ADVERTISEMENT

ಭತ್ತದ ಗದ್ದೆಗಳಿಗೆ ಕಾಡುಕೋಣಗಳ ಲಗ್ಗೆ: ಬೆಳೆ ಹಾನಿ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2018, 7:19 IST
Last Updated 7 ಅಕ್ಟೋಬರ್ 2018, 7:19 IST
ಮುಂಡಗೋಡ ತಾಲ್ಲೂಕಿನ ಕಾತೂರ ಅರಣ್ಯ ವ್ಯಾಪ್ತಿಯ ಭತ್ತದ ಗದ್ದೆಯೊಂದರಲ್ಲಿ ಕಾಡುಕೋಣಗಳ ಹಿಂಡು ಪೈರು ತಿಂದಿರುವುದು
ಮುಂಡಗೋಡ ತಾಲ್ಲೂಕಿನ ಕಾತೂರ ಅರಣ್ಯ ವ್ಯಾಪ್ತಿಯ ಭತ್ತದ ಗದ್ದೆಯೊಂದರಲ್ಲಿ ಕಾಡುಕೋಣಗಳ ಹಿಂಡು ಪೈರು ತಿಂದಿರುವುದು   

ಮುಂಡಗೋಡ (ಉತ್ತರ ಕನ್ನಡ):ತಾಲ್ಲೂಕಿನ ಕಾತೂರ ಅರಣ್ಯ ವ್ಯಾಪ್ತಿಯ ಹೊಲಗಳಿಗೆ ಶನಿವಾರ ರಾತ್ರಿ ಲಗ್ಗೆಯಿಟ್ಟ ಒಂಬತ್ತು ಕಾಡುಕೋಣಗಳ ಹಿಂಡು, ಭತ್ತದ ಗದ್ದೆಯಲ್ಲಿ ಪೈರನ್ನು ತಿಂದು, ತುಳಿದು ಹಾನಿ ಮಾಡಿವೆ.

ಬೆಡಸಗಾಂವ್, ಕೂರ್ಲಿ ಭಾಗದಲ್ಲಿ ತೆನೆ ಬಿಡುವ ಹಂತದಲ್ಲಿದ್ದ ಪೈರನ್ನು ತಿಂದಿವೆ.ಬೆಡಸಗಾಂವ್ ಗ್ರಾಮದ ಬಸಮ್ಮ ಗಣಪತಿ ನಾಯ್ಕ, ಗಣಪತಿ ಮಂಚ ನಾಯ್ಕ, ಬಂಗಾರಿ ಮಂಚ ನಾಯ್ಕ ಸೇರಿದಂತೆ ಆರೇಳು ರೈತರ ಬೆಳೆಗಳು ಕಾಡುಕೋಣಗಳಿಂದ ಹಾನಿಯಾಗಿವೆ. ಕೆಲವು ಗದ್ದೆಗಳಲ್ಲಿ ಬೆಳೆ ಕಟಾವು ಹಂತಕ್ಕೆ ಬಂದಿದ್ದರೆ, ಮತ್ತೆ ಕೆಲವೆಡೆತೆನೆ ಬಿಡುವ ಹಂತದಲ್ಲಿತ್ತು.

ಒಟ್ಟು 10 ಎಕರೆಗಿಂತಲೂ ಹೆಚ್ಚು ಕೃಷಿ ಕ್ಷೇತ್ರ ಹಾನಿಯಾಗಿರುವಬಗ್ಗೆ ರೈತರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಬೆಳೆ ನಷ್ಟಕ್ಕೆ ಪರಿಹಾರನೀಡುವಂತೆ ಮನವಿ ಮಾಡಿದ್ದಾರೆ.

ADVERTISEMENT

ಬ್ಯಾಂಕ್ ಗಳಲ್ಲಿ ಸಾಲಸೋಲ ಮಾಡಿ ಬೆಳೆದ ಭತ್ತ ಕಾಡುಕೋಣಗಳ ಪಾಲಾಗಿದೆ. ನೊಂದ ರೈತರಿಗೆ ಸರ್ಕಾರ ಸೂಕ್ತ ಪರಿಹಾರ ನೀಡಿ ಕೈಹಿಡಿಯಬೇಕು ಎಂದು ರೈತ ಗಣಪತಿ ನಾಯ್ಕ ಒತ್ತಾಯಿಸಿದ್ದಾರೆ.

ಕಾಡುಕೋಣಗಳನ್ನು ಮರಳಿ ಕಾಡಿಗೆ ಓಡಿಸಿ ರೈತರ ಬೆಳೆಯನ್ನು ರಕ್ಷಣೆ ಮಾಡುವಂತೆ ರೈತ ದೇವೇಂದ್ರ ನಾಯ್ಕ ಅರಣ್ಯ ಇಲಾಖೆಯನ್ನು ಆಗ್ರಹಿಸಿದ್ದಾರೆ. ‘ಒಟ್ಟು ಒಂಬತ್ತು ಕಾಡುಕೋಣಗಳು ಎರಡು ಹಿಂಡುಗಳಲ್ಲಿ ಬೆಡಸಗಾಂವ್, ಕೂರ್ಲಿ ಭಾಗದ ಗದ್ದೆಗಳಲ್ಲಿ ಓಡಾಡಿವೆ. ಬೆಳೆ ಹಾನಿಗೆಪರಿಹಾರ ಕೋರಿ ಇಲ್ಲಿಯವರೆಗೆ ಆರು ರೈತರು ಅರ್ಜಿ ಸಲ್ಲಿಸಿದ್ದಾರೆ’ ಎಂದು ಕೂರ್ಲಿ ಉಪವಲಯ ಅರಣ್ಯಾಧಿಕಾರಿ ಬಿ.ಎಸ್.ಆಗೇರ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಕಳೆದ ವರ್ಷ ಇದೇ ಅರಣ್ಯ ವ್ಯಾಪ್ತಿಯಲ್ಲಿ ಬೆಳೆ ರಕ್ಷಣೆಗೆ ಹಾಕಿದ್ದ ವಿದ್ಯುತ್ ತಂತಿಯನ್ನು ಸ್ಪರ್ಶಿಸಿ ಕಾಡುಕೋಣವೊಂದು ಒಂದು ಮೃತಪಟ್ಟಿದ್ದನ್ನು ಸ್ಮರಿಸಬಹುದು.ಪಾಳಾ ಹೋಬಳಿಯಲ್ಲೂಕಾಡುಕೋಣಗಳ ಹಾವಳಿಯಿದೆ ಎಂದು ರೈತರು ಹೇಳಿದ್ದಾರೆ. ಮತ್ತೊಂದೆಡೆಮುಂಡಗೋಡ ಹೋಬಳಿಯವಿವಿಧೆಡೆ ಬೆಳೆಗಳ ಮೇಲೆ ಕಾಡಾನೆಗಳು ದಾಳಿ ಮಾಡಿದ್ದು,ರೈತರು ಕಂಗಾಲಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.