ADVERTISEMENT

ಭೀಮಾ–ಕೃಷ್ಣಾ ಪ್ರವಾಹ ಏರಿಕೆ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2019, 20:00 IST
Last Updated 9 ಆಗಸ್ಟ್ 2019, 20:00 IST
ರಾಯಚೂರು ತಾಲ್ಲೂಕಿನ ಕುರ್ವಕಲಾ ನಡುಗಡ್ಡೆಯಿಂದ ಅಗತ್ಯ ಸಾಮಗ್ರಿಗಳ ಖರೀದಿಗಾಗಿ ಬಂದಿದ್ದ ಜನರನ್ನು ಎನ್‌ಡಿಆರ್‌ಎಫ್‌ ತಂಡದವರು ಬೋಟ್‌ಗಳಲ್ಲಿ ಮತ್ತೆ ಅವರ ನಡುಗಡ್ಡೆಗೆ ಕರೆದೊಯ್ದರು
ರಾಯಚೂರು ತಾಲ್ಲೂಕಿನ ಕುರ್ವಕಲಾ ನಡುಗಡ್ಡೆಯಿಂದ ಅಗತ್ಯ ಸಾಮಗ್ರಿಗಳ ಖರೀದಿಗಾಗಿ ಬಂದಿದ್ದ ಜನರನ್ನು ಎನ್‌ಡಿಆರ್‌ಎಫ್‌ ತಂಡದವರು ಬೋಟ್‌ಗಳಲ್ಲಿ ಮತ್ತೆ ಅವರ ನಡುಗಡ್ಡೆಗೆ ಕರೆದೊಯ್ದರು   

ಕಲಬುರ್ಗಿ: ನಾರಾಯಣಪುರ ಜಲಾಶಯದ ಹೊರ ಹರಿವುಹೆಚ್ಚಿದ್ದು, ಭೀಮಾ ನದಿಯ ಪ್ರವಾಹವೂ ಏರುಗತಿಯಲ್ಲಿದೆ. ಹೀಗಾಗಿ ರಾಯಚೂರು ತಾಲ್ಲೂಕಿನಲ್ಲಿ 14 ಗ್ರಾಮಗಳು ಮತ್ತಷ್ಟು ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆ.

ಕಲಬುರ್ಗಿ ಮತ್ತು ಯಾದಗಿರಿ ಜಿಲ್ಲೆಗಳ ಭೀಮಾನದಿ ತೀರದಲ್ಲಿ ಪ್ರವಾಹ ಉಲ್ಬಣಿಸುತ್ತಿದೆ. 5 ಸಾವಿರಕ್ಕೂ ಹೆಚ್ಚು ಎಕರೆ ಜಮೀನಿಗೆ ನೀರು ನುಗ್ಗಿದೆ.

ಕಲಬುರ್ಗಿ ನಗರಕ್ಕೆ ನೀರು ಪೂರೈಸಲು ನಿರ್ಮಿಸಿರುವಸರಡಗಿ ಬ್ಯಾರೇಜ್‌ ಸಂಪೂರ್ಣ ಮುಳುಗಿದ್ದು, ಪ್ರವಾಹ ಹೆಚ್ಚಾದರೆ ನೀರು ಪೂರೈಕೆಯ ಜಾಕ್‌ವೆಲ್‌ ಮುಳುಗಲಿದೆ. ಸರಡಗಿ ಗ್ರಾಮ ನಡುಗಡ್ಡೆಯಾಗಲಿದೆ.

ADVERTISEMENT

ಯಾದಗಿರಿ ಜಿಲ್ಲೆಯ ವಡಗೇರಾ ತಾಲ್ಲೂಕಿನ ಜೋಳದಡಗಿ ಹಾಗೂ ಕಲಬುರ್ಗಿ ತಾಲ್ಲೂಕಿನ ಸರಡಗಿ ಬಳಿ ಭೀಮಾ ನದಿಗೆ ನಿರ್ಮಿಸಿರುವ ಬ್ರಿಜ್‌ ಕಂ ಬ್ಯಾರೇಜ್‌ಗಳ ಗೇಟ್‌ಗಳನ್ನು ತೆರೆದಿಲ್ಲ. ಹೀಗಾಗಿ ಎರಡೂ ಕಡೆ ಹಿನ್ನೀರು ಹೆಚ್ಚು ವ್ಯಾಪಿಸಿದೆ.

ನಡುಗಡ್ಡೆ ಬಿಡದ ಜನ

ಕೃಷ್ಣಾ ನದಿ ಉಕ್ಕುತ್ತಿದ್ದರೂ ರಾಯಚೂರಿನ ಅಗ್ರಹಾರ, ಕುರ್ವಕಲಾ ಹಾಗೂ ಕುರ್ವಕುರ್ದಾ ನಡುಗಡ್ಡೆಗಳಲ್ಲಿಯ ನಿವಾಸಿಗಳು ಸುರಕ್ಷಿತ ಸ್ಥಳಕ್ಕೆ ಬರುತ್ತಿಲ್ಲ. ಅಗತ್ಯ ವಸ್ತುಗಳನ್ನು ಪಡೆಯಲು ತೆಪ್ಪಗಳ ಮೂಲಕ ಈಚೆಗೆ ಬರುತ್ತಿದ್ದು, ಎನ್‌ಡಿಆರ್‌ಎಫ್‌ ತಂಡದವರು ಅವರನ್ನು ಬೋಟ್‌ಗಳಲ್ಲಿ ಅವರ ನಡುಗಡ್ಡೆಗಳಿಗೆ ಬಿಟ್ಟು ಬರುತ್ತಿದ್ದಾರೆ! ‘ಪ್ರವಾಹ ಹೆಚ್ಚಾಗುತ್ತಿರುವುದರಿಂದ ನದಿಯಲ್ಲಿ ಹೋಗದಂತೆ ಎಚ್ಚರಿಕೆ ನೀಡಿದ್ದೇವೆ. ಆದರೂ ಅವರು ನಮ್ಮ ಮಾತು ಕೇಳುತ್ತಿಲ್ಲ. ಪ್ರವಾಹ ತಮಗೆ ಹೊಸದಲ್ಲ ಎನ್ನುತ್ತ ತೆಪ್ಪಗಳಲ್ಲಿ ಸಂಚರಿಸುತ್ತಿದ್ದಾರೆ’ ಎಂದು ಅಧಿಕಾರಿಯೊಬ್ಬರು ಹೇಳಿದರು. ಈ ಮೂರು ನಡುಗಡ್ಡೆಗಳಲ್ಲಿ ಒಟ್ಟು 298 ಕುಟುಂಬಗಳ 945 ಜನ ವಾಸಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.