
ಎಫ್‌ಐಆರ್
(ಸಾಂದರ್ಭಿಕ ಚಿತ್ರ)
ಬೆಳ್ತಂಗಡಿ (ದಕ್ಷಿಣ ಕನ್ನಡ): ಬೈಕ್ ಕಳ್ಳತನ ಮಾಡಿದ ಆರೋಪದ ಮೇಲೆ ಇಬ್ಬರನ್ನು ಮರಕ್ಕೆ ಕಟ್ಟಿಹಾಕಿ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ 7 ಮಂದಿಯ ವಿರುದ್ಧ ಎಫ್‌ಐಆರ್ ದಾಖಲಾಗಿದೆ ಎಂದು ವೇಣೂರು ಪೊಲೀಸರು ತಿಳಿಸಿದ್ದಾರೆ.
ತಾಲ್ಲೂಕಿನ ಮರೋಡಿ ಗ್ರಾಮದ ಪಳಾರಗೋಳಿ ನಿವಾಸಿ ದೇವಿಪ್ರಸಾದ್ ಮನೆಯಿಂದ ಜ.20ರಂದು ಬೆಳಿಗ್ಗೆ ಮಂಗಳೂರಿನ ಬಂಗ್ರಕೂಳೂರು ನಿವಾಸಿಗಳಾದ ಮೊಯ್ದಿನ್ ನಾಸೀರ್ ಹಾಗೂ ಅಬ್ದುಲ್ ಸಮದ್ ಬೈಕ್ ಕಳ್ಳತನ ಮಾಡಿದ್ದು ಅವರನ್ನು ಹಿಡಿಯಲು ಹೋದಾಗ ಹಲ್ಲೆ ಮಾಡಿದ್ದಾರೆ ಎಂದು ದೇವಿಪ್ರಸಾದ್ ದೂರು ನೀಡಿದ್ದರು.
‘ಬೈಕ್ ತೆಗೆದುಕೊಂಡು ಹೋಗುತ್ತಿದ್ದಾಗ ತಮ್ಮನ್ನು ಹಿಡಿದು ಮರಕ್ಕೆ ಕಟ್ಟಿಹಾಕಿ ದೇವಿಪ್ರಸಾದ್ ಮತ್ತು ಇತರರು ಹಲ್ಲೆ ಮಾಡಿದ್ದಾರೆ’ ಎಂದು ಅಬ್ದುಲ್ ಸಮದ್ ಪ್ರತಿ ದೂರು ನೀಡಿದ್ದರು. ಮರೋಡಿ ಯಲ್ಲಿರುವ ನಾಸಿರ್ ಸಂಬಂಧಿಕರ ಮನೆಗೆ ತೆರಳಿ ವಾಪಸಾಗುವಾಗ ರಸ್ತೆ ಬದಿ ನಿಲ್ಲಿಸಿದ್ದ ಬೈಕ್ ತೆಗೆದುಕೊಂಡು ಹೋಗಿದ್ದೆವು. ಆಗ 2 ಬೈಕ್‌ಗಳಲ್ಲಿ ಬಂದ ನಾಲ್ವರು ಅಡ್ಡಗಟ್ಟಿದ್ದರು. ತಪ್ಪಿಸಿಕೊಂಡು ಮುಂದೆ ಹೋದಾಗ ಇನ್ನಷ್ಟು ಮಂದಿ ಬಂದು ಮರಕ್ಕೆ ಕಟ್ಟಿ ಹಾಕಿ ಹಲ್ಲೆ ನಡೆಸಿದ್ದಾರೆ ಎಂದು ಅಬ್ದುಲ್ ಸಮದ್ ದೂರಿನಲ್ಲಿ ತಿಳಿಸಿದ್ದಾರೆ.
ದೂರಿನ ಆಧಾರದಲ್ಲಿ ದೇವಿಪ್ರಸಾದ್, ಬಾಚು, ನಿಶೀತ್, ನರೇಶ್ ಅಂಚನ್, ರತ್ನಾಕರ, ಸ್ವಸ್ತಿಕ್, ದೇವಿಪ್ರಸಾದ್, ಸುಧೀರ್ ಹಾಗೂ ಚಂದ್ರಪ್ಪ ವಿರುದ್ಧ ಪ್ರಕರಣ ದಾಖಲಾಗಿದೆ.