ADVERTISEMENT

ಉಗ್ರರ ಹುಟ್ಟಡಗಿಸಲು ಅವಕಾಶ ಕೊಡಿ: ಮೋದಿಗೆ ಬಿದರಿ ಮನವಿ

‘ವೀರಪ್ಪನ್ ಹಿಡಿಯಲಾಗದವರು ಮಾಡುವುದೇನು?’

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2019, 17:23 IST
Last Updated 15 ಫೆಬ್ರುವರಿ 2019, 17:23 IST
ಶಂಕರ್‌ ಬಿದರಿ
ಶಂಕರ್‌ ಬಿದರಿ   

ಬೆಂಗಳೂರು: ‘ನನಗೆ ಒಂದು ಅವಕಾಶ ಕೊಡಿ, ಕಾಶ್ಮೀರದಲ್ಲಿರುವ ಭಯೋತ್ಪಾದಕರ ಹುಟ್ಟಡಗಿಸುತ್ತೇನೆ’ ಎಂದು ನಿವೃತ್ತ ಡಿಜಿಪಿ ಶಂಕರ ಬಿದರಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಟ್ವೀಟ್‌ಗೆ ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಸಾಕಷ್ಟು ಜನ ಬಿದರಿಯ ಮಾತಿಗೆ ಶಹಬಾಸ್‌ ಹೇಳಿ ಬೆನ್ನು ತಟ್ಟಿದ್ದರೆ, ಇನ್ನು ಕೆಲವರು ಕಾಲೆಳೆದಿದ್ದಾರೆ.

ಬಿದರಿಯವರ ಟ್ವೀಟ್ ಹೀಗಿದೆ– ‘ನನಗೀಗ 64 ವರ್ಷ ವಯಸ್ಸು. ನಾನು ಕಾಶ್ಮೀರಕ್ಕೆ ಹೋಗಲು ಸಿದ್ಧನಿದ್ದೇನೆ. ಯಾವುದೇ ಸೂಕ್ತ ಜವಾಬ್ದಾರಿ ಕೊಟ್ಟರೆ, ಕಾಶ್ಮೀರದಲ್ಲಿ ಭಯೋತ್ಪಾದಕರ ಹುಟ್ಟಡಗಿಸುತ್ತೇನೆ. ಭಯೋತ್ಪಾದನೆ ನಿರ್ಮೂಲನೆಗಾಗಿ ಬಲಿದಾನಕ್ಕೂ ಸಿದ್ಧನಿದ್ದೇನೆ’ ಎಂದು ಬರೆದಿರುವ ಬಿದರಿ ತಮ್ಮ ಇಮೇಲ್‌ ಐಡಿಯನ್ನೂ ಹಂಚಿಕೊಂಡಿದ್ದಾರೆ.

ADVERTISEMENT

ಇದಕ್ಕೆ ಕೆಲವರು ಸಹಮತ ವ್ಯಕ್ತಪಡಿಸಿಡಿದ್ದಾರೆ. ನಿಮ್ಮ ಜತೆ ನಾವು ಬರಲು ಸಿದ್ಧರಿದ್ದೇವೆ ಎಂದು ಕೆಲವರು ಹೇಳಿದ್ದಾರೆ. ‘ಇನ್ನು ಕೆಲವರು ವೀರಪ್ಪನ್‌ನನ್ನೇ ಹಿಡಿಯಲಾಗದವರು, ಭಯೋತ್ಪಾದನೆ ಹೇಗೆ ಹುಟ್ಟಡಗಿಸುತ್ತಾರೆ’ ಎಂದು ಕಾಲೆಳೆದಿದ್ದಾರೆ.

ಪ್ರತಿಕ್ರಿಯೆಗಳು: ‘ಇದಕ್ಕೆ ಸರ್ ನೀವು ಇಷ್ಟ ಆಗೋದು. ಸರಿಯಾದ ಮಾರ್ಗವನ್ನು ಹಿಡಿದು ಮೋದಿಯವರಿಗೆ ಈ ವಿಷಯ ಮುಟ್ಟುವಂತೆ ಮಾಡಿ. ನಿಮ್ಮ ನಡವಳಿಕೆಯಿಂದ ಹಿಂದೆ ಬೇಸರಗೊಂಡಿದ್ದೆ. ಆದರೆ ಈಗ ನಿಮ್ಮ ಮನದ ಇಂಗಿತದಿಂದ ನಿಮ್ಮ ಮೇಲಿನ ಗೌರವ ಇಮ್ಮಡಿಯಾಗಿದೆ. ಜೈ ಹಿಂದ್’ ಎಂದು ಶಿವಶಂಕರ್‌ ಎಂಬುವವರು ಪ್ರತಿಕ್ರಿಯಿಸಿದ್ದಾರೆ.

‘ಹ್ಯಾಟ್ಸ್‌ ಆಫ್‌ ಸರ್‌, ಈ ಸಲ ಭಯೋತ್ಪಾದಕರ ನಿರ್ಮೂಲನೆ ಮಾಡಲೇ ಬೇಕು’ ಎಂದು ಚೇತನರಾಜು ಎಂಬುವವರು ಟ್ವಿಟ್‌ ಮಾಡಿದ್ದಾರೆ.

ಸಂತೋಷ್‌ ಎಂಬುವರು ‘ಸಾಕು ಮಲ್ಕೊಳ್ಳಿ ಸರ್‌ ಲೇಟಾಗಿದೆ’ ಎಂದು ಲೇವಡಿ ಮಾಡಿದ್ದಾರೆ.

ಬಿದರಿಯವರು ಮತ್ತೊಂದು ಟ್ವೀಟ್‌ನಲ್ಲಿ ‘ರಾಜಕಾರಣಿಗಳು ಸತ್ತಾಗ ರಾಷ್ಟ್ರೀಯ ಶೋಕಾಚರಣೆ ಘೋಷಿಸಲಾಗುತ್ತದೆ. 44 ಜನ ಪೊಲೀಸ್‌ ಸಿಬ್ಬಂದಿ(ಸಿಆರ್‌ಪಿಎಫ್‌) ದೇಶದ ಏಕತೆ ಮತ್ತು ರಕ್ಷಣೆಗಾಗಿ ಹುತಾತ್ಮರಾಗಿದ್ದಾರೆ. ಅವರ ತ್ಯಾಗದ ಸ್ಮರಣೆಗಾಗಿ ಒಂದು ದಿನ ಶೋಕಾಚರಣೆ ಘೋಷಿಸಬೇಕು’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.