ADVERTISEMENT

ಹಕ್ಕಿಜ್ವರ: ಪಕ್ಷಿಗಳ ಕೊಲ್ಲುವಿಕೆ ಆರಂಭ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2020, 13:20 IST
Last Updated 17 ಮಾರ್ಚ್ 2020, 13:20 IST
   

ಮೈಸೂರು: ಹಕ್ಕಿಜ್ವರ ದೃಢಪಟ್ಟ ಇಲ್ಲಿನ ಕುಂಬಾರಕೊಪ್ಪಲುವಿನ ಒಂದು ಕಿ.ಮೀಟರ್ ವ್ಯಾಪ್ತಿಯ ಪ್ರದೇಶದಲ್ಲಿ 6,436 ಪಕ್ಷಿಗಳನ್ನು ಗುರುತಿಸಲಾಗಿದ್ದು, ಇವುಗಳ ಕೊಲ್ಲುವ ಪ್ರಕ್ರಿಯೆ ಮಂಗಳವಾರ ಆರಂಭವಾಗಿದೆ.

ಇವುಗಳಲ್ಲಿ ಕೋಳಿಗಳ ಜತೆಗೆ ಗೌಜುಲಕ್ಕಿ, ಗಿಳಿ, ಪಾರಿವಾಳಗಳು ಸೇರಿದಂತೆ ಇತರೆ ಸಾಕು ಪಕ್ಷಿಗಳೂ ಇವೆ. ಇವುಗಳನ್ನು ಕೊಲ್ಲಲು ಜಿಲ್ಲಾಡಳಿತವು 5 ಮಂದಿ ಸದಸ್ಯರಿರುವ ಕ್ಷಿಪ್ರ ಕಾರ್ಯಾಚರಣೆ ಪಡೆಯನ್ನು ರಚಿಸಿ, ಪ್ರತಿ ತಂಡಕ್ಕೆ ಸಾವಿರ ಪಕ್ಷಿಗಳನ್ನು ಕೊಲ್ಲುವ ಗುರಿ ನೀಡಿದೆ. ಈಗಾಗಲೇ ಕಾರ್ಯಾಚರಣೆ ಆರಂಭವಾಗಿದ್ದು, ಸಾವಿರಾರು ಪಕ್ಷಿಗಳನ್ನು ಕೊಂದು ಆಳವಾದ ಗುಂಡಿ ತೆಗೆದು ಹೂಳಲಾಗುತ್ತಿದೆ.

ಪೌಲ್ಟ್ರಿಗಳ ಆವರಣದಲ್ಲೇ ಅಲ್ಲಿನ ಕೋಳಿಗಳನ್ನು ಹೂತು ಸುಣ್ಣವನ್ನು ಸುರಿದು ಮುಚ್ಚಲಾಗುತ್ತಿದೆ. ಇನ್ನುಳಿದ ಪಕ್ಷಿಗಳನ್ನು ನಗರದ ಹೊರವಲಯದಲ್ಲಿ ಗುಂಡಿ ತೆಗೆದು ವಿಲೇವಾರಿ ಮಾಡಲಾಗುತ್ತಿದೆ.

ADVERTISEMENT

ಕೋಳಿ ಹಾಗೂ ಕೊಕ್ಕರೆ ಸತ್ತು ಬಿದ್ದ ಸ್ಥಳದ ಸುತ್ತಲಿನ ಒಂದು ಕಿ.ಮೀ. ಪ್ರದೇಶವನ್ನು ‘ರೋಗಪೀಡಿತ’ ವಲಯ ಎಂದು, ಒಂದು ಕಿ.ಮೀ. ಪ್ರದೇಶದಿಂದ 10 ಕಿ.ಮೀ. ವರೆಗಿನ ಸುತ್ತಳತೆಯ ಪ್ರದೇಶವನ್ನು ‘ಜಾಗೃತ ವಲಯ’ ಎಂದು ಘೋಷಿಸಲಾಗಿದೆ.

ವಿವಿಧೆಡೆ ಸತ್ತಿದ್ದ 7 ಪಕ್ಷಿಗಳ ಮಾದರಿಗಳನ್ನು ಭೋಪಾಲ್‌ನ ಪ್ರಾಣಿಗಳ ರೋಗ ಪತ್ತೆ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿತ್ತು. ಮಾರ್ಚ್‌ 12 ರಂದು ಕಳುಹಿಸಿದ್ದ 2 ಮಾದರಿಗಳಲ್ಲಿ ಎಚ್‌5ಎನ್‌1 ರೋಗಾಣು ಇರುವುದು ಖಚಿತವಾಗಿದೆ. ಇತರ ಮಾದರಿಗಳು ನೆಗೆಟಿವ್‌ ಆಗಿವೆ.

ಇದಕ್ಕೂ ಮುನ್ನ ನಗರದಲ್ಲಿರುವ ಬಹುತೇಕ ಎಲ್ಲ ಕೋಳಿ ಮಾಂಸದ ಅಂಗಡಿಗಳನ್ನು ಮುಚ್ಚಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.