ADVERTISEMENT

‘ಭಗವದ್ಗೀತೆ ಪಠ್ಯವಾಗಲಿ’

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2018, 19:10 IST
Last Updated 19 ಡಿಸೆಂಬರ್ 2018, 19:10 IST
ಹುಬ್ಬಳ್ಳಿಯಲ್ಲಿ ಬುಧವಾರ ನಡೆದ ಗೀತಾ ಜಯಂತಿ ಹಾಗೂ ಭಗವದ್ಗೀತಾ ಅಭಿಯಾನದ ಮಹಾಸಮರ್ಪಣೆ ಕಾರ್ಯಕ್ರಮದಲ್ಲಿ ಸೇರಿದ್ದ ಜನಸ್ತೋಮ – ಪ್ರಜಾವಾಣಿ ಚಿತ್ರ/ತಾಜುದ್ದೀನ್‌ ಆಜಾದ್‌
ಹುಬ್ಬಳ್ಳಿಯಲ್ಲಿ ಬುಧವಾರ ನಡೆದ ಗೀತಾ ಜಯಂತಿ ಹಾಗೂ ಭಗವದ್ಗೀತಾ ಅಭಿಯಾನದ ಮಹಾಸಮರ್ಪಣೆ ಕಾರ್ಯಕ್ರಮದಲ್ಲಿ ಸೇರಿದ್ದ ಜನಸ್ತೋಮ – ಪ್ರಜಾವಾಣಿ ಚಿತ್ರ/ತಾಜುದ್ದೀನ್‌ ಆಜಾದ್‌   

ಹುಬ್ಬಳ್ಳಿ: ‘ಎಲ್ಲ ಧರ್ಮಗಳು ಒಪ್ಪುವ ಜೀವನ ಮೌಲ್ಯಗಳು ಭಗವದ್ಗೀತೆಯಲ್ಲಿವೆ. ಆದ್ದರಿಂದ ಈ ಗ್ರಂಥ ವಿದ್ಯಾರ್ಥಿಗಳಿಗೆ ಪಠ್ಯವಾಗಬೇಕು’ ಎಂದು ಸೋಂದಾ ಸ್ವರ್ಣವಲ್ಲಿ ಮಠದ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಹೇಳಿದರು.

ಬುಧವಾರ ನಗರದಲ್ಲಿ ನಡೆದ ಗೀತಾ ಜಯಂತಿ ಹಾಗೂ ಭಗವದ್ಗೀತಾ ಅಭಿಯಾನದ ಮಹಾಸಮರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ‘ನಮ್ಮ ದೇಶದಲ್ಲಿ ಎಲ್ಲ ಸಂಪತ್ತು ಇದೆ. ಧಾರ್ಮಿಕ ಹಾಗೂ ಆಧ್ಯಾತ್ಮಿಕ ಆಚರಣೆಯೂ ಸಾಕಷ್ಟಿದೆ. ಇದನ್ನು ಸರಿಯಾಗಿ ಬಳಸಿಕೊಳ್ಳದ ಕಾರಣ ಈಗಲೂ ಬಡವರಾಗಿಯೇ ಉಳಿದಿದ್ದೇವೆ. ಆ ಸಂಪತ್ತನ್ನು ಬಳಸಿಕೊಳ್ಳುವುದು ಹೇಗೆ ಎನ್ನುವುದನ್ನು ಭಗವದ್ಗೀತೆ ತಿಳಿಸಿಕೊಡುತ್ತದೆ’ ಎಂದರು.

ಉಡುಪಿಯ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಮಾತನಾಡಿ, ‘ಭಗವದ್ಗೀತೆ ಹಿಂದೂ ಧರ್ಮಕ್ಕಾಗಲಿ, ಭಾರತಕ್ಕಾಗಲಿ ಮಾತ್ರ ಸಂಬಂಧಪಟ್ಟಿದ್ದಲ್ಲ. ಜಗತ್ತು ಒಪ್ಪಿಕೊಳ್ಳುವ ಎಲ್ಲ ಅಂಶಗಳು ಇದರಲ್ಲಿವೆ. ಪೂಜೆ ಮಾಡುವುದು, ಧಾರ್ಮಿಕ ನಿಯಮಗಳನ್ನು ಆಚರಿಸುವುದಷ್ಟೇ ಧರ್ಮವಲ್ಲ. ನಮ್ಮ ಕಾಯಕದಲ್ಲಿ ನಿತ್ಯ ನಿರತರಾಗಿರಬೇಕು. ಆದ್ದರಿಂದ ಎಲ್ಲರೂ ಗೀತೆ ಪಠಿಸಬೇಕು. ವಿದ್ಯಾರ್ಥಿಗಳು ದಿನಕ್ಕೆ ಕನಿಷ್ಠ ಒಂದು ಅಧ್ಯಾಯವನ್ನಾದರೂ ಓದಬೇಕು’ ಎಂದರು.

ADVERTISEMENT

ಭಗವದ್ಗೀತೆಯ ಮಹತ್ವ ಸಾರುವ ಸಲುವಾಗಿ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಮುಂದಾಳತ್ವದಲ್ಲಿ ಧಾರವಾಡ ಜಿಲ್ಲೆಯಲ್ಲಿ ಅಭಿಯಾನ ನಡೆಸಲಾಗಿತ್ತು. ಒಂದು ಸಾವಿರಕ್ಕೂ ಹೆಚ್ಚು ಶ್ಲೋಕ ಕೇಂದ್ರಗಳನ್ನು ಆರಂಭಿಸಿ ಸಾರ್ವಜನಿಕರಿಗೆ ಗೀತೆಯ 8ನೇ ಅಧ್ಯಾಯ ಹೇಳಿಕೊಡಲಾಗಿತ್ತು. ಶಾಲಾ, ಕಾಲೇಜುಗಳಲ್ಲಿಯೂ ಅಭಿಯಾನ ನಡೆದಿತ್ತು. ಈ ಎಲ್ಲ ಕಾರ್ಯಕ್ರಮಗಳ ಮಹಾಸಮರ್ಪಣೆ ಜರುಗಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.