ADVERTISEMENT

ಟಿಕೆಟ್‌ ನೀಡುವ ಪಕ್ಷಕ್ಕಷ್ಟೇ ಬೆಂಬಲ: ಭೋವಿ ಜನಾಂಗ ಸಂದೇಶ

ಸಾಮಾಜಿಕ ನ್ಯಾಯಕ್ಕಾಗಿ ಸಮಾವೇಶ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2019, 16:57 IST
Last Updated 27 ಫೆಬ್ರುವರಿ 2019, 16:57 IST
ಸಲಿಕೆ, ಸುತ್ತಿಗೆ, ಕರಣೆಯನ್ನು ವಿತರಿಸುವ ಮೂಲಕ ಚಿತ್ರದುರ್ಗದಲ್ಲಿ ಬುಧವಾರ ಆಯೋಜಿಸಿದ್ದ ರಾಜ್ಯ ಮಟ್ಟದ ಭೋವಿ ಸಮಾವೇಶವನ್ನು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಉದ್ಘಾಟಿಸಿದರು. ಶಾಸಕರಾದ ಜಿ.ಎಚ್‌. ತಿಪ್ಪಾರೆಡ್ಡಿ, ಎಂ. ಚಂದ್ರಪ್ಪ, ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಇದ್ದಾರೆ.
ಸಲಿಕೆ, ಸುತ್ತಿಗೆ, ಕರಣೆಯನ್ನು ವಿತರಿಸುವ ಮೂಲಕ ಚಿತ್ರದುರ್ಗದಲ್ಲಿ ಬುಧವಾರ ಆಯೋಜಿಸಿದ್ದ ರಾಜ್ಯ ಮಟ್ಟದ ಭೋವಿ ಸಮಾವೇಶವನ್ನು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಉದ್ಘಾಟಿಸಿದರು. ಶಾಸಕರಾದ ಜಿ.ಎಚ್‌. ತಿಪ್ಪಾರೆಡ್ಡಿ, ಎಂ. ಚಂದ್ರಪ್ಪ, ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಇದ್ದಾರೆ.   

ಚಿತ್ರದುರ್ಗ: ಪರಿಶಿಷ್ಟ ಜಾತಿಗೆ ಮೀಸಲಿರುವ ಲೋಕಸಭಾ ಕ್ಷೇತ್ರಗಳಲ್ಲಿ ಭೋವಿ ಸಮುದಾಯಕ್ಕೆ ಟಿಕೆಟ್‌ ನೀಡುವ ಪಕ್ಷವನ್ನು ಮಾತ್ರ ಬೆಂಬಲಿಸುವುದಾಗಿ ಎಲ್ಲ ರಾಜಕೀಯ ಪಕ್ಷಗಳಿಗೆ ಭೋವಿ ಜನಾಂಗ ಸಂದೇಶ ರವಾನಿಸಿತು. ಚಿತ್ರದುರ್ಗ ಹಾಗೂ ಕೋಲಾರ ಕ್ಷೇತ್ರದಲ್ಲಿ ಸಮುದಾಯದ ಆಕಾಂಕ್ಷಿಗಳಿಗೆ ಟಿಕೆಟ್‌ ನೀಡುವಂತೆ ಬಿಜೆಪಿಗೆ ಬಹಿರಂಗ ಕೋರಿಕೆ ಸಲ್ಲಿಸಿತು.

ಮುಂಬರುವ ಲೋಕಸಭಾ ಚುನಾವಣೆಗೆ ರಾಜಕೀಯ ನಿಲುವು ತಳೆಯುವ ಉದ್ದೇಶದಿಂದ ಬುಧವಾರ ಆಯೋಜಿಸಿದ್ದ ‘ಸಾಮಾಜಿಕ ನ್ಯಾಯಕ್ಕಾಗಿ ಭೋವಿ ಸಮಾವೇಶ’, ಸಮುದಾಯದ ಇಬ್ಬರು ನಾಯಕರನ್ನು ಸಂಸತ್ತಿಗೆ ಕಳುಹಿಸುವುದಾಗಿ ಸಂಕಲ್ಪ ಮಾಡಿತು.

ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ‘ಭೋವಿ ಸಮುದಾಯ ರಾಜ್ಯದಲ್ಲಿ 40 ಲಕ್ಷ ಹಾಗೂ ದೇಶದಲ್ಲಿ 10 ಕೋಟಿ ಜನಸಂಖ್ಯೆ ಹೊಂದಿದೆ. ಜನಸಂಖ್ಯೆಗೆ ಅನುಗುಣವಾಗಿ ದೇಶದಲ್ಲಿ 62 ಹಾಗೂ ರಾಜ್ಯದಲ್ಲಿ ಮೂವರು ಲೋಕಸಭಾ ಸದಸ್ಯರು ಇರಬೇಕಿತ್ತು. ಆದರೆ, ಜನಾಂಗದ ಒಬ್ಬ ಸಂಸತ್‌ ಸದಸ್ಯರೂ ಇಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ADVERTISEMENT

‘ಸದಾಶಿವ ಆಯೋಗದ ವರದಿಯ ಬಳಿಕ ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ 101 ಜಾತಿಗಳಲ್ಲಿ 99 ಜಾತಿಗಳು ಒಗ್ಗೂಡಿವೆ. ಭೋವಿ ಸಮುದಾಯದಲ್ಲಿಯೂ ಒಗ್ಗಟ್ಟು ಮೂಡಿದೆ. ಟಿಕೆಟ್‌ ನೀಡುವ ಆಶ್ವಾಸನೆ ಕೊಟ್ಟ ಪಕ್ಷದ ಬೆಂಬಲಕ್ಕೆ ನಿಲ್ಲುತ್ತೇವೆ. ಕಲ್ಲನ್ನು ಕಟೆದು ನಾವು (ಭೋವಿ) ವಿಗ್ರಹ ಮಾಡಿದ್ದೇವೆ. ಲಿಂಗಾಯತರಾದ ನೀವು (ಯಡಿಯೂರಪ್ಪ) ಪ್ರಾಣ ಪ್ರತಿಷ್ಠಾನೆ ಮಾಡಿ’ ಎಂದು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.