ADVERTISEMENT

2011ರ ಗೆಜೆಟೆಡ್ ಪ್ರೊಬೇಷನರಿ ಪರೀಕ್ಷೆಯಲ್ಲಿ ಆಯ್ಕೆಯಾದವರ ರಕ್ಷಣೆಗೆ ಮಸೂದೆ

ಸಂಪುಟ ಸಭೆಯಲ್ಲಿ ಒಪ್ಪಿಗೆ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2022, 8:42 IST
Last Updated 9 ಫೆಬ್ರುವರಿ 2022, 8:42 IST
   

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗವು 362 ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ಭರ್ತಿಗೆ ನಡೆಸಿದ ಪರೀಕ್ಷೆಯಲ್ಲಿ ಆಯ್ಕೆಯಾದ ಎಲ್ಲ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡುವುದಕ್ಕೆ ಪೂರಕವಾದ ಮಸೂದೆಗೆ ಸಂಪುಟ ಸಭೆ ಬುಧವಾರ ಒಪ್ಪಿಗೆ ನೀಡಿದೆ.

ಸಂಪುಟ ಸಭೆ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ, '2011ರ ಗೆಜೆಟೆಡ್ ಪ್ರೊಬೇಷನರಿ ಪರೀಕ್ಷೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿಯನ್ನು ಕೆಪಿಎಸ್ ಸಿ ಅಧಿಸೂಚನೆಯಲ್ಲಿ ಪ್ರಕಟಿಸಿತ್ತು. ಅದನ್ನು 2015ರಲ್ಲಿ ಸರ್ಕಾರ ಒಪ್ಪಿಕೊಂಡಿತ್ತು. ಈ ಎಲ್ಲ ಅಂಶಗಳ ಆಧಾರದಲ್ಲಿ ಆಯ್ಕೆಯಾದ ಎಲ್ಲ ಅಭ್ಯರ್ಥಿಗಳಿಗೂ ನೇಮಕಾತಿ ಆದೇಶ ನೀಡಲು ತೀರ್ಮಾನಿಸಲಾಗಿದೆ' ಎಂದರು.

ಸಿಐಡಿ ತನಿಖೆಯ ಅಂತಿಮ ವರದಿ ಬರುವವರೆಗೂ ಕಾಯದೇ ಈ ಅಭ್ಯರ್ಥಿಗಳ ಆಯ್ಕೆಯನ್ನು ರದ್ದುಮಾಡುವ ತೀರ್ಮಾನವನ್ನು ಸರ್ಕಾರ ಆಗ ಕೈಗೊಂಡಿತ್ತು. ಸಂವಿಧಾನದ ಪ್ರಕಾರ ವಿಧಾನಮಂಡಲದಲ್ಲಿ ನಿರ್ಧಾರ ಕೈಗೊಂಡಿರಲಿಲ್ಲ. ಈ ಎಲ್ಲ ವಿಷಯಗಳನ್ನೂ ಪರಿಶೀಲಿಸಿ 362 ಅಭ್ಯರ್ಥಿಗಳ ರಕ್ಷಣೆಗೆ ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ADVERTISEMENT

ವಿಧಾನಮಂಡಲದ ಇದೇ ಅಧಿವೇಶನದಲ್ಲಿ ಮಸೂದೆ ಮಂಡಿಸಿ, ಅಂಗೀಕಾರ ಪಡೆಯಲಾಗುವುದು. ಈ ವಿಷಯದಲ್ಲಿ ನ್ಯಾಯಾಲಯವು ಎತ್ತಿರುವ ಆಕ್ಷೇಪಗಳಿಗೆ ನೀಡಬೇಕಿರುವ ಸಮಜಾಯಿಷಿಗಳನ್ನೂ ಮಸೂದೆಯಲ್ಲಿ ಸೇರಿಸಲಾಗಿದೆ ಎಂದು ಮಾಧುಸ್ವಾಮಿ ಹೇಳಿದರು.

ನೇಮಕಾತಿ ಆದೇಶ ನೀಡುವುದಕ್ಕೆ ಸೀಮಿತವಾಗಿ ಮಸೂದೆ ಮಂಡಿಸಲಾಗುವುದು. ಆಯ್ಕೆಯಾದವರಲ್ಲಿ ಕೆಲವರು ಈಗಾಗಲೇ ಬೇರೆ ಪರೀಕ್ಷೆಗಳಲ್ಲಿ ಆಯ್ಕೆಯಾಗಿ ಸೇವೆಯಲ್ಲಿದ್ದಾರೆ‌. ಸೇವೆಗೆ ಸೇರುವವರಿಗೆ ಜೇಷ್ಠತೆ ನೀಡುವ ಕುರಿತು ನಿಯಮಗಳಲ್ಲಿ ಸ್ಪಷ್ಟತೆ ನೀಡಲಾಗುವುದು ಎಂದರು.

2011ರ ಗೆಜೆಟೆಡ್ ಪ್ರೊಬೇಷನರಿ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂದು ಕೆಲವು ಅಭ್ಯರ್ಥಿಗಳು ಆರೋಪಿಸಿದ್ದರು. ಈ ಕುರಿತು ಸಿಐಡಿ ತನಿಖೆ ನಡೆಸಲಾಗಿತ್ತು. ತನಿಖೆಯ ವರದಿ ಆಧರಿಸಿ ನೇಮಕಾತಿ ಪಟ್ಟಿಯನ್ನು ರದ್ದುಗೊಳಿಸಲಾಗಿತ್ತು.

2011ರ ಪರೀಕ್ಷೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ರಕ್ಷಣೆ ನೀಡುವಂತೆ ಒತ್ತಾಯಿಸಿ ತುಮಕೂರು ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ ಮತ್ತು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಇತ್ತೀಚೆಗೆ ಪತ್ರ ಬರೆದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.