
ಬೆಂಗಳೂರು ತಂತ್ರಜ್ಞಾನ ಶೃಂಗಸಭೆ–2025
ಬೆಂಗಳೂರು: 28ನೇ ಆವೃತ್ತಿಯ ‘ಬೆಂಗಳೂರು ತಂತ್ರಜ್ಞಾನ ಶೃಂಗಸಭೆ’ ಇದೇ 18ರಿಂದ (ಮಂಗಳವಾರ) ಆರಂಭವಾಗಲಿದ್ದು, ಒಟ್ಟು ಮೂರು ದಿನ ನಡೆಯಲಿದೆ.
ತುಮಕೂರು ರಸ್ತೆಯಲ್ಲಿರುವ ಬೆಂಗಳೂರು ಅಂತರರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ (ಬಿಐಇಸಿ) ಇದೇ ಮೊದಲ ಬಾರಿಗೆ ಬೆಂಗಳೂರು ತಂತ್ರಜ್ಞಾನ ಶೃಂಗಸಭೆಯನ್ನು (ಬಿಟಿಎಸ್) ಆಯೋಜಿಸಲಾಗುತ್ತಿದೆ. ಈ ಹಿಂದೆಂದಿಗಿಂತ ದೊಡ್ಡ ಮಟ್ಟದಲ್ಲಿ ಬಿಟಿಎಸ್ ಆಯೋಜಿಸಲು ಮಾಹಿತಿ ತಂತ್ರಜ್ಞಾನ ಇಲಾಖೆ ಸಕಲ ಸಿದ್ಧತೆ ಮಾಡಿಕೊಂಡಿದೆ.
ಮಾಹಿತಿ ತಂತ್ರಜ್ಞಾನ ಮತ್ತು ಡೀಪ್‌ಟೆಕ್, ಎಐ ಬ್ರಹ್ಮಾಂಡ, ಸೆಮಿಕಾನ್, ಡಿಜಿ–ಆರೋಗ್ಯ ಮತ್ತು ಜೈವಿಕ ತಂತ್ರಜ್ಞಾನ, ನವೋದ್ಯಮ ಪರಿಸರ, ರಕ್ಷಣೆ ಮತ್ತು ಬಾಹ್ಯಾಕಾಶ ಎಂಬ ಪರಿಕಲ್ಪನೆಗಳ ಅಡಿಯಲ್ಲಿ ಪ್ರದರ್ಶನ ಹಾಗೂ ಗೋಷ್ಠಿಗಳನ್ನು ರೂಪಿಸಲಾಗಿದೆ.
ಕೃತಕ ಬುದ್ಧಿಮತ್ತೆ (ಎಐ) ಎಂಬುದೇ ಮಾಹಿತಿ ತಂತ್ರಜ್ಞಾನ ಎಂದು ಸಂವಾದಿಯಾಗಿ ಬಳಕೆಯಾಗುತ್ತಿರುವ ಹೊತ್ತಿದು. ಬಿಟಿಎಸ್ ಎಐಗೆ ಹೆಚ್ಚು ಒತ್ತು ನೀಡಿದ್ದು, ಅದರ ಹತ್ತಾರು ಸ್ವರೂಪಗಳನ್ನು ತೆರೆದಿಡುವಂತಹ ಗೋಷ್ಠಿಗಳನ್ನು ರೂಪಿಸಲಾಗಿದೆ. ಜತೆಗೆ ಎಐ ಕ್ಷೇತ್ರಕ್ಕೆ ಸಂಬಂಧಿಸಿದ ನೂರಕ್ಕೂ ಹೆಚ್ಚು ಮಳಿಗೆಗಳು ಬಿಟಿಎಸ್‌ನಲ್ಲಿ ಇರಲಿವೆ.
1,200ಕ್ಕೂ ಹೆಚ್ಚು ಮಳಿಗೆಗಳಲ್ಲಿ ಪ್ರದರ್ಶನಗಳು ನಡೆಯಲಿವೆ. ದೇಶ–ವಿದೇಶಗಳ ತಂತ್ರಜ್ಞಾನ ಕ್ಷೇತ್ರದ 10,000ಕ್ಕೂ ಹೆಚ್ಚು ಪ್ರತಿನಿಧಿಗಳು, 50,000ಕ್ಕೂ ಅಧಿಕ ವೀಕ್ಷಕರು ಬಿಟಿಎಸ್‌ನಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ನವೋದ್ಯಮಗಳು, ಸಂಶೋಧಕರು, ಹೂಡಿಕೆದಾರರನ್ನು ಒಂದೆಡೆ ಸೇರಿಸಿ ಮುಖಾಮುಖಿಯಾಗಿಸುವ ಹಲವು ವೇದಿಕೆ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ.
ನವೋದ್ಯಮ, ತಂತ್ರಜ್ಞಾನ ಉದ್ಯಮಗಳು ತಮ್ಮ ಉತ್ಪನ್ನಗಳನ್ನು ಬಿಟಿಎಸ್‌ನಲ್ಲಿಯೇ ಅನಾವರಣ ಮಾಡಲು ಮತ್ತು ಮಾರುಕಟ್ಟೆಗೆ ಬಿಡುಗಡೆ ಮಾಡಲು ಅವಕಾಶ ಕಲ್ಪಿಸಲಾಗಿದೆ.
60 ದೇಶಗಳ ಪ್ರತಿನಿಧಿಗಳು ಭಾಗಿ
* 100+ತಂತ್ರಜ್ಞಾನ ಗೋಷ್ಠಿಗಳು 1200+ಪ್ರದರ್ಶನ ಮಳಿಗೆಗಳು 10000+ತಂತ್ರಜ್ಞಾನ ಕ್ಷೇತ್ರದ ಪರಿಣಿತರು ಮತ್ತು ಪ್ರತಿನಿಧಿಗಳು ಭಾಗಿ. 50000+ಆಸಕ್ತರು ವಿದ್ಯಾರ್ಥಿಗಳು ವೀಕ್ಷಕರು ಭೇಟಿ ನೀಡುವ ನಿರೀಕ್ಷೆ.
* ನವೆಂಬರ್ 18 19 ಮತ್ತು 20ರಂದು ಮೂರು ದಿನಗಳ ತಂತ್ರಜ್ಞಾನ ಶೃಂಗಸಭೆ
* ತುಮಕೂರು ರಸ್ತೆಯಲ್ಲಿರುವ ಬೆಂಗಳೂರು ಅಂತರರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ ಆಯೋಜನೆ
* ನವೋದ್ಯಮ ಪುರಸ್ಕಾರ ಸುಸ್ಥಿರ ಮಳಿಗೆ ಪುರಸ್ಕಾರ ಟಿಸಿಎಸ್ ಗ್ರಾಮೀಣ ರಸಪ್ರಶ್ನೆ ಕಾರ್ಯಕ್ರಮ
* 9 ಭಿನ್ನ ಪರಿಕಲ್ಪನೆಗಳ ಅಡಿಯಲ್ಲಿ ಪ್ರದರ್ಶನ ಗೋಷ್ಠಿ ಆಯೋಜನೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.