ADVERTISEMENT

₹3 ಲಕ್ಷ ಲಂಚ: ಬೆಸ್ಕಾಂ ಇಇ ರಾಜೇಶ್‌ ಕೆ.ವಿ. ಬಂಧನ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2026, 15:56 IST
Last Updated 9 ಫೆಬ್ರುವರಿ 2026, 15:56 IST
   

ಬೆಂಗಳೂರು: ವಿದ್ಯುತ್ ಮೀಟರ್‌ ಸಂಪರ್ಕ ಮರುಚಾಲನೆ ಮಾಡಲು ಮತ್ತು ನೂತನ ಸಂಪರ್ಕ ನೀಡುವ ಸಲುವಾಗಿ ₹3 ಲಕ್ಷ ಲಂಚ ಪಡೆಯುತ್ತಿದ್ದ ವೇಳೆ ಬೆಸ್ಕಾಂನ ಇಂದಿರಾ ನಗರ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್‌ (ಇಇ) ರಾಜೇಶ್‌ ಕೆ.ವಿ. ಅವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.

ವಿದ್ಯುತ್ ಗುತ್ತಿಗೆದಾರ ದಿಲೀಪ್‌.ಎಸ್‌.ಎನ್‌ ಅವರು ಇಂದಿರಾನಗರ ಬೆಸ್ಕಾಂ ಕಚೇರಿ ವ್ಯಾಪ್ತಿಯಲ್ಲಿ ವಾಣಿಜ್ಯ ಕಟ್ಟಡವೊಂದಕ್ಕೆ ವಿದ್ಯುತ್ ಕಾಮಗಾರಿ ನಡೆಸುತ್ತಿದ್ದಾರೆ. ಆ ಕಟ್ಟಡಕ್ಕೆ 24 ಕಿಲೋವಾಟ್‌ ಸಾಮರ್ಥ್ಯದ ನೂತನ ಸಂಪರ್ಕ ಪಡೆಯಲು ಅರ್ಜಿ ಸಲ್ಲಿಸಿದ್ದರು. 

ಈ ಕೆಲಸಕ್ಕೆ ರಾಜೇಶ್‌ ಕೆ.ವಿ ಅವರು ₹7 ಲಕ್ಷ ಲಂಚ ನೀಡುವಂತೆ ಬೇಡಿಕೆ ಇಟ್ಟು, ₹3 ಲಕ್ಷಕ್ಕೆ ಒಪ್ಪಿಕೊಂಡಿದ್ದರು. ಈ ಬಗ್ಗೆ ದಿಲೀಪ್ ಅವರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.

ADVERTISEMENT

ಲೋಕಾಯುಕ್ತ ಎಸ್‌ಪಿ ಶಿವಪ್ರಕಾಶ್‌ ದೇವರಾಜ್ ಅವರ ಮಾರ್ಗದರ್ಶನದಲ್ಲಿ ಇನ್‌ಸ್ಪೆಕ್ಟರ್‌ಗಳಾದ ಎಸ್‌.ಬಿ.ಪಾಟೀಲ, ಕೇಶವಮೂರ್ತಿ ಮತ್ತು ರಾಜಶೇಖರಯ್ಯ ಅವರ ತಂಡವು ಕಾರ್ಯಾಚರಣೆ ರೂಪಿಸಿತ್ತು. ಅದರಂತೆ ದಿಲೀಪ್‌ ಅವರು ಸೋಮವಾರ, ರಾಜೇಶ್‌ ಅವರಿಗೆ ₹3 ಲಕ್ಷ ನೀಡಿದ್ದರು. ಇದೇ ವೇಳೆ ದಾಳಿ ನಡೆಸಿ ಅವರನ್ನು ಬಂಧಿಸಲಾಯಿತು. ಲಂಚದ ಹಣ ವಶಕ್ಕೆ ಪಡೆದಿದ್ದು, ತನಿಖೆ ಮುಂದುವರಿದಿದೆ ಎಂದು ಲೋಕಾಯುಕ್ತದ ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.