ADVERTISEMENT

ಮುಖ್ಯ ಎಂಜಿನಿಯರ್‌ ಪದೋನ್ನತಿಗೆ ಬಿಡ್‌: ಎಚ್.ಡಿ.ರೇವಣ್ಣ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2019, 19:35 IST
Last Updated 19 ಸೆಪ್ಟೆಂಬರ್ 2019, 19:35 IST
   

ಹಾಸನ: ‘ವಿವಿಧ ಇಲಾಖೆಗಳ ಮುಖ್ಯ ಎಂಜಿನಿಯರ್‌ಗಳ ಪದೋನ್ನತಿ ಕಡತವನ್ನು ಎರಡು ತಿಂಗಳಿನಿಂದ ವಿಲೇವಾರಿ ಮಾಡದೇ ಇರಿಸಿಕೊಂಡಿದ್ದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಒಂದೊಂದು ಹುದ್ದೆಗೂ ಬಿಡ್ ಮಾಡುತ್ತಿದ್ದಾರೆ’ ಎಂದು ಶಾಸಕ ಎಚ್‌.ಡಿ.ರೇವಣ್ಣ ಆರೋಪಿಸಿದರು.

‘24 ಮುಖ್ಯ ಎಂಜಿನಿಯರ್‌ಗಳಿಗೆ ಪದೋನ್ನತಿ ನೀಡುವ ಕಡತಕ್ಕೆ ಸಹಿ ಹಾಕಿದ್ದಾರೆ. ಇದರಲ್ಲಿ ಹದಿನೇಳು ‌ಜನಕ್ಕೆ ಮಾತ್ರ ಆದೇಶ ನೀಡಲಾಗಿದ್ದು, ಒಂದು ಸಮುದಾಯಕ್ಕೆ ಸೇರಿದ ಏಳು ಜನರ ಬಡ್ತಿ ತಡೆ ಹಿಡಿದಿದ್ದಾರೆ. ಹೀಗೆ ಒಂದು ಸಮುದಾಯವನ್ನು ಗುರಿಯಾಗಿಸಿಕೊಂಡು ಕೆಲಸ ಮಾಡುತ್ತಿರುವುದು ನಾಚಿಕೆಗೇಡಿನ ಸಂಗತಿ’ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

‘ರಾಜ್ಯದ ಎಪಿಎಂಸಿಗಳಲ್ಲಿ ತರಕಾರಿ ಬೆಳೆಗೆ ಬಿಡ್ ಕೂಗುವಂತೆ ಹುದ್ದೆಗಳಿಗೆ ಬಿಡ್ ಕೂಗಲಾಗುತ್ತಿದೆ. ಒಂದೊಂದು ಬಡ್ತಿಗೆ ಎಷ್ಟೆಷ್ಟು ಹಣ ಪಡೆದಿದ್ದಾರೆ? ಈ ಅಧಿಕಾರಿಗಳ ಮೇಲೆ ತನಿಖೆ ನಡೆಯುತ್ತಿಲ್ಲವೇ?’ ಎಂದು ಕೇಳಿದ ಅವರು, ಏಳು ಜನರ ಬಡ್ತಿ ತಡೆ ಹಿಡಿದಿದ್ದು ಏಕೆ ಎಂಬುದನ್ನು ಬಹಿರಂಗಪಡಿಸುವಂತೆ ಆಗ್ರಹಿಸಿದರು.

ADVERTISEMENT

‘ಒಂದು ಸಮುದಾಯವನ್ನು ಮುಗಿಸಬೇಕು ಎನ್ನುವ ಕಾರಣಕ್ಕಾಗಿಯೇ ಡಿ.ಕೆ. ಶಿವಕುಮಾರ್ ಅವರನ್ನು ಗುರಿಯಾಗಿಸಿಕೊಂಡಿದ್ದಾರೆ. ಆದರೆ ಮುಗಿಸಲು ಸಾಧ್ಯವಿಲ್ಲ; ಹಾಗೆ ಅಂದವರು ಮನೆಗೆ ಹೋಗಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.