ಬೆಂಗಳೂರು: ‘ಆರ್‌ಸಿಬಿ ವಿಜಯೋತ್ಸವದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಉಂಟಾದ ಕಾಲ್ತುಳಿತದಲ್ಲಿ 11 ಮಂದಿ ಸಾವನ್ನಪ್ಪಿದ ಘಟನೆಗೆ ಸಂಬಂಧಿಸಿದ ವಸ್ತುಸ್ಥಿತಿ ವರದಿಯನ್ನು ಇದೇ 12ಕ್ಕೆ ಮುಚ್ಚಿದ ಲಕೋಟೆಯಲ್ಲಿ ನೇರವಾಗಿ ನ್ಯಾಯಾಲಯಕ್ಕೆ ಸಲ್ಲಿಸಬೇಕು’ ಎಂದು ಹೈಕೋರ್ಟ್, ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.
ಘಟನೆಗೆ ಸಂಬಂಧಿಸಿದಂತೆ ಹೈಕೋರ್ಟ್ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ವಿ.ಕಾಮೇಶ್ವರ ರಾವ್ ನೇತೃತ್ವದ ವಿಭಾಗೀಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಅಡ್ವೊಕೇಟ್ ಜನರಲ್ ಕೆ.ಶಶಿಕಿರಣ ಶೆಟ್ಟಿ, ‘ವಸ್ತುಸ್ಥಿತಿ ವರದಿಯನ್ನು ಇಂದು ಸಲ್ಲಿಸಲಾಗಿಲ್ಲ. ಘಟನಾನಂತರದ ಬೆಳವಣಿಗೆಗಳಲ್ಲಿ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಜಾನ್ ಮೈಕೆಲ್ ಕುನ್ಹ ನೇತೃತ್ವದಲ್ಲಿ ವಿಚಾರಣಾ ಆಯೋಗ ರಚಿಸಲಾಗಿದೆ. ಇದರ ವರದಿ ಸಲ್ಲಿಕೆಗೆ ಒಂದು ತಿಂಗಳ ಕಾಲಮಿತಿ ನಿಗದಿಪಡಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಬೆಂಗಳೂರು ಪೊಲೀಸ್ ಕಮಿಷನರ್ ಸೇರಿದಂತೆ ಐವರು ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ’ ಎಂದರು.
‘ಹೈಕೋರ್ಟ್‌ನ ಸಮನ್ವಯ ಪೀಠದಲ್ಲಿ ಆರ್‌ಸಿಬಿ, ಡಿಎನ್‌ಎ ಅಧಿಕಾರಿಗಳ ಜಾಮೀನು ಅರ್ಜಿಗಳೂ ವಿಚಾರಣೆಗೆ ಕಾದು ಕುಳಿತಿವೆ. ಒಂದು ವೇಳೆ ಈ ನ್ಯಾಯಪೀಠದ ಮುಂದೆ ನಾವು ಸರ್ಕಾರದ ಹೆಜ್ಜೆಗಳನ್ನು ಇಲ್ಲಿ ಅರುಹಿದ್ದೇ ಆದರೆ, ಅದರ ಅಂಶಗಳನ್ನು ಅರ್ಜಿದಾರರು ತಮ್ಮ ಅನುಕೂಲಕ್ಕೆ ಬಳಕೆ ಮಾಡಿಕೊಳ್ಳುವ ಸಾಧ್ಯತೆ ಇದೆ’ ಎಂದು ಆತಂಕ ವ್ಯಕ್ತಪಡಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ‘ಅಂದರೆ ನ್ಯಾಯಾಲಯದ ನಿರ್ದೇಶನದ ಅನುಸಾರ ನೀವು ಪ್ರತಿಕ್ರಿಯೆ ಸಲ್ಲಿಸುವುದಿಲ್ಲ ಎಂದು ಹೇಳುತ್ತಿದ್ದೀರಾ’ ಎಂದು ಪ್ರಶ್ನಿಸಿತು.
ಇದಕ್ಕೆ ಶಶಿಕಿರಣ ಶೆಟ್ಟಿ, ‘ಹಾಗಲ್ಲ ಸ್ವಾಮಿ, ಇದರಲ್ಲಿ ಕೆಲವು ಮುಖ್ಯ ವಿಚಾರಗಳು ಅಡಕವಾಗಿವೆ. ಮುಕ್ತ ನ್ಯಾಯಾಲಯದಲ್ಲಿ ಎಲ್ಲವನ್ನೂ ಹೇಳಿದಾಗ ಸರ್ಕಾರ ಪಕ್ಷಪಾತಿಯಾಗಿದೆ ಎಂದು ಯಾರೂ ಭಾವಿಸುವಂತಾಗಬಾರದು. ಸ್ವತಂತ್ರ ವಿಚಾರಣಾ ಆಯೋಗದಿಂದ ವರದಿ ಬರಲಿ. ಹಾಗಾಗಿ, ವಿಚಾರಣೆಯನ್ನು ಮುಂದೂಡಬೇಕು’ ಎಂದು ಕೋರಿದರು.
ಇದೇ ವೇಳೆ, ಪದಾಂಕಿತ ಹಿರಿಯ ವಕೀಲ ಎಸ್.ಎಸ್.ನಾಗಾನಂದ ಅವರು, ‘ಘಟನೆಯಲ್ಲಿ ಮೃತಪಟ್ಟ 19 ವರ್ಷದ ವಿದ್ಯಾರ್ಥಿ ಜಿ.ಪ್ರಜ್ವಲ್ ಅವರ ತಂದೆ ಈ ಪಿಐಎಲ್‌ನಲ್ಲಿ ಮಧ್ಯಂತರ ಅರ್ಜಿದಾರರಾಗಲು ಬಯಸಿದ್ದಾರೆ’ ಎಂಬ ಅಂಶವನ್ನು ನ್ಯಾಯಪೀಠದ ಗಮನಕ್ಕೆ ತಂದರು.
ಅಂತೆಯೇ, ಮತ್ತೊಬ್ಬ ಪದಾಂಕಿತ ಹಿರಿಯ ವಕೀಲ ಕೆ.ದಿವಾಕರ್, ‘ವಿಧಾನ ಪರಿಷತ್ ಮಾಜಿ ಸದಸ್ಯ ಮೋಹನ ಕುಮಾರ್ ಕೊಂಡಜ್ಜಿ ಈ ಅರ್ಜಿಯಲ್ಲಿ ಮಧ್ಯಂತರ ಅರ್ಜಿದಾರರಾಗಿ ಸೇರ್ಪಡೆಯಾಗಲು ಅನುಮತಿ ಕೋರುತ್ತಿದ್ದಾರೆ’ ಎಂದರು.
ಇನ್ನೊಬ್ಬ ವಕೀಲ ಆರ್.ಹೇಮಂತ ರಾಜ್, ‘ಈ ಘಟನೆಯಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯೇ (ಕೆಎಸ್‌ಸಿಎ) ನಿಜವಾದ ದೋಷಿ. ಆರ್‌ಸಿಬಿಯನ್ನೂ ಪಕ್ಷಗಾರರನ್ನಾಗಿ ಮಾಡಬೇಕು. ಅವರಿಗೂ ನೋಟಿಸ್ ಜಾರಿಗೊಳಿಸಲು ಆದೇಶಿಸಬೇಕು’ ಎಂದು ಕೋರಿದರು.
ಎಲ್ಲರ ಮನವಿಗಳನ್ನು ಆಲಿಸಿದ ನ್ಯಾಯಪೀಠ, ‘ಈ ಪಿಐಎಲ್‌ನಲ್ಲಿ ಮಧ್ಯಪ್ರವೇಶ ಬಯಸಿರುವ ಅರ್ಜಿಗಳ ಸಂಬಂಧ ಈಗಲೇ ಏನನ್ನೂ ಹೇಳುವುದಿಲ್ಲ. ಸರ್ಕಾರ ತನ್ನ ಪ್ರತಿಕ್ರಿಯೆಯನ್ನು ಮುಚ್ಚಿದ ಲಕೋಟೆಯಲ್ಲಿ ಇದೇ 12ರಂದು ನೇರವಾಗಿ ನ್ಯಾಯಪೀಠಕ್ಕೆ ಸಲ್ಲಿಸಲಿ. ಆನಂತರ ಮಧ್ಯಂತರ ಸೇರ್ಪಡೆ ಅರ್ಜಿಗಳನ್ನು ಪರಿಶೀಲನೆ ಮಾಡಲಾಗುವುದು’ ಎಂದು ತಿಳಿಸಿ ವಿಚಾರಣೆಯನ್ನು ಇದೇ 12ಕ್ಕೆ ಮುಂದೂಡಿತು.
ಗೋವಿಂದರಾಜು ಬಂಧನ ಯಾಕಿಲ್ಲ?
‘ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿಯಾಗಿದ್ದ ಗೋವಿಂದರಾಜು ಅವರನ್ನು ಅವರ ಹುದ್ದೆಯಿಂದ ವಜಾಗೊಳಿಸಲಾಗಿದೆ. ಗುಪ್ತಚರ ಇಲಾಖೆ ಮುಖ್ಯಸ್ಥ ಹೇಮಂತ್ ನಿಂಬಾಳ್ಕರ್ ಸೇರಿ ಇತರರ ವರ್ಗಾವಣೆ ಮಾಡಲಾಗಿದೆ. ಆದರೆ ಇವರಲ್ಲಿ ಯಾರೊಬ್ಬರನ್ನೂ ಈತನಕ ಏಕೆ ಬಂಧಿಸಿಲ್ಲ’ ಎಂದು ಡಿಎನ್‌ಎ ಪರ ವಕೀಲರು ನ್ಯಾಯಪೀಠಕ್ಕೆ ಪ್ರಶ್ನಿಸಿದರು.
‘ತಮ್ಮ ಬಂಧನವನ್ನು ಕಾನೂನುಬಾಹಿರ’ ಎಂದು ಆರೋಪಿಸಿ ಆರ್‌ಸಿಬಿ ಮಾರುಕಟ್ಟೆ ವಿಭಾಗದ ಮುಖ್ಯಸ್ಥ ನಿಖಿಲ್ ಸೋಸಲೆ ಪರ ಅವರ ಪತ್ನಿ ಮಾಳವಿಕಾ ನಾಯಕ್ ಹಾಗೂ ‘ತಮ್ಮ ವಿರುದ್ಧದ ಎಫ್‌ಐಆರ್ ರದ್ದುಗೊಳಿಸಬೇಕು’ ಎಂದು ಕೋರಿ ಮೆಸರ್ಸ್ ಡಿಎನ್‌ಎ ಎಂಟರ್‌ಟೈನ್ಮೆಂಟ್ ನೆಟ್‌ವರ್ಕ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿ ನಿರ್ದೇಶಕ ಆರ್.ಸುನಿಲ್ ಮ್ಯಾಥ್ಯೂ ಪರವಾಗಿ ಅವರ ಪತ್ನಿ ರೋಶನಿ ಸುನಿಲ್ ಎಸ್.ಕಿರಣ್ ಕುಮಾರ್ ಪರವಾಗಿ ಅವರ ಪತ್ನಿ ಕೆ.ನಂದಿನಿ ಮತ್ತು ಎನ್.ಪಿ.ಶಮಂತ್ ಅವರ ತಾಯಿ ನಿರ್ಮಲಾ ಅವರು ಸಲ್ಲಿಸಿರುವ ರಿಟ್ ಅರ್ಜಿಗಳನ್ನು ನ್ಯಾಯಮೂರ್ತಿ ಎಸ್.ಆರ್.ಕೃಷ್ಣಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಅರ್ಜಿದಾರ ನಿಖಿಲ್ ಸೋಸಲೆ ಪರ ವಾದ ಮಂಡಿಸಿದ ಪದಾಂಕಿತ ಹಿರಿಯ ವಕೀಲರಾದ ಸಂದೇಶ್ ಜೆ.ಚೌಟ ಮತ್ತು ಸಂಪತ್ ಕುಮಾರ್ ‘ಬಂಧನಕ್ಕೆ ನಿರ್ದೇಶನ ನೀಡುವ ಅಧಿಕಾರ ನ್ಯಾಯಾಲಯಕ್ಕೇ ಇಲ್ಲ. ಹಾಗಿರುವಾಗ ಬಂಧಿಸಿ ಎಂದು ಆದೇಶ ನೀಡುವ ಅಧಿಕಾರ ಮುಖ್ಯಮಂತ್ರಿಗೆಲ್ಲಿದೆ? ಬಂಧನದ ಅಧಿಕಾರ ಏನಿದ್ದರೂ ತನಿಖಾಧಿಕಾರಿಯ ವಿವೇಚನೆಗೆ ಬಿಟ್ಟಿದ್ದು. ಆದರೆ ಇಲ್ಲಿ ರಾಜಕೀಯ ಪ್ರಭಾವ ಕೆಲಸ ಮಾಡಿದೆ’ ಎಂದು ಗಂಭೀರ ಆಕ್ಷೇಪ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರದ ಪರ ಹಾಜರಿದ್ದ ಅಡ್ವೊಕೇಟ್ ಜನರಲ್ ಕೆ.ಶಶಿಕಿರಣ ಶೆಟ್ಟಿ ‘ಅರ್ಜಿದಾರರ ಆರೋಪಗಳಿಗೆ ವಿಶದವಾಗಿ ಉತ್ತರಿಸಬೇಕಿದೆ. ಇದೇ ಕಾರಣಕ್ಕೆ ಹಂಗಾಮಿ ನ್ಯಾಯಮೂರ್ತಿಗಳ ನೇತೃತ್ವದ ವಿಭಾಗೀಯ ನ್ಯಾಯಪೀಠದ ಮುಂದೆ ಇವತ್ತು ನಿಗದಿಯಾಗಿದ್ದ ಸ್ವಯಂಪ್ರೇರಿತ ಪಿಐಎಲ್ ವಿಚಾರಣೆಯನ್ನು ಗುರುವಾರಕ್ಕೆ (ಜೂನ್ 12) ಮುಂದೂಡಲು ಮನವಿ ಮಾಡಲಾಗಿದೆ. ನಮ್ಮ ಅಧಿಕಾರಿಗಳು ಬೆಳಗಿನ ಜಾವದವರೆಗೆ ಕೆಲಸ ಮಾಡಿದ್ದಾರೆ. ಎಲ್ಲವನ್ನೂ ಪೀಠದ ಮುಂದೆ ಮಂಡಿಸಲಾಗುವುದು. ಹೀಗಾಗಿ ವಿಚಾರಣೆಯನ್ನು ನಾಳೆಗೆ ಮುಂದೂಡಬೇಕುʼ ಎಂದು ಕೋರಿದರು.
ಇದನ್ನು ಬಲವಾಗಿ ವಿರೋಧಿಸಿದ ಸಂದೇಶ್ ಜೆ.ಚೌಟ ‘ಇಲ್ಲಿ ಒಬ್ಬರಿಗೊಬ್ಬರು ಪರಸ್ಪರ ಸಂಘರ್ಷ ನಡೆಸುವ ಅಗತ್ಯವೇನಿದೆ? ಕಾಲ್ತುಳಿತ ಸಂಭವಿಸಬೇಕು ಅಥವಾ ಸಂಭವಿಸಬಹುದು ಎಂದು ಯಾರೂ ನಿರೀಕ್ಷಿಸಿರಲಿಲ್ಲ. ಅಷ್ಟಕ್ಕೂ ವಿಜಯೋತ್ಸವಕ್ಕೆ ಬನ್ನಿ ಎಂದು ಆರ್‌ಸಿಬಿಯೇ ಸಾರ್ವಜನಿಕರಿಗೆ ಕರೆ ನೀಡಿತ್ತು. ಇಂತಹುದೇ ಕರೆಯನ್ನು ಸರ್ಕಾರವೂ ನೀಡಿತ್ತು. ಆರ್‌ಸಿಬಿ ಡಿಎನ್‌ಎ ಕೆಎಸ್‌ಸಿಎ ಸರ್ಕಾರ ಎಲ್ಲರೂ ಒಂದೇ ನೆಲೆಯಲ್ಲಿ ಇದ್ದಾರೆ’ ಎಂದರು.
ಕೆಲಕಾಲ ವಾದ–ಪ್ರತಿವಾದ ಆಲಿಸಿದ ನ್ಯಾಯಪೀಠ ಅಂತಿಮವಾಗಿ ರಾಜ್ಯ ಸರ್ಕಾರದ ವಿನಮ್ರ ವಾದವನ್ನು ಪರಿಗಣಿಸಿ ವಿಚಾರಣೆಯನ್ನು ಬುಧವಾರಕ್ಕೆ (ಜೂನ್ 11) ಮುಂದೂಡಿತು.
ಸಿಐಡಿ ಕಸ್ಟಡಿಗೆ ಪಡೆಯುವುದಿಲ್ಲ...
‘ಎಲ್ಲಾ ಆರೋಪಿಗಳ ಅರ್ಜಿಗಳು ಹೈಕೋರ್ಟ್‌ನಲ್ಲಿ ವಿಚಾರಣೆಗೆ ಬಾಕಿ ಇರುವಾಗ ಸದ್ಯಕ್ಕೆ ನ್ಯಾಯಾಂಗ ಬಂಧನದಲ್ಲಿರುವ ನಾಲ್ವರು ಆರೋಪಿಗಳನ್ನು ಸಿಐಡಿ ವಶಕ್ಕೆ ಪಡೆಯುವ ಕೋರಿಕೆಯನ್ನು ಒಂದನೇ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಸಲ್ಲಿಸಿರುವುದು ಸರಿಯಲ್ಲ‘ ಎಂದು ನ್ಯಾಯಪೀಠ ರಾಜ್ಯ ಪ್ರಾಸಿಕ್ಯೂಷನ್ ನಡೆಗೆ ಅಸಮಾಧಾನ ವ್ಯಕ್ತಪಡಿಸಿತು.
ಈ ಬೆನ್ನಲ್ಲೇ ರಾಜ್ಯ ಪ್ರಾಸಿಕ್ಯೂಷನ್ ಪರ ಹೆಚ್ಚುವರಿ ರಾಜ್ಯ ಪ್ರಾಸಿಕ್ಯೂಟರ್ ಬಿ.ಎನ್.ಜಗದೀಶ್ ‘ಆರೋಪಿಗಳನ್ನು ಕಸ್ಟಡಿಗೆ ಪಡೆಯುವ ಸಂಬಂಧ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಸಲ್ಲಿಸಿರುವ ಅರ್ಜಿಯನ್ನು ವಿಚಾರಣೆಗೆ ಕೋರುವುದಿಲ್ಲ’ ಎಂದು ಭರವಸೆ ನೀಡಿದರು. ಇದನ್ನು ದಾಖಲಿಸಿಕೊಂಡ ನ್ಯಾಯಪೀಠ ವಿಚಾರಣೆ ಮುಂದೂಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.