ADVERTISEMENT

‘ವಿದ್ಯಾನಿಧಿ’ ಸಂಸ್ಥೆಗೆ ಅತ್ಯುತ್ತಮ ಪ್ರಕಾಶನ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2018, 20:27 IST
Last Updated 30 ನವೆಂಬರ್ 2018, 20:27 IST
ಚಿತ್ರ
ಚಿತ್ರ   

ಬೆಂಗಳೂರು:ಕನ್ನಡ ಪುಸ್ತಕ ಪ್ರಾಧಿಕಾರವು 2017ನೇ ವಾರ್ಷಿಕ ಪ‍್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ಪ್ರಕಟಿಸಿದ್ದು, ಗದಗದ ವಿದ್ಯಾನಿಧಿ ಪ್ರಕಾಶನವು ‘ಅತ್ಯುತ್ತಮ ಪ್ರಕಾಶನ ಪ್ರಶಸ್ತಿ’ಗೆ ಆಯ್ಕೆಯಾಗಿದೆ. ಪ್ರಶಸ್ತಿಯು ₹1 ಲಕ್ಷ ಬಹುಮಾನ ಒಳಗೊಂಡಿದೆ.

ಡಾ.ಎಂ.ಎಂ.ಕಲಬುರ್ಗಿ ಮಾನವಿಕ ಅಧ್ಯಯನ ಪ್ರಶಸ್ತಿಗೆ (₹75 ಸಾವಿರ ಬಹುಮಾನ) ವಿದ್ವಾಂಸ ಷ.ಶೆಟ್ಟರ್, ಡಾ.ಜಿ.ಪಿ. ರಾಜರತ್ನಂ ಸಾಹಿತ್ಯ ಪರಿಚಾರಕ ಪ್ರಶಸ್ತಿಗೆ(₹50 ಸಾವಿರ ಬಹುಮಾನ) ಪ್ರಕಾಶಕ ನ.ರವಿಕುಮಾರ್‌ ಹಾಗೂ ಅನುಪಮಾ ನಿರಂಜನ ವೈದ್ಯ ಮತ್ತು ವಿಜ್ಞಾನ ಸಾಹಿತ್ಯ ಪ್ರಶಸ್ತಿಗೆ(₹25 ಸಾವಿರ ಬಹುಮಾನ) ವೈದ್ಯ ಸಾಹಿತಿ ಎಚ್.ಗಿರಿಜಮ್ಮ ಅವರು ಪಾತ್ರರಾಗಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಪ್ರಾಧಿಕಾರದ ಅಧ್ಯಕ್ಷೆ ವಸುಂಧರಾ ಭೂಪತಿ ಈ ಮಾಹಿತಿ ನೀಡಿದರು.

ADVERTISEMENT

‘ಯುವ ಬರಹಗಾರರ ಚೊಚ್ಚಲ ಕೃತಿಯ ಪ್ರೋತ್ಸಾಹ ಧನಕ್ಕೆ ಕೇವಲ 30 ಕೃತಿಗಳನ್ನು ಆಯ್ಕೆ ಮಾಡಲಾಗುತ್ತಿತ್ತು. ಆದರೆ, ಪ್ರಾಧಿಕಾರದಬೆಳ್ಳಿ ಹಬ್ಬದ ನಿಮಿತ್ತ ಈ ಸಂಖ್ಯೆಯನ್ನು ಹೆಚ್ಚಿಸಲಾಗಿದೆ. ಹಾಗಾಗಿ, ಪ್ರೋತ್ಸಾಹ ಧನಕ್ಕೆ ಈ ಬಾರಿ 136 ಹಸ್ತ ಪ್ರತಿಗಳು ಬಂದಿದ್ದು, 53 ಕೃತಿಗಳು ಆಯ್ಕೆಯಾಗಿವೆ’ ಎಂದರು.

‘ಇದೇ ಮೊದಲ ಬಾರಿಗೆ ದಲಿತ ಸಾಹಿತಿಗಳ ಕೃತಿ ಪ್ರಕಟಣೆಗೆ ಧನಸಹಾಯ ನೀಡಲು ಪ್ರಾಧಿಕಾರ ಮುಂದಾಗಿದ್ದು, 104 ಹಸ್ತ ಪ್ರತಿಗಳು ಬಂದಿದ್ದವು. 51 ಕೃತಿಗಳು ಆಯ್ಕೆಯಾಗಿವೆ.60 ಪುಟಗಳ ಕೃತಿಗೆ ₹15 ಸಾವಿರ, 100 ಪುಟಗಳ ಕೃತಿಗೆ ₹20,000, 150– 200 ಪುಟಗಳ ಕೃತಿಗೆ ₹30,000 ಹಾಗೂ 200ಕ್ಕೂ ಹೆಚ್ಚು ಪುಟಗಳಿರುವ ಕೃತಿಗೆ ₹35,000 ಧನ ಸಹಾಯ ನೀಡಲಾಗುತ್ತದೆ’ ಎಂದು ತಿಳಿಸಿದರು.

‘ವಿವಿಧ ವಾರ್ಷಿಕ ಪ್ರಶಸ್ತಿಪ್ರದಾನ ಹಾಗೂ ಪುಸ್ತಕ ಸೊಬಗು ಬಹುಮಾನ ಮತ್ತುಚೊಚ್ಚಲ ಕೃತಿಗಳ ಬಿಡುಗಡೆ ಕಾರ್ಯಕ್ರಮ ಡಿಸೆಂಬರ್‌ನಲ್ಲಿ ನಡೆಯಲಿದೆ.ದಲಿತ ಸಾಹಿತಿಗಳ ಕೃತಿಗಳ ಬಿಡುಗಡೆ ಕಾರ್ಯಕ್ರಮ ಡಿಸೆಂಬರ್‌ 27ರಂದು ಬದಾಮಿಯಲ್ಲಿ ನಡೆಯಲಿದೆ’ ಎಂದು ತಿಳಿಸಿದರು.

ಫೆಬ್ರವರಿಯಲ್ಲಿ ಪುಸ್ತಕ ಮೇಳ: ‘ಈ ಬಾರಿಯ ಪುಸ್ತಕ ಮೇಳ ಫೆಬ್ರವರಿಯಲ್ಲಿ ಐದು ದಿನಗಳ ಕಾಲ ಬೆಂಗಳೂರಿನ ನ್ಯಾಷನಲ್‌ ಕಾಲೇಜಿನ ಆವರಣದಲ್ಲಿ ನಡೆಸಲಿದ್ದೇವೆ. ಕಲಬುರ್ಗಿ, ಧಾರವಾಡ ಸೇರಿದಂತೆ ಒಟ್ಟು ನಾಲ್ಕು ಕಡೆ ಪುಸ್ತಕ ಮೇಳ ನಡೆಸುವ ಯೋಜನೆ ಇದೆ’ ಎಂದರು.

2017ನೇ ಸಾಲಿನ ಪುಸ್ತಕ ಸೊಗಸು ಬಹುಮಾನಕ್ಕೆ ಆಯ್ಕೆಯಾದ ಕೃತಿಗಳ ವಿವರ

ಕೃತಿ/ಲೇಖಕರು; ಪ್ರಕಾಶನ ಸಂಸ್ಥೆ, ಮುಖಪುಟ ವಿನ್ಯಾಸ, ಚಿತ್ರ ಕಲಾವಿದರು ಹಾಗೂ ಮುದ್ರಣಾಲಯ;ಬಹುಮಾನ(ರೂ.ಗಳಲ್ಲಿ)

ಕರುನಾಡ ಕೋಟೆಗಳ ಸುವರ್ಣ ನೋಟ–ಸಂಪಾದಕರು–ವಿಶ್ವನಾಥ ಸುವರ್ಣ ;ಸುವರ್ಣ ಪಬ್ಲಿಕೇಷನ್‌;ಪ್ರಥಮ ಬಹುಮಾನ–25,000

ಯುಗಪುರುಷ ಮಹಾವೀರ ಮಹಾರಾಣಾ ಪ್ರತಾಪ್–ಲೇಖಕ ಎನ್‌.ಗುರುಮೂರ್ತಿ;ಶ್ರೀ ಭವತಾರಿಣಿ ಪ್ರಕಾಶನ; ದ್ವಿತೀಯ ಬಹುಮಾನ– 20,000

ಬಾಬಾ ಸಾಹೇಬರೆಡೆಗೆ ಖರ್ಗೆ ಜೀವನ ಕಥನ– ಲೇಖಕ ಪ್ರೊ.ಎಚ್‌.ಟಿ.ಪೋತೆ;ಸಿವಿಜಿ ಬುಕ್ಸ್‌; ತೃತೀಯ ಬಹುಮಾನ–10,000

*

ಮಕ್ಕಳ ಪುಸ್ತಕ ಸೊಗಸು ಬಹುಮಾನ

ಪುಟ್ಟಿಯ ಗಿರಗಟ್ಟೆ– ಲೇಖಕ ಬಾಗೂರು ಮಾರ್ಕಂಡೇಯ;ಎಸ್.ಎಲ್.ಎನ್ ಪಬ್ಲಿಕೇಷನ್‌;8,000

ಮುಖಪುಟ ಚಿತ್ರ ವಿನ್ಯಾಸ ಬಹುಮಾನ

ಕರಿ ಕಣಗಿಲ– ಲೇಖಕಕೆ.ಪುರುಷೋತ್ತಮ, ಅನುವಾದ– ಎಚ್‌.ಎಸ್‌.ಅನುಪಮಾ; ಬಹುಮಾನಿತ ಕಲಾವಿದರು– ಜಿ.ಅರುಣಕುಮಾರ, ಕೃಷ್ಣ ಗಿಳಿಯಾರ್‌; 10,000

ಮುಖಪುಟ ಚಿತ್ರಕಲೆಯ ಬಹುಮಾನ

ಹಲಗೆ ಮತ್ತು ಮೆದುಬೆರಳು– ಲೇಖಕಿ ಕಾದಂಬಿನಿ;ಬಹುಮಾನಿತ ಕಲಾವಿದರು– ಗಿರಿಧರ ಕಾರ್ಕಳ; 8,000

ಪುಸ್ತಕ ಮುದ್ರಣ ಸೊಗಸು ಬಹುಮಾನ

ವಚನ ಮಾರ್ಗ – ಸಂಪಾದಕ ಡಾ.ಶಿವಮೂರ್ತಿ ಮುರುಘಾ ಸ್ವಾಮೀಜಿ; ಮುದ್ರಣಾಲಯ ಸ್ಟ್ಯಾನ್‌ ಪ್ರಿಂಟರ್ಸ್‌; 5,000

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.