ADVERTISEMENT

ಡಿಸೆಂಬರ್‌ನಿಂದ ಶಾಲೆಗಳಲ್ಲಿ ಭಗವದ್ಗೀತೆ: ಶಾಲಾ ಶಿಕ್ಷಣ ಸಚಿವ ಬಿ.ಸಿ.ನಾಗೇಶ್

ನೈತಿಕ ಶಿಕ್ಷಣದಲ್ಲಿ ಸೇರ್ಪಡೆ, ಪ್ರತ್ಯೇಕವಾಗಿ ಬೋಧಿಸುವ ಚಿಂತನೆ ಇಲ್ಲ – ಸಚಿವ ನಾಗೇಶ್

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2022, 18:30 IST
Last Updated 19 ಸೆಪ್ಟೆಂಬರ್ 2022, 18:30 IST
ಬಿ.ಸಿ.ನಾಗೇಶ್‌
ಬಿ.ಸಿ.ನಾಗೇಶ್‌   

ಬೆಂಗಳೂರು: ‘ಶಾಲಾ ಪಠ್ಯಕ್ರಮದಲ್ಲಿ ಡಿಸೆಂಬರ್‌ನಿಂದ ನೈತಿಕ ಶಿಕ್ಷಣ ಸೇರಿಸಲಾಗುತ್ತಿದ್ದು, ಅದರ ಭಾಗವಾಗಿ ಭಗವದ್ಗೀತೆಯನ್ನು ಸೇರ್ಪಡೆ ಮಾಡಲಾಗುತ್ತದೆ’ ಎಂದು ಶಾಲಾ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದರು.

ವಿಧಾನಪರಿಷತ್‍ನಲ್ಲಿ ಬಿಜೆ‍ಪಿಯ ಎಂ.ಕೆ.ಪ್ರಾಣೇಶ್ ಮತ್ತು ಎನ್.ರವಿಕುಮಾರ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ‘ಪ್ರಸ್ತುತ ಶಾಲಾ ಪಠ್ಯಪುಸ್ತಕದಲ್ಲಿ ಭಗವದ್ಗೀತೆಯನ್ನು ಪ್ರತ್ಯೇಕವಾಗಿ ಬೋಧಿಸುವ ವಿಚಾರ ಸರ್ಕಾರದ ಮುಂದೆ ಇಲ್ಲ’ ಎಂದು ಸ್ಪಷ್ಟಪಡಿಸಿದರು.

ಈ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿದ ಪ್ರಾಣೇಶ್, ‘ಈ ಹಿಂದೆ ‌ಇದೇ ಪ್ರಶ್ನೆ ಕೇಳಿದಾಗ ಭಗವದ್ಗೀತೆ ಬೋಧನೆಗೆ ಕ್ರಮ ತೆಗೆದುಕೊಳ್ಳಲಾಗುವುದು. ಪಠ್ಯದಲ್ಲಿ ಭಗವದ್ಗೀತೆಯನ್ನು ಅಳವಡಿಸಲು ತಜ್ಞರ ಸಮಿತಿ ರಚಿಸುತ್ತೇವೆ. ಪಠ್ಯ ರೂಪಿಸಲು ಸಮಿತಿ ರಚಿಸುತ್ತೇವೆ ಎಂದಿದ್ದೀರಿ. ಆದರೆ, ಈಗ ಲಿಖಿತ ಉತ್ತರದಲ್ಲಿ ಆ ಪ್ರಸ್ತಾವ ಇಲ್ಲ ಎಂದು ಹೇಳಿದ್ದೀರಿ. ಭಗವದ್ಗೀತೆ ಬೋಧನೆಗೆ ಯಾರ ವಿರೋಧ ಇಲ್ಲ. ಆದರೂ, ಏಕೆ ಈ ರೀತಿಯ ಉತ್ತರ? ಭಗವದ್ಗೀತೆ ಅಳವಡಿಸಲು ಸರ್ಕಾರಕ್ಕೆ ಮುಜುಗರ ಇದೆಯೇ’ ಎಂದು ಪ್ರಶ್ನಿಸಿದರು.

ADVERTISEMENT

ಆಗ ಸ್ಪಷ್ಟನೆ ನೀಡಿದ ಸಚಿವರು, ‘ಪ್ರಸ್ತುತ ಶಾಲಾ ಪಠ್ಯದಲ್ಲಿ ಭಗವದ್ಗೀತೆ ಬೋಧಿಸುವ ಪ್ರಸ್ತಾವನೆ ಸರ್ಕಾರದ ಮುಂದೆ ಇಲ್ಲ ಎಂದಿದ್ದೇನೆ. ನೈತಿಕ ಶಿಕ್ಷಣದಲ್ಲಿ ಭಗವದ್ಗೀತೆ ಅಳವಡಿಸಲು ಸಮಿತಿ ರಚಿಸಿದ್ದೇವೆ. ಶಿಫಾರಸು ಆಧರಿಸಿ ಪಠ್ಯಕ್ರಮದಲ್ಲಿ ಭಗವದ್ಗೀತೆ ಸೇರಿಸಲಾಗು
ವುದು’ ಎಂದು ಸ್ಪಷ್ಟಪಡಿಸಿದರು.

‘ಬಾಬಾಬುಡನ್‌ ಗಿರಿ ಕುರಿತು ಶಾಲಾ ಪಠ್ಯಕ್ರಮದಲ್ಲಿ ಪ್ರಸ್ತಾಪವಾಗಿದೆ. ಅದನ್ನು ಇನಾಂ ದತ್ತಾತ್ರೇಯ ಪೀಠ ಎಂದು ಪರಿಷ್ಕರಿಸಬೇಕು’ ಎಂದು ಪ್ರಾಣೇಶ್‌ ಆಗ್ರಹಿಸಿದಾಗ, ‘ಪಠ್ಯಕ್ರಮದಲ್ಲಿ ಕಂಡು ಬಂದಿದ್ದ ಐತಿಹಾಸಿಕ ತಪ್ಪುಗಳನ್ನು ಸರಿಪಡಿಸುವ ಕೆಲಸವನ್ನು ಈಗಾಗಲೇ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಮತ್ತಷ್ಟು ತಪ್ಪುಗಳನ್ನು ಸರಿಪಡಿಸುತ್ತೇವೆ’ ಎಂದು ಸಚಿವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.