ಎಚ್‌ಡಿಕೆ, ಸಿದ್ದರಾಮಯ್ಯ
ಬೆಂಗಳೂರು: ‘ಆರ್‌ಸಿಬಿ ವಿಜಯೋತ್ಸವದ ವೇಳೆ ಕಾಲ್ತುಳಿತ ಉಂಟಾಗಿ 11 ಮಂದಿ ಸಾಯುವುದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಕಾರಣ. ವಿಜಯೋತ್ಸವ ಬೇಡ ಎಂದು ಪೊಲೀಸರು ಹೇಳಿದ್ದರೂ ಕಾರ್ಯಕ್ರಮ ನಡೆಸಲೇಬೇಕು ಎಂದು ಸಿದ್ದರಾಮಯ್ಯ ತಾಕೀತು ಮಾಡಿದ್ದರು. ಮುಖ್ಯಮಂತ್ರಿ ಸ್ಥಾನಕ್ಕೆ ಅವರು ರಾಜೀನಾಮೆ ನೀಡಬೇಕು’ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಒತ್ತಾಯಿಸಿದರು.
ಬಿಜೆಪಿ ನಾಯಕರ ಜತೆ ಜಂಟಿ ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ‘ವಿಜಯೋತ್ಸವ ಆಚರಣೆಗೆ ಅನುಮತಿ ನೀಡಿ ಎಂದು ಆರ್‌ಸಿಬಿಯವರು ಸಲ್ಲಿಸಿದ್ದ ಮನವಿಯನ್ನು ಕಬ್ಬನ್ ಪಾರ್ಕ್ ಪೊಲೀಸರು ತಿರಸ್ಕರಿಸಿದ್ದರು. ಕಾರ್ಯಕ್ರಮ ಆಯೋಜಿಸಬೇಡಿ ಎಂದು ಹೇಳಿದ್ದರು’ ಎಂದರು.
‘ಇವರ ತಪ್ಪನ್ನು ಮುಚ್ಚಿಹಾಕಿಕೊಳ್ಳಲು ಪೊಲೀಸ್ ಅಧಿಕಾರಿಗಳನ್ನು ಬಲಿಕೊಟ್ಟಿದ್ದಾರೆ’ ಎಂದರು.
‘ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿ ಕೆ.ಗೋವಿಂದರಾಜು ಜೂನ್ 4ರ ಬೆಳಿಗ್ಗೆ 7ರ ವೇಳೆಗೆ ಪೊಲೀಸ್ ಕಮಿಷನರ್‌ಗೆ ಕರೆ ಮಾಡಿ, ಮೆರವಣಿಗೆ ನಡೆಸಲು ಹಾಗೂ ಕ್ರೀಡಾಂಗಣದಲ್ಲಿ ಕಾರ್ಯಕ್ರಮ ನಡೆಸಲು ಅನುಮತಿ ನೀಡಿ ಎಂದು ಒತ್ತಡ ಹೇರಿದ್ದಾರೆ. ಅನುಮತಿ ನೀಡಲು ಕಮಿಷನರ್ ಅವರು ಆಗಲೂ ನಿರಾಕರಿಸಿದ್ದರು’ ಎಂದು ಕುಮಾರಸ್ವಾಮಿ ವಿವರಿಸಿದರು.
‘ಆರ್‌ಸಿಬಿ ಪ್ರಮುಖರೊಂದಿಗೆ ಮುಖ್ಯಮಂತ್ರಿಯ ಮನೆಗೆ ಹೋದ ಗೋವಿಂದರಾಜು, ಅಲ್ಲಿಗೆ ಕಮಿಷನರ್ ಅವರನ್ನು ಕರೆಸಿಕೊಂಡರು. ಸಿದ್ದರಾಮಯ್ಯ ಅವರು ಕಮಿಷನರ್‌ಗೆ, ‘ನಾನು ರಾಜ್ಯದ ಮುಖ್ಯಮಂತ್ರಿ ಹೇಳುತ್ತಿದ್ದೇನೆ. ಕಾರ್ಯಕ್ರಮ ನಡೆಸಲು ಬಿಡಿ’ ಎಂದು ತಾಕೀತು ಮಾಡಿದರು. ಕಾರ್ಯಕ್ರಮ ಮತ್ತು ನಂತರ ನಡೆದ ದುರಂತಕ್ಕೆಲ್ಲಾ ಸಿದ್ದರಾಮಯ್ಯನವರೇ ಹೊಣೆ’ ಎಂದು ಆರೋಪಿಸಿದರು.
‘ವಿಧಾನಸೌಧದಲ್ಲಿ ಇಂಥದ್ದೊಂದು ಕಾರ್ಯಕ್ರಮ ನಡೆದರೆ ಅದರ ಶ್ರೇಯ ಮುಖ್ಯಮಂತ್ರಿಗೆ ಹೋಗುತ್ತದೆ. ಬದಲಿಗೆ ನನಗೇ ಸಿಗಲಿ ಎಂದು ಡಿ.ಕೆ.ಶಿವಕುಮಾರ್ ಕನಕಪುರದ ನ್ಯಾಯಾಲಯದಿಂದ ಓಡಿ ಬಂದರು. ಆರ್‌ಸಿಬಿ ತಂಡವನ್ನು ತಾವೇ ಸ್ವಾಗತಿಸಿ, ಹೋಟೆಲ್‌ಗೂ ತಾವೇ ಕರೆದುಕೊಂಡು ಬಿಟ್ಟುಬಂದರು. ವಿಧಾನಸೌಧಕ್ಕೂ ಕರೆದುಕೊಂಡು ಬಂದರು. ಅಲ್ಲಿ ಸನ್ಮಾನದ ಬದಲಿಗೆ ಆಟಗಾರರಿಗೆ ಅವಮಾನ ಮಾಡಿದರು. ತಾವು ಮತ್ತು ತಮ್ಮ ಮಕ್ಕಳು, ಮೊಮ್ಮಕ್ಕಳ ಫೋಟೊಶೂಟ್ ನಡೆಸಿದರು. ಜನರು ಸಾಯುತ್ತಿದ್ದಾಗಲೂ ರಾಜ್ಯದ ಉಪ ಮುಖ್ಯಮಂತ್ರಿ ಟ್ರೋಫಿಗೆ ಮುತ್ತಿಡುತ್ತಿದ್ದರು’ ಎಂದರು.
‘ವಿಧಾನಸೌಧದಲ್ಲಿ ಕಾರ್ಯಕ್ರಮ ಆಯೋಜಿಸಲು ಒತ್ತಡ ತಂದ ರಾಜಕೀಯ ಕಾರ್ಯದರ್ಶಿಯನ್ನು ಮೊದಲು ಆ ಹುದ್ದೆಯಿಂದ ಕಿತ್ತುಹಾಕಬೇಕು. ನೈತಿಕತೆ ಇದ್ದದ್ದೇ ಆದರೆ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಮತ್ತು ಗೃಹ ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಮನೆಗೆ ಹೋಗಬೇಕು. ಇಲ್ಲವೇ ಕಾಂಗ್ರೆಸ್ ಹೈಕಮಾಂಡ್ ಈ ಮೂವರನ್ನೂ ಕಿತ್ತೊಗೆಯಬೇಕು’ ಎಂದರು.
‘ಈ ಪ್ರಕರಣದಲ್ಲಿ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ಅವರದ್ದೇ ತಪ್ಪು ಎಂಬುದರ ಬಗ್ಗೆ ಜಾಗೃತಿ ಮೂಡಿಸಲು ಜೆಡಿಎಸ್ ಮತ್ತು ಬಿಜೆಪಿ ನಾಯಕರು ಒಟ್ಟಿಗೇ ಜನರ ಬಳಿಗೆ ಹೋಗುತ್ತೇವೆ. ಕಾನೂನು ಹೋರಾಟವನ್ನೂ ನಡೆಸುತ್ತೇವೆ. ಈ ಬಗ್ಗೆ ಚರ್ಚಿಸಲು ವಿಶೇಷ ಆಧಿವೇಶನ ಕರೆಯಲಿ ಎಂದು ಮನವಿ ಸಲ್ಲಿಸುವ ಬಗ್ಗೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುತ್ತೇವೆ’ ಎಂದರು.
‘ಆರ್‌ಸಿಬಿ ವಿಜಯೋತ್ಸವದ ವೇಳೆ ಕ್ರಿಕೆಟ್ ಅಭಿಮಾನಿಗಳು ಸತ್ತಿದ್ದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಮೊಮ್ಮಗನ ಜತೆಗೆ ಜನಾರ್ದನ ಹೋಟೆಲ್‌ಗೆ ಹೋಗಿ ದೋಸೆ, ಬಾದಷಹ ತಿನ್ನುತ್ತಿದ್ದರು’ ಎಂದು ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದರು.
ಆಗ ಸುದ್ದಿಗಾರರು, ‘ಜನಾರ್ದನ ಹೋಟೆಲ್‌ನಲ್ಲಿ ಇದ್ದಾಗ ಕಾಲ್ತುಳಿತ ಮತ್ತು ಸಾವಿನ ಬಗ್ಗೆ ನನಗೆ ಮಾಹಿತಿಯೇ ಇರಲಿಲ್ಲ ಎಂದು ಮುಖ್ಯಮಂತ್ರಿ ಹೇಳಿದ್ದಾರೆ’ ಎಂದು ಪ್ರಸ್ತಾಪಿಸಿದರು.
ಅದಕ್ಕೆ ಕುಮಾರಸ್ವಾಮಿ ಅವರು, ‘3.10ರ ವೇಳೆಗೆ ಒಬ್ಬರು ಸತ್ತಿದ್ದಾರೆ ಎಂಬ ಮಾಹಿತಿ ನನಗೇ ದೊರೆತಿತ್ತು. ಅವರಿಗೆ ಮಾಹಿತಿ ಇರಲಿಲ್ಲ ಎಂಬುದು ನಿಜವೇ ಆಗಿದ್ದರೆ, ಇವರೆಂತಹ ಮುಖ್ಯಮಂತ್ರಿ’ ಎಂದು ಪ್ರಶ್ನಿಸಿದರು.
‘ಗುಪ್ತಚರ ಇಲಾಖೆ ಸಿದ್ದರಾಮಯ್ಯನವರೇ ನಿರ್ವಹಿಸುತ್ತಿದ್ದಾರೆ. ಹೀಗಿದ್ದೂ ಅವರಿಗೆ ಇಂತಹ ಮಹತ್ವದ ಮಾಹಿತಿ ಗೊತ್ತಾಗಿಲ್ಲ ಎಂದಾದರೆ ಒಂದೋ ಗುಪ್ತಚರ ಇಲಾಖೆ ಸಂಪೂರ್ಣವಾಗಿ ವಿಫಲವಾಗಿದೆ. ಇಲ್ಲವೇ ಆಡಳಿತದ ಮೇಲೆ ಸಿದ್ದರಾಮಯ್ಯನವರಿಗೆ ಹಿಡಿತವೇ ಇಲ್ಲ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿರುವಾಗ ಇಂತಹದ್ದನ್ನು ನಾನು ನಿರೀಕ್ಷಿಸಿರಲಿಲ್ಲ’ ಎಂದು ಅವರು ಹೇಳಿದರು.
ಸಿದ್ದರಾಮಯ್ಯ, ಶಿವಕುಮಾರ್, ಪರಮೇಶ್ವರ ನಿಜವಾದ ಆರೋಪಿಗಳು. ಈ ಮೂವರನ್ನು ಕ್ರಮವಾಗಿ ಎ1, ಎ2, ಎ3 ಆಗಿಸಿ ಎಫ್‌ಐಆರ್ ದಾಖಲಿಸಬೇಕು.-ಬಿ.ವೈ.ವಿಜಯೇಂದ್ರ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ
ಮ್ಯಾಜಿಸ್ಟೀರಿಯಲ್ ತನಿಖೆಗೆ ಆದೇಶ. ಆಮೇಲೆ ಕುನ್ಹಾ ರಿಂದ ಮತ್ತು ಸಿಐಡಿಯಿಂದಲೂ ತನಿಖೆಯಂತೆ. ಯಾವುದೂ ಬೇಡ. ಸುಪ್ರಿಂ ಕೋರ್ಟ್ ಸಿಜೆಐ ಅವರಿಂದ ತನಿಖೆಯಾಗಬೇಕು.-ಆರ್.ಅಶೋಕ, ವಿಧಾನಸಭೆಯ ವಿರೋಧ ಪಕ್ಷದ ನಾಯಕ
ಪಹಲ್ಗಾಮ್ ಘಟನೆಯಲ್ಲೂ ಅಮಾಯಕರು ಸತ್ತಿರಲಿಲ್ಲವೆ? ಅದೂ ಕೇಂದ್ರ ಸರ್ಕಾರದ ವೈಫಲ್ಯವಲ್ಲವೆ? ಪ್ರಧಾನಿ ನರೇಂದ್ರ ಮೋದಿ ಅವರಿಂದ ಯಾಕೆ ರಾಜೀನಾಮೆ ಕೇಳಲಿಲ್ಲ? ದುರಂತದಲ್ಲೂ ರಾಜಕೀಯ ಮಾಡುವುದು ಬಿಜೆಪಿಯ ಕೆಟ್ಟ ಚಾಳಿ. ಕಾಲ್ತುಳಿತದ ದುರಂತವನ್ನು ಪಹಲ್ಗಾಮ್ ಘಟನೆಗೆ ಹೋಲಿಸಲಾರೆ. ‘ಆಪರೇಷನ್ ಸಿಂಧೂರ’ ಯಾಕೆ ನಿಲ್ಲಿಸಿದರು ಎಂಬ ಪ್ರಶ್ನೆಗೆ ಬಿಜೆಪಿಯವರು ಇಲ್ಲಿಯವರೆಗೆ ಉತ್ತರ ಕೊಟ್ಟಿದ್ದಾರಾ?–ಮಧು ಬಂಗಾರಪ್ಪ, ಶಿಕ್ಷಣ ಸಚಿವ
ರಾಜ್ಯದಲ್ಲಿ ಏನೇ ಆದರೂ ಅದಕ್ಕೆ ಡಿ.ಕೆ. ಶಿವಕುಮಾರ್ ಮಾತ್ರ ಕಾರಣ. ವಿರೋಧ ಪಕ್ಷದವರಿಗೆ ಅವರನ್ನು ಟಾರ್ಗೆಟ್ ಮಾಡುವುದನ್ನು ಬಿಟ್ಟರೆ ಬೇರೇನೂ ಗೊತ್ತಿಲ್ಲ. ಎಚ್.ಡಿ. ಕುಮಾರಸ್ವಾಮಿ ಡ್ರಾಮಾ ಮಾಸ್ಟರ್. ಯಾವ ಸಂದರ್ಭದಲ್ಲಿ ಯಾವ ಡ್ರಾಮಾ ಮಾಡಬೇಕು, ವಿಷಯಗಳನ್ನು ಯಾವ ರೀತಿ ತಿರುಚಬೇಕು ಎನ್ನುವುದು ಅವರಿಗೆ ಚೆನ್ನಾಗಿ ಗೊತ್ತಿದೆ. ನಟ ರಾ.ರಾಜಕುಮಾರ್ ನಿಧನರಾದಾಗಲೂ ಅವಘಡ ಸಂಭವಿಸಿತ್ತು. ಆಗ ಮುಖ್ಯಮಂತ್ರಿಯಾಗಿದ್ದ ಎಚ್‌ಡಿಕೆ ರಾಜೀನಾಮೆ ಕೊಟ್ಟಿದ್ರಾ?–ಡಿ.ಕೆ. ಸುರೇಶ್, ಮಾಜಿ ಸಂಸದ
ಪೊಲೀಸ್ ಅಧಿಕಾರಿಗಳನ್ನು ಬಲಿಪಶು ಮಾಡಿಲ್ಲ. ಆದರೆ, ಅನುಮತಿ ಇಲ್ಲದೆ ಕಾರ್ಯಕ್ರಮಕ್ಕೆ ಅವಕಾಶ ನೀಡಿರುವುದಕ್ಕೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಸರ್ಕಾರವೇ ನೇರ ಹೊಣೆ ಅಲ್ಲ. ಉತ್ತರ ಪ್ರದೇಶದಲ್ಲಿ ನಡೆದ ಕುಂಭಮೇಳದ ಕಾಲ್ತುಳಿತದಲ್ಲಿ ಪ್ರವಾಸಿಗರು ಸತ್ತರು. ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರು, ಸೈನಿಕರೂ ಸತ್ತರು. ಅದಕ್ಕೆಲ್ಲ ಕೇಂದ್ರ ಸರ್ಕಾರವೇ ಹೊಣೆಯೇ?–ರಾಮಲಿಂಗಾರೆಡ್ಡಿ, ಸಾರಿಗೆ ಸಚಿವ
ಕಾಲ್ತುಳಿತ ದುರ್ಘಟನೆಗೆ ಸಂಬಂಧಿಸಿ ಬೆಂಗಳೂರು ಪೊಲೀಸ್ ಕಮಿಷನರ್ ದಯಾನಂದ್ ಅವರ ಅಮಾನತು ನಿರ್ಧಾರವನ್ನು ಯಾವ ಆಧಾರದಲ್ಲಿ ತೆಗೆದುಕೊಳ್ಳಲಾಗಿದೆ ಎಂದು ತಿಳಿದಿಲ್ಲ. ಅವರು ಉತ್ತಮ ಅಧಿಕಾರಿ, ಭ್ರಷ್ಟಾಚಾರ ವಿರೋಧಿ.–ಬಿ.ಕೆ ಹರಿಪ್ರಸಾದ್, ವಿಧಾನ ಪರಿಷತ್ ಸದಸ್ಯ
ಘಟನೆ ಗೊತ್ತಾದ ತಕ್ಷಣ ಸಿದ್ದರಾಮಯ್ಯ ಆಸ್ಪತ್ರೆಗೆ ಹೋದರು. ಡಿ.ಕೆ.ಶಿವಕುಮಾರ್ ನೆರವಿಗೆ ಧಾವಿಸಿದರು. ಶಿವಕುಮಾರ್ ಅವರು ಭಾವುಕರಾಗಿ ಕಣ್ಣೀರು ಹಾಕಿದ್ದನ್ನೂ ಗೇಲಿ ಮಾಡುವ ಬಿಜೆಪಿಯವರ ನಡೆ ನಾಚಿಕೆಗೇಡು. ಈ ವಿಷಯವನ್ನು ರಾಜಕೀಯಕ್ಕೆ ಬಳಸಿಕೊಳ್ಳಬಾರದು.ಎಚ್.ಕೆ.ಪಾಟೀಲ, ಪ್ರವಾಸೋದ್ಯಮ ಸಚಿವ
ಮೃತಪಟ್ಟ ಆರ್‌ಸಿಬಿ ಅಭಿಮಾನಿಗಳ ಕುಟುಂಬಗಳಿಗೆ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಮತ್ತು ಆರ್‌ಸಿಬಿ ತಂಡದ ಆಡಳಿತ ಮಂಡಳಿ ತಲಾ ₹1 ಕೋಟಿ ಪರಿಹಾರ ನೀಡಬೇಕು.–ಲಕ್ಷ್ಮೀ ಹೆಬ್ಬಾಳಕರ, ಸಚಿವೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ
ಆರ್‌ಸಿಬಿ ಆಟಗಾರರೊಂದಿಗೆ ಫೋಟೊ ತೆಗೆಸಿಕೊಂಡರೆ, ವಿಜಯದಲ್ಲಿ ತಮ್ಮ ಪಾಲು ಸಿಗುತ್ತದೆಂಬ ಜನಪ್ರಿಯತೆಯ ಭ್ರಮೆಯೇ ಕಾಲ್ತುಳಿತದ ಅನಾಹುತಕ್ಕೆ ಕಾರಣ.ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ರಾಜೀನಾಮೆ ನೀಡಬೇಕು–ಪ್ರಲ್ಹಾದ ಜೋಶಿ, ಕೇಂದ್ರ ಸಚಿವ
ಆರ್‌ಸಿಬಿ ಕ್ರಿಕೆಟ್ ತಂಡದ ಸಂಭ್ರಮಾಚರಣೆ ವೇಳೆ ನಡೆದ ದುರಂತಕ್ಕೆ ಮುಖ್ಯಮಂತ್ರಿ ಮತ್ತು ಸಚಿವರ ಸೆಲ್ಫಿ–ರೀಲ್ಸ್ ಹುಚ್ಚು ಅಲ್ಲದೇ ಸರ್ಕಾರದ ವೈಫಲ್ಯವೂ ಕಾರಣ. ಪ್ರಚಾರಪ್ರಿಯತೆ ಮತ್ತು ನಿರ್ಲಕ್ಷ್ಯದಿಂದ ಅವಘಡ ನಡೆದಿದೆ.–ಬಿ. ಶ್ರೀರಾಮುಲು, ಮಾಜಿ ಸಚಿವ
ಆರ್‌ಸಿಬಿ ವಿಜಯೋತ್ಸವದ ವೇಳೆ ನಡೆದ ದುರಂತಕ್ಕೆ ಸಿಎಂ, ಡಿಸಿಎಂ, ಗೃಹ ಸಚಿವರ ಬೇಜವಾಬ್ದಾರಿ ಕಾರಣ. ತಮ್ಮ ತಪ್ಪು ಮುಚ್ಚಿಕೊಳ್ಳಲು ಪ್ರಾಮಾಣಿಕ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ.–ಬಿ.ಎಲ್.ಸಂತೋಷ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.