್‌ ಟ್ರೋಫಿ ಜಯಿಸಿದರೆ ಜೂನ್‌ 4ರಂದೇ ವಿಜಯೋತ್ಸವ ಆಯೋಜನೆ ಮಾಡಬೇಕೆಂದು ಆಡಳಿತ ಮಂಡಳಿ ನಿರ್ಧಾರ ಮಾಡಿತ್ತು. ಆರ್‌ಸಿಬಿ ಸಿಇಒ ರಾಜೇಶ್ ಮೆನನ್, ಮಾರುಕಟ್ಟೆ ವಿಭಾಗದ ಮುಖ್ಯಸ್ಥ ನಿಖಿಲ್ ಸೋಸಲೆ ಅವರು ಕಾರ್ಯಕ್ರಮ ಆಯೋಜನೆಯ ನಿರ್ಧಾರ ಮಾಡಿದ್ದರು. ವಿರಾಟ್ ಕೊಹ್ಲಿಯವರ ಕಾರಣ ಮುಂದಿಟ್ಟಿದ್ದ ಕೊಹ್ಲಿ ಆಪ್ತ ನಿಖಿಲ್ ಸೋಸ್ಲೆ ಕೆಎಸ್‌ಸಿಎ ಮೇಲೆ ಒತ್ತಡ ತಂದು ಕಾರ್ಯಕ್ರಮ ಆಯೋಜಿಸಿದ್ದರು ಎಂಬುದು ತನಿಖೆ ವೇಳೆ ಗೊತ್ತಾಗಿದೆ. ಅದನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ’ ಎಂದು ಸಿಐಡಿ ಮೂಲಗಳು ತಿಳಿಸಿವೆ.

‘ಕಾರ್ಯಕ್ರಮ ಮುಂದೂಡಿಕೆ ಬಗ್ಗೆ ಪೊಲೀಸ್ ಇಲಾಖೆ ಹಾಗೂ ಕೆಎಸ್‌ಸಿಎ ಅಭಿಪ್ರಾಯ ವ್ಯಕ್ತಪಡಿಸಿತ್ತು. ಆದರೆ, ಕೊಹ್ಲಿ ಕಾರಣ ಹೇಳಿ ಜೂನ್‌ 4ರಂದೇ ಕಾರ್ಯಕ್ರಮ ಆಯೋಜನೆ ಆಗಬೇಕು ಎಂದು ನಿಖಿಲ್ ಸೋಸಲೆ ಒತ್ತಡ ಹೇರಿದ್ದರು. ಕೊಹ್ಲಿ ಲಂಡನ್‌ಗೆ ಹೋಗಬೇಕಿದ್ದು, ವಿಜಯೋತ್ಸವ ಮುಂದೂಡಿದರೆ ಕೊಹ್ಲಿ ಕಾರ್ಯಕ್ರಮಕ್ಕೆ ಬರುವುದಿಲ್ಲ ಎಂಬುದಾಗಿ ಕಾರಣ ನೀಡಿದ್ದರು. ನಿಖಿಲ್ ಸೋಸಲೆ ಒತ್ತಡದಿಂದಾಗಿ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು’ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ವರದಿಯಲ್ಲಿ ಏನೆಲ್ಲಾ ಉಲ್ಲೇಖ?

  • ಟಿಕೆಟ್‌ ಗೊಂದಲವೂ ಘಟನೆಗೆ ಪ್ರಮುಖ ಕಾರಣವಾಗಿದೆ. ಆರ್‌ಸಿಬಿ ಸಾಮಾಜಿಕ ಮಾಧ್ಯಮಗಳಲ್ಲಿ ಉಚಿತ ಟಿಕೆಟ್‌ ಘೋಷಣೆ ಮಾಡಿದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರು. ಈ ಮಾಹಿತಿ ಹಂಚುವುದಕ್ಕೂ ನಿಖಿಲ್ ಸೋಸಲೆ ಕಾರಣ

  • ಪೊಲೀಸರು ಬಂದೋಬಸ್ತ್‌ ವ್ಯವಸ್ಥೆಯನ್ನು ಸರಿಯಾಗಿ ಮಾಡಿಕೊಂಡಿರಲಿಲ್ಲ

  • ಕಾಲ್ತುಳಿತ ಸಂಭವಿಸಿದ್ದ ಪ್ರವೇಶದ್ವಾರಗಳ ಬಳಿ ಪೊಲೀಸರೇ ಇರಲಿಲ್ಲ. ಕ್ರೀಡಾಂಗಣ ಬಳಿ ಹೆಚ್ಚಿನ ಬಂದೋಬಸ್ತ್ ಆಗಿರಲಿಲ್ಲ

  • ವಿಧಾನಸೌಧದ ಬಳಿಯೇ ಪೊಲೀಸ್ ಇಲಾಖೆ ಹೆಚ್ಚು ಗಮನಹರಿಸಲಾಗಿತ್ತು

  • ‌ವಿಜಯೋತ್ಸವಕ್ಕೂ ಮುನ್ನ ಪೊಲೀಸ್ ಅಧಿಕಾರಿಗಳ ನಿಯೋಜನೆಗಾಗಿ ರೋಲ್‌ಕಾಲ್ ನಡೆದಿರಲಿಲ್ಲ. ಕೆಎಸ್‌ಆರ್‌ಪಿ ಸಿಬ್ಬಂದಿಗೂ ಸರಿಯಾದ ಸಂದೇಶ ನೀಡಿರಲಿಲ್ಲ

  • ಐಪಿಎಲ್ ಪಂದ್ಯದಷ್ಟೇ ವಿಜಯೋತ್ಸವಕ್ಕೂ ಜನರು ಬರಬಹುದು ಎನ್ನುವ ಸಂದೇಶವನ್ನು ಮಾತ್ರ ರವಾನೆ ಮಾಡಲಾಗಿತ್ತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.