ADVERTISEMENT

ಭದ್ರಾ ಮೇಲ್ದಂಡೆ ಯೋಜನೆಗೆ ರಾಜ್ಯ ಸರ್ಕಾರ ಅಸಹಕಾರ: ಕೇಂದ್ರ ಸಚಿವ ಸೋಮಣ್ಣ ಆರೋಪ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2025, 14:08 IST
Last Updated 31 ಡಿಸೆಂಬರ್ 2025, 14:08 IST
ವಿ.ಸೋಮಣ್ಣ 
ವಿ.ಸೋಮಣ್ಣ    

ನವದೆಹಲಿ: ಭದ್ರಾ ಮೇಲ್ದಂಡೆ ಯೋಜನೆಗೆ ₹5,300 ಕೋಟಿ ಬಿಡುಗಡೆಗೆ ಮುನ್ನ ಕರ್ನಾಟಕ ಸರ್ಕಾರ ಕೆಲವೊಂದು ಸ್ಪಷ್ಟೀಕರಣಗಳನ್ನು ನೀಡಬೇಕು. ಆದರೆ, ರಾಜ್ಯ ಸರ್ಕಾರವು ಆ ಸ್ಪಷ್ಟೀಕರಣಗಳನ್ನು ನೀಡದೆ ಅಸಹಕಾರ ತೋರುತ್ತಿದೆ ಎಂದು ಕೇಂದ್ರ ಜಲಶಕ್ತಿ ರಾಜ್ಯ ಸಚಿವ ವಿ.ಸೋಮಣ್ಣ ಆರೋಪಿಸಿದರು. 

ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜ್ಯ ಸರ್ಕಾರಕ್ಕೆ ಈ ಸಂಬಂಧ ಹಲವು ಪತ್ರಗಳನ್ನು ಬರೆಯಲಾಗಿದೆ. ಸರ್ಕಾರವು ಕೇಂದ್ರ ಜಲ ಆಯೋಗಕ್ಕೆ ಸ್ಪಷ್ಟೀಕರಣಗಳನ್ನು ನೀಡಬೇಕಿದೆ. ಯೋಜನೆಗೆ ಈ ವರೆಗೆ ಆಗಿರುವ ವೆಚ್ಚ, ಕಾಮಗಾರಿ ವಿವರಗಳು, ಪರಿಷ್ಕೃತ ಅಂದಾಜು ವೆಚ್ಚಗಳನ್ನು ಒದಗಿಸುವಂತೆ ನಿರ್ದೇಶನ ನೀಡಲಾಗಿದೆ. ರಾಜ್ಯ ಸರ್ಕಾರ ಉತ್ತರ ನೀಡಿದ ಬಳಿಕ ಆಯೋಗ ಪರಿಶೀಲನೆ ನಡೆಸಲಿದೆ. ಅನುದಾನ ಬಿಡುಗಡೆಗೆ ಕೇಂದ್ರ ಸಚಿವ ಸಂಪುಟದ ಅನುಮೋದನೆ ಪಡೆಯಬೇಕಿದೆ. ಅನುದಾನ ಬಿಡುಗಡೆಗೆ ಕೇಂದ್ರ ಮಟ್ಟದಲ್ಲಿ ನಾನು ಪ್ರಯತ್ನ ಮಾಡುತ್ತಿದ್ದೇನೆ. ಶೀಘ್ರ ಅನುದಾನ ಬಿಡುಗಡೆ ಆಗಲಿದೆ‘ ಎಂದು ವಿಶ್ವಾಸ ವ್ಯಕ್ತಪಡಿಸಿದರು. 

‘ಜಲ ಜೀವನ್‌ ಮಿಷನ್‌ ಯೋಜನೆಯಡಿ ಕರ್ನಾಟಕಕ್ಕೆ ಕೇಂದ್ರದಿಂದ ಪೂರ್ಣ ಪ್ರಮಾಣದಲ್ಲಿ ಅನುದಾನ ಬಿಡುಗಡೆ ಆಗದಿರಲು ರಾಜ್ಯ ಸರ್ಕಾರದ ನಿರ್ಲಕ್ಷ್ಯ ಕಾರಣ. ರಾಜ್ಯದಲ್ಲಿ ನಡೆಸಿರುವ ಕಾಮಗಾರಿಗಳ ಬಳಕೆ ಪ್ರಮಾಣಪತ್ರ ಸಲ್ಲಿಸಿಲ್ಲ. ಈ ಕಾರಣಕ್ಕೆ ಅನುದಾನ ತಡೆ ಹಿಡಿಯಲಾಗಿದೆ. ಕೇಂದ್ರದ ಹಣ ದುರುಪಯೋಗ ಆಗಬಾರದು ಎಂಬ ಕಾರಣಕ್ಕೆ ಈ ತೀರ್ಮಾನಕ್ಕೆ ಬರಲಾಗಿದೆ. ರಾಜ್ಯದಲ್ಲಿ ಆಗಿರುವ ಕಾಮಗಾರಿಗಳ ಪರಿಶೀಲನೆ ನಡೆಸುತ್ತಿದ್ದೇವೆ. ಅಧಿಕಾರಿಗಳ ಮಾಹಿತಿಗಳನ್ನು ಪಡೆದಿದ್ದೇವೆ. ಪರಿಶೀಲನೆ ನಡೆಸಿ ಅನುದಾನ ಬಿಡುಗಡೆ ಮಾಡುತ್ತೇವೆ‘ ಎಂದು ಅವರು ಸ್ಪಷ್ಟಪಡಿಸಿದರು. 

ADVERTISEMENT

ಬಹು ಕಾಲದಿಂದ ನನೆಗುದಿಗೆ ಬಿದ್ದಿರುವ ಹುಬ್ಬಳ್ಳಿ– ಅಂಕೋಲಾ ರೈಲು ಮಾರ್ಗ ಯೋಜನೆಗೆ ಅತೀ ಶೀಘ್ರದಲ್ಲಿ ಅನುಮೋದನೆ ಪಡೆದು ಕಾರ್ಯಗತಗೊಳಿಸುತ್ತೇವೆ ಎಂದು ಅವರು ಹೇಳಿದರು. 

‘ಕೇರಳದ ಹಸ್ತಕ್ಷೇಪಕ್ಕೆ ಮಣಿದು ಕಾಂಗ್ರೆಸ್‌ ಸರ್ಕಾರವು ಕೋಗಿಲುವಿನಲ್ಲಿ ಅನರ್ಹರಿಗೆ ಮನೆ ನೀಡಲು ತೀರ್ಮಾನ ಕೈಗೊಂಡಿದೆ. ಈ ವಿಷಯದಲ್ಲಿ ಪಾಕಿಸ್ತಾನ ಹಸ್ತಕ್ಷೇಪ ಮಾಡುತ್ತಿದೆ ಎಂದರೆ ಒತ್ತುವರಿದಾರರು ಎಷ್ಟು ಪ್ರಭಾವಶಾಲಿಗಳು ಎಂದು ಗೊತ್ತಾಗುತ್ತದೆ. ಸಿದ್ದರಾಮಯ್ಯ ಸರ್ಕಾರ ಹೀನಾಯ ಸ್ಥಿತಿಗೆ ತಲುಪಿರುವುದಕ್ಕೆ ಈ ಪ್ರಕರಣ ಸಾಕ್ಷಿ‘ ಎಂದು ಅವರು ಕಿಡಿಕಾರಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.