ADVERTISEMENT

Bengaluru Tech Summit | ಬೆಂಗಳೂರಿನಲ್ಲಿ ನವೋದ್ಯಮ ಪಾರ್ಕ್‌: ಬಸವರಾಜ ಬೊಮ್ಮಾಯಿ

ಮೂರು ದಿನಗಳ ‘ಬೆಂಗಳೂರು ಟೆಕ್‌ ಸಮ್ಮಿಟ್‌’ಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2022, 21:40 IST
Last Updated 16 ನವೆಂಬರ್ 2022, 21:40 IST
ಸಮಾರಂಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ‘ಬೆಂಗಳೂರು ಟೆಕ್‌ ಸಮ್ಮಿಟ್‌’ನ ರಜತ ಮಹೋತ್ಸವ ಸ್ಮರಣಿಕೆ ಬಿಡುಗಡೆ ಮಾಡಿದರು. ಫಿನ್ಲೆಂಡ್‌ನ ವಿಜ್ಞಾನ, ಸಂಸ್ಕೃತಿ ಸಚಿವ ಪೆಟ್ರೊ ಹೊಂಕೊನೆನ್‌, ರಾಜ್ಯದ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಡಾ.ಸಿ.ಎನ್‌. ಅಶ್ವತ್ಥ ನಾರಾಯಣ, ಯುಎಇಯ ಕೃತಕ ಬುದ್ಧಿಮತ್ತೆ, ಡಿಜಿಟಲ್‌ ಆರ್ಥಿಕತೆ ಹಾಗೂ ರಿಮೋಟ್ ತಂತ್ರಾಂಶಗಳ ಖಾತೆ ರಾಜ್ಯ ಸಚಿವ ಒಮರ್‌ ಬಿನ್‌ ಸುಲ್ತಾನ್‌ ಅಲ್‌ ಒಲಾಮ ಇದ್ದರು
ಸಮಾರಂಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ‘ಬೆಂಗಳೂರು ಟೆಕ್‌ ಸಮ್ಮಿಟ್‌’ನ ರಜತ ಮಹೋತ್ಸವ ಸ್ಮರಣಿಕೆ ಬಿಡುಗಡೆ ಮಾಡಿದರು. ಫಿನ್ಲೆಂಡ್‌ನ ವಿಜ್ಞಾನ, ಸಂಸ್ಕೃತಿ ಸಚಿವ ಪೆಟ್ರೊ ಹೊಂಕೊನೆನ್‌, ರಾಜ್ಯದ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಡಾ.ಸಿ.ಎನ್‌. ಅಶ್ವತ್ಥ ನಾರಾಯಣ, ಯುಎಇಯ ಕೃತಕ ಬುದ್ಧಿಮತ್ತೆ, ಡಿಜಿಟಲ್‌ ಆರ್ಥಿಕತೆ ಹಾಗೂ ರಿಮೋಟ್ ತಂತ್ರಾಂಶಗಳ ಖಾತೆ ರಾಜ್ಯ ಸಚಿವ ಒಮರ್‌ ಬಿನ್‌ ಸುಲ್ತಾನ್‌ ಅಲ್‌ ಒಲಾಮ ಇದ್ದರು   

ಬೆಂಗಳೂರು: ಸಂಶೋಧನೆ, ಅಭಿವೃದ್ಧಿ ಮತ್ತು ಆವಿಷ್ಕಾರಗಳನ್ನು ಉತ್ತೇಜಿಸುವ ಸಲುವಾಗಿ ಇಲ್ಲಿನ ಕೆಂಪೇಗೌಡ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ ದಲ್ಲಿ ನವೋದ್ಯಮ ಪಾರ್ಕ್‌ ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಕಟಿಸಿದರು.

ನಗರದ ಅರಮನೆ ಮೈದಾನದಲ್ಲಿ ಬುಧವಾರ ಆರಂಭವಾದ ಮೂರು ದಿನಗಳ ‘ಬೆಂಗಳೂರು ಟೆಕ್‌ ಸಮ್ಮಿಟ್‌’ ಉದ್ಘಾಟನಾ ಸಮಾರಂಭದಲ್ಲಿ ‘ಬೆಂಗಳೂರು ಟೆಕ್‌ ಸಮ್ಮಿಟ್‌ ರಜತ ಮಹೋತ್ಸವ’ ಲಾಂಛನ ಬಿಡುಗಡೆ ಮಾಡಿ ಮಾತನಾಡಿದ ಅವರು, ‘ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ಫಿನ್‌ಟೆಕ್‌ ಸೇರಿದಂತೆ ಹಲವು ಕ್ಷೇತ್ರಗಳಿಗೆ ಸಂಬಂಧಿಸಿದ ನವೋದ್ಯಮಗಳು ಬೆಂಗಳೂರಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿವೆ. ರಾಜಧಾನಿಯು ಈಗ ನವೋದ್ಯಮಗಳ ಕೇಂದ್ರವಾಗಿದೆ. ಅವುಗಳಿಗೆ ಮತ್ತಷ್ಟು ಉತ್ತೇಜನ ನೀಡುವ ಉದ್ದೇಶದಿಂದ 6 ತಿಂಗಳೊಳಗೆ ನವೋದ್ಯಮ ಪಾರ್ಕ್‌ ಸ್ಥಾಪನೆ ಮಾಡ ಲಾಗುವುದು’ ಎಂದರು.

ನಗರದಲ್ಲಿ 400ಕ್ಕೂ ಹೆಚ್ಚು ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರಗಳಿವೆ. ಜಗತ್ತಿನ ವಿವಿಧ ರಾಷ್ಟ್ರಗಳಿಂದ ನಿತ್ಯವೂ 5,000ಕ್ಕೂ ಹೆಚ್ಚು ಎಂಜಿನಿಯರ್‌ಗಳು, ತಂತ್ರಜ್ಞರು ಬೆಂಗಳೂರಿಗೆ ಬಂದು ಹೋಗುತ್ತಿದ್ದಾರೆ. ನವೋದ್ಯಮ ಪಾರ್ಕ್‌ ನಿರ್ಮಾಣದ ಮೂಲಕ ಮತ್ತಷ್ಟು ಸಂಶೋಧನೆ, ಆವಿಷ್ಕಾರಗಳಿಗೆ ಅವಕಾಶ ಕಲ್ಪಿಸಲಾಗುವುದು ಎಂದು ಬಸವರಾಜ ಬೊಮ್ಮಾಯಿ ಅವರು ಹೇಳಿದರು.

ADVERTISEMENT

ಆರು ಹೊಸ ನಗರ: ಬೆಂಗಳೂರಿನ ಆಚೆಗೆ ಹೂಡಿಕೆ ಆಕರ್ಷಿಸುವುದಕ್ಕೆ ತಮ್ಮ ಸರ್ಕಾರ ಕೆಲಸ ಮಾಡುತ್ತಿದೆ. ಈ ಉದ್ದೇಶದಿಂದ ಆರು ಹೊಸ ನಗರಗಳನ್ನು ನಿರ್ಮಿಸಲು ತೀರ್ಮಾನಿಸಲಾಗಿದೆ ಎಂದರು. ಕಲಬುರಗಿ, ಹುಬ್ಬಳ್ಳಿ–ಧಾರ ವಾಡ, ಮೈಸೂರು ಮತ್ತು ಮಂಗಳೂರು ಸುತ್ತಮುತ್ತ ಹೊಸ ನಗರಗಳು ನಿರ್ಮಾಣವಾಗಲಿವೆ ಎಂದು ಅವರು ತಿಳಿಸಿದರು.

ಕೆಐಎಎಲ್‌ ಸಮೀಪದಲ್ಲಿ ವಿಜ್ಞಾನ, ತಂತ್ರಜ್ಞಾನ ಮತ್ತು ಜ್ಞಾನಾಧಾರಿತ ಕೇಂದ್ರಗಳಿಗೆ ‍ಪೂರಕವಾಗಿರುವಂತೆ ‘ಜ್ಞಾನ ನಗರ’ ನಿರ್ಮಿಸಲಾಗುವುದು ಎಂದರು.

ಪರಿಸರಸ್ನೇಹಿ ಅಭಿವೃದ್ಧಿ ಅಗತ್ಯ: ‘ನಮ್ಮ ಪೂರ್ವಜರು ನಮಗೆ ಉತ್ತಮವಾದ ಪರಿಸರವನ್ನು ಕೊಡುಗೆಯಾಗಿ ನೀಡಿ ದ್ದಾರೆ. ಈ ಪರಿಸರವನ್ನು ಉತ್ತಮ ರೀತಿಯಲ್ಲಿ ಸಂರಕ್ಷಿಸಿ ಮುಂದಿನ ಪೀಳಿಗೆಗೆ ನೀಡುವುದು ನಮ್ಮ ಹೊಣೆಗಾರಿಕೆ. ಅದಕ್ಕೆ ಪೂರಕವಾಗಿ ಪರಿಸರ ಸ್ನೇಹಿ ಅಭಿವೃದ್ಧಿ ಕಾರ್ಯ ಆಗಬೇಕು. ಇದಕ್ಕಾಗಿ ಪರಿಸರ ಕೇಂದ್ರಿತ ಸಂಶೋಧನೆ, ಅಭಿವೃದ್ಧಿ ಮತ್ತು ಆವಿಷ್ಕಾರ ನಡೆಯಬೇಕು’ ಎಂದು ಹೇಳಿದರು.

ಅತ್ಯಾಧುನಿಕ ಮಾದರಿಯ ‘ಸ್ಮಾರ್ಟ್‌ ನಗರ’ಗಳ ನಿರ್ಮಾಣ ಆಗಬೇಕಿದೆ. ಮಾನವ ಜನಾಂಗ ಆರೋಗ್ಯಕ್ಕೆ ಸಂಬಂಧಿಸಿದಂತೆ ಎದುರಿಸುತ್ತಿರುವ ಗಂಭೀರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು.

ಈ ದಿಸೆಯಲ್ಲೂ ತಂತ್ರಜ್ಞಾನ ಕ್ಷೇತ್ರದಲ್ಲಿ ರುವವರು ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

‘₹ 36,804 ಕೋಟಿ ಹೂಡಿಕೆ’
‘ಎಲೆಕ್ಟ್ರಾನಿಕ್‌ ಕ್ಷೇತ್ರದ ಹಲವು ಉದ್ದಿಮೆಗಳು ರಾಜ್ಯದಲ್ಲಿ₹ 36,804 ಕೋಟಿ ಹೂಡಿಕೆ ಮಾಡಲಿವೆ. ರಾಜ್ಯದ ವಿವಿಧೆಡೆ ಈ ಕಂಪನಿಗಳು ಉತ್ಪಾದನಾ ಚಟುವಟಿಕೆ ಆರಂಭಿಸಲಿವೆ’ಎಂದು ಮಾಹಿತಿ ತಂತ್ರಜ್ಞಾನ ಸಚಿವ ಡಾ.ಸಿ.ಎನ್‌. ಅಶ್ವತ್ಥ ನಾರಾಯಣ ತಿಳಿಸಿದರು.

‘ರಾಜ್ಯದಲ್ಲಿ ಈಗ ಐ.ಟಿ ಮತ್ತು ಬಿ.ಟಿ ವಲಯದಲ್ಲಿ 135 ಶತಕೋಟಿ ಡಾಲರ್‌ ಮೊತ್ತದ ವಹಿವಾಟು ನಡೆಯುತ್ತಿದೆ. 2025ರ ವೇಳೆಗೆ ಈ ವಹಿವಾಟಿನ ಪ್ರಮಾಣವನ್ನು 300 ಶತಕೋಟಿ ಡಾಲರ್‌ಗಳಿಗೆ ಹೆಚ್ಚಿಸುವ ಗುರಿ ಇದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.