
ಹುಬ್ಬಳ್ಳಿ: 'ರಾಹುಲ್ ಗಾಂಧಿ ಅವರ ನಕಾರಾತ್ಮಕ ಧೋರಣೆ ಹಾಗೂ ಆರ್‌ಜೆಡಿಯ ತೇಜಸ್ವಿ ಯಾದವ್ ಅವರ ಜಂಗಲ್ ರಾಜ್ಯವನ್ನು ಬಿಹಾರದ ಜನತೆ ತಿರಸ್ಕರಿಸಿ, ಎನ್‌ಡಿಎ ಮೈತ್ರಿಕೂಟಕ್ಕೆ ಸ್ಪಷ್ಟ ಬಹುಮತ ನೀಡುವ ಮೂಲಕ ಮಂಗಲ್ ರಾಜ್ಯಕ್ಕೆ ಮನ್ನಣೆ ನೀಡಿದ್ದಾರೆ' ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅಭಿಪ್ರಾಯಪಟ್ಟರು.
'ಬಿಹಾರ ಚುನಾವಣೆಯಲ್ಲಿ ಬಿಜೆಪಿ ಹಾಗೂ ಮಿತ್ರ ಪಕ್ಷಗಳ ಅಭ್ಯರ್ಥಿಗಳು ಅತಿಹೆಚ್ಚು ಸ್ಥಾನದಲ್ಲಿ ಗೆಲುವು ಸಾಧಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಹಾಗೂ ನಿತೀಶಕುಮಾರ್ ಅವರ ಅಭಿವೃದ್ಧಿ ಕಾರ್ಯಕ್ಕೆ ದೊರೆತ ಜನಬೆಂಬಲ' ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ವಿಶ್ಲೇಷಿಸಿದರು.
'ಜವಾಹರಲಾಲ್ ನೆಹರೂ ಕಾಲದಿಂದ ಸೋನಿಯಾ ಗಾಂಧಿಯವರೆಗೂ ಕಾಂಗ್ರೆಸ್ ಸುಳ್ಳಿನ ಮೇಲೆಯೇ ಚುನಾವಣೆ ನಡೆಸುತ್ತ ಬಂದಿದೆ. ಇದೀಗ ಸಂವಿಧಾನ ಬದ್ಧವಾದ ಚುನಾವಣಾ ಆಯೋಗದ ವ್ಯವಸ್ಥೆಯ ಮೇಲೆಯೇ ಅರೋಪ ಹೊರಸಿ, ಸುಳ್ಳುಗಳನ್ನು ಸೃಷ್ಟಿಸಿ ಜನರ ದಾರಿ ತಪ್ಪಿಸಲು ಯತ್ನಿಸಿದ್ದರು. ನಕಾರಾತ್ಮಕ ಹಾಗೂ ಸುಳ್ಳು ಆರೋಪಗಳಿಂದ ಆಡಳಿತ ನಡೆಸಲು ಸಾಧ್ಯವಿಲ್ಲ ಎನ್ನುವ ಸತ್ಯ ಬಿಹಾರ ಜನತೆ ತಿಳಿಸಿದೆ' ಎಂದರು.
'ರಾಹುಲ್ ಗಾಂಧಿ ತಾವಷ್ಟೇ ಸೋಲುವುದಲ್ಲದೇ, ತಮ್ಮ ಜೊತೆಯಾದ ಬಲಿಷ್ಠ ಪಕ್ಷದವರನ್ನು ಸಹ ಸೋಲಿಸುತ್ತಿದ್ದಾರೆ. ಮುಳುಗುವುದರಲ್ಲಿ ಹಾಗೂ ಮುಳುಗಿಸುವುದರಲ್ಲಿ ಅವರು ನಿಸ್ಸೀಮರಾಗಿದ್ದಾರೆ. ಇದೀಗ ಅವರು ಸೋಲಿನ ಶತಕದತ್ತ ದಾಪುಗಾಲಿಡುತ್ತಿದ್ದು, ವಿಶೇಷ ಅಭಿನಂದನೆ' ಎಂದು ವ್ಯಂಗ್ಯವಾಡಿದರು.
'ದೆಹಲಿಯಲ್ಲಿ ನಡೆದ ಕಾರ್ ಸ್ಫೋಟವನ್ನು ಎನ್‌ಡಿಎ ರಾಜಕೀಯಕ್ಕೆ ಬಳಸಿಕೊಂಡಿದೆ' ಎನ್ನುವ ಆರೋಪಕ್ಕೆ ಪ್ರತಿಕ್ರಿಯಿಸಿದ ಜೋಶಿ, 'ಈ ಮಾತನ್ನು ರಾಜ್ಯ ಕಾಂಗ್ರೆಸ್ ನಾಯಕರೇ ಹೆಚ್ಚಾಗಿ ಹೇಳುತ್ತಿದ್ದಾರೆ. ಅವರ ಯೋಗ್ಯತೆಗೆ ತಕ್ಕಂತೆ ಮಾತನಾಡುತ್ತಿದ್ದಾರೆ. ಯುಪಿಎ ಅಧಿಕಾರದ ಅವಧಿಯಲ್ಲಿ ಪಾಟ್ನಾ, ಬೆಂಗಳೂರು, ಮುಂಬೈ, ಹೈದರಾಬಾದ್ ಸೇರಿದಂತೆ ಅನೇಕ ಕಡೆಗಳಲ್ಲಿ ಬಾಂಬ್ ಸ್ಫೋಟವಾಗಿತ್ತು. ಆವಾಗೆಲ್ಲ ಚುನಾವಣೆ ಸಮೀಪವಿತ್ತೆ? ತರ್ಕವಿಲ್ಲದ ಹೇಳಿಕೆಯಿಂದಲೇ ಅವರನ್ನು ಜನರು ಚುನಾವಣೆಯಲ್ಲಿ ಸೋಲಿಸುತ್ತಿರುವುದು'' ಎಂದರು.
'ದೇಶದ ಭದ್ರತೆ ವಿಷಯದಲ್ಲಿ ಒಗ್ಗಟ್ಟು ಪ್ರದರ್ಶಿಸಬೇಕೇ ಹೊರತು, ರಾಜೀನಾಮೆ ಎನ್ನುತ್ತ ರಾಜಕೀಯ ಮಾಡುವುದಲ್ಲ. ಪ್ರತಿಬಾರಿಯೂ ಸ್ಫೋಟ ನಡೆದಾಗ ಕೇಂದ್ರ ಗೃಹಸಚಿವರು ರಾಜೀನಾಮೆ ನೀಡಬೇಕು ಎಂದಾಗಿದ್ದರೆ, ಪ್ರತಿ ಐದು ವರ್ಷಕ್ಕೆ ಮೂರು-ನಾಲ್ಕು ಗೃಹಸಚಿವರು ಬದಲಾಗುತ್ತಿದ್ದರು'' ಎಂದರು.
ಕೀಳುಮಟ್ಟದ ರಾಜಕೀಯ: ಜೋಶಿ ಕಿಡಿ
'ಕಾಂಗ್ರೆಸ್ ಮತ್ತು ಪಾಕಿಸ್ತಾನದ ಭಾಷೆ ಯಾವಾಗಲೂ ಒಂದೇ ಆಗಿದ್ದು, ಯೋಚನೆಗಳು ಸಹ ಒಂದೇ ಆಗಿರುತ್ತವೆ. ದೆಹಲಿಯಲ್ಲಿ ನಡೆದ ಸ್ಫೋಟ ಪ್ರಕರಣ ಪಾಕಿಸ್ತಾನ ಪ್ರೇರಿತ ಉಗ್ರವಾದ ದಾಳಿ ಎನ್ನುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ದೊಡ್ಡ ಪ್ರಮಾಣದಲ್ಲಿ ಸ್ಫೋಟ ನಡೆಸಿ ಸಾವಿರಾರು ಮಂದಿಯನ್ನು ಹತ್ಯೆ ಮಾಡುವ ಷಡ್ಯಂತ್ರ ನಡೆಸಲಾಗಿತ್ತು. ದೇಶದ ತನಿಖಾ ಸಂಸ್ಥೆಗಳು ಅದನ್ನು ವಿಫಲಗೊಳಿಸಿವೆ. ಈ ಕುರಿತು ತನಿಖೆ ನಡೆಯುತ್ತಿದೆ. ಆದರೆ, ಕಾಂಗ್ರೆಸ್ ನಾಯಕರು ಈ ಕೃತ್ಯ ಪಾಕಿಸ್ತಾನ ಮಾಡಿದೆ ಎಂದು ಹೇಳಲು ತಯಾರಿಲ್ಲ. ಅದನ್ನು ಬಿಟ್ಟು, ರಾಜಕೀಯ ಹೇಳಿಕೆ ನೀಡುವುದು ಕೀಳುಮಟ್ಟದ ಮನಸ್ಥಿತಿ' ಎಂದು ಜೋಶಿ ಕಿಡಿಕಾರಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಸ್ ಲೀಡರ್. ಅವರು ಸ್ವಂತ ಶಕ್ತಿಯಿಂದಲೇ ಚುನಾವಣೆಯಲ್ಲಿ ಗೆದ್ದಿದ್ದಾರೆ. ಕಾಂಗ್ರೆಸ್‌ನಲ್ಲಿ ಹೈಕಮಾಂಡ್ ಸಂಸ್ಕೃತಿ ಆಳವಾಗಿರುವುದರಿಂದ, ಬಿಹಾರ ಚುನಾವಣೆಯಲ್ಲೂ ಮತಗಳ್ಳತನವಾಗಿದೆ ಎಂದು ಅವರ ಪರವಾಗಿ ಮಾತನಾಡುತ್ತಿದ್ದಾರೆ.-ಪ್ರಲ್ಹಾದ ಜೋಶಿ, ಕೇಂದ್ರ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.