ADVERTISEMENT

ಬಿಟ್‌ ಕಾಯಿನ್‌ ಪ್ರಕರಣ: ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ -ಕೆ. ಸುಧಾಕರ್‌

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2021, 1:26 IST
Last Updated 14 ನವೆಂಬರ್ 2021, 1:26 IST
ಡಾ.ಸುಧಾಕರ್‌
ಡಾ.ಸುಧಾಕರ್‌   

ಬೆಂಗಳೂರು: ‘ಬಿಟ್‌ ಕಾಯಿನ್‌ ಪ್ರಕರಣಕ್ಕೆ ಸಂಬಂಧಿಸಿ ಪ್ರಧಾನಿ ಕಚೇರಿಯಿಂದ ಪತ್ರ ಬರೆಯಲಾಗಿದೆ ಎಂಬುದು ಕಾಂಗ್ರೆಸ್‌ ಸೃಷ್ಟಿ. ಪತ್ರ ಬಂದಿದೆ ಎಂದರೆ ಯಾರಿಗೂ ಸಿಗದೇ ಇರುತ್ತದೆಯೇ. ಅದನ್ನು ಮುಚ್ಚಿಡಲು ಆಗುತ್ತದೆಯೇ’ ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್‌ ಪ್ರಶ್ನಿಸಿದರು.

ಕಾಂಗ್ರೆಸ್‌ ರಾಜ್ಯ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ದೆಹಲಿಯಲ್ಲಿ ಶನಿವಾರ ಬೆಳಿಗ್ಗೆ ನಡೆಸಿದ ಸುದ್ದಿಗೋಷ್ಠಿಗೆ ರಾತ್ರಿ 9 ಗಂಟೆಗೆ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಸುಧಾಕರ್‌, ಪ್ರಕರಣದ ಬಗ್ಗೆ ಸುದೀರ್ಘವಾಗಿ ಮಾತನಾಡಿದರು.

‘ಬಿಟ್‌ ಕಾಯಿನ್‌ ಪ್ರಕರಣವನ್ನು ಬೆಳಕಿಗೆ ತಂದಿದ್ದು ನಮ್ಮ ಸರ್ಕಾರ. ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ. ಸತ್ಯವನ್ನು ಜನರ ಮುಂದಿಡಲು ಸರ್ಕಾರ ಬದ್ಧವಾಗಿದೆ’ ಎಂದೂ ಹೇಳಿದರು. ಸುರ್ಜೇವಾಲಾ ಪ್ರಶ್ನೆಗಳಿಗೆ ಸುಧಾಕರ್‌ ನೀಡಿದ ಉತ್ತರಗಳು ಇಲ್ಲಿದೆ.

ADVERTISEMENT

ಸುರ್ಜೇವಾಲಾ: ಬಿಟ್ ಕಾಯಿನ್ ಮುಚ್ಚಿಹಾಕುವ ಪ್ರಹಸನದ ಪಾತ್ರಧಾರಿಗಳು ಯಾರು?

ಉತ್ತರ: ಈ ಹಗರಣದಲ್ಲಿ ಯಾವುದೇ ಪಾತ್ರಧಾರಿಗಳ ಪ್ರಶ್ನೆಯೇ ಉದ್ಭವಿಸದು. ಅದೊಂದು ವಿಕೃತಿ ಅಷ್ಟೇ. ನಿರಾಧಾರ ಆರೋಪಗಳನ್ನು ಮಾಡುತ್ತಿದ್ದಾರೆ. ವಿಷಯ ತಿರುಚಿ ತಪ್ಪುದಾರಿಗೆ ಎಳೆಯುತ್ತಿದ್ದಾರೆ.

ಸುರ್ಜೇವಾಲಾ: ಕಳುವಾದ ಬಿಟ್ ಕಾಯಿನ್‌ಗಳನ್ನು ಹ್ಯಾಕರ್ ಶ್ರೀಕೃಷ್ಣ ಅವರ ವ್ಯಾಲೆಟ್‌ನಿಂದ ರವಾನಿಸಲಾಗಿತ್ತೇ?

ಉತ್ತರ: ಶ್ರೀಕೃಷ್ಣನ ಖಾತೆಯಿಂದ ಯಾವುದೇ ಬಿಟ್ ಕಾಯಿನ್‌ಗಳನ್ನು ವರ್ಗಾಯಿಸಿಲ್ಲ. ಯಾವುದೇ ಬಿಟ್ ಕಾಯಿನ್ ಕಳುವಾಗಿಲ್ಲ. ಸೈಬರ್ ತಜ್ಞರ ಪ್ರಕಾರ ಅದು ಆರೋಪಿಯ ವೈಯಕ್ತಿಕ ಖಾತೆ ಅಲ್ಲ. ಬದಲಿಗೆ, ಬಿಟ್ ಕಾಯಿನ್ ವಿನಿಮಯ ಕೇಂದ್ರದ ವ್ಯಾಲೆಟ್ ಆಗಿತ್ತು. ಹೀಗಾಗಿ, ಈ ಖಾತೆಯನ್ನು ಮುಟ್ಟಲಿಲ್ಲ. ಆರೋಪಗಳು ಸತ್ಯಕ್ಕೆ ದೂರವಾದವುಗಳು.

ಸುರ್ಜೇವಾಲಾ: ಮುಖ್ಯಮಂತ್ರಿ ಬಸವ ರಾಜ ಬೊಮ್ಮಾಯಿ ಮತ್ತು ಇತರರ ಪಾತ್ರ, ಹೊಣೆಗಾರಿಕೆ ಏನು?

ಉತ್ತರ: ತನಿಖೆಯನ್ನು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರ ಮೇಲ್ವಿಚಾರಣೆಯಲ್ಲಿ ಪಾರದರ್ಶಕವಾಗಿ ಕೈಗೊಳ್ಳಲಾಗಿದೆ. ತನಿಖೆಯ ಮಾಹಿತಿ ಯನ್ನು ವಿವರವಾಗಿ ದಾಖಲಿಸಿ ಕಾಲ ಕಾಲಕ್ಕೆ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ.

ಸುರ್ಜೇವಾಲಾ: ಇಂಟರ್‌ಪೋಲ್‌ಗೆ ಯಾಕೆ ಮಾಹಿತಿ ನೀಡಿಲ್ಲ. ವಿಳಂಬ ಮಾಡಿದ್ದು ಯಾಕೆ?

ಉತ್ತರ: ಆರೋಪಿಯ ಸ್ವಯಂಪ್ರೇರಿತ ಹೇಳಿಕೆಯಲ್ಲಿ ಎಲ್ಲವನ್ನೂ ಹೇಳಿದ್ದರೂ ನಿಖರ ವಿವರಗಳನ್ನು ನೀಡಿರಲಿಲ್ಲ. ಸೈಬರ್ ತಜ್ಞರು ಡಿಜಿಟಲ್ ಸಾಕ್ಷ್ಯಗಳನ್ನು ಕೂಲಂಕಷವಾಗಿ ಪರಿಶೀಲಿಸಿ, ಆತನ ಹೇಳಿಕೆಗಳಲ್ಲಿ ಬಹುಪಾಲು ಆಧಾರರಹಿತ ಎಂದರು. ಈ ಪ್ರಕ್ರಿಯೆಗೆ ಸಮಯ ಹಿಡಿಯಿತು. ಬಳಿಕ ಇಂಟರ್ ಪೋಲ್‌ಗೆ ಕಳುಹಿಸಲಾಯಿತು.

ಸುರ್ಜೇವಾಲಾ: ಎನ್‌ಐಎ, ಇ.ಡಿಗೆ ಯಾಕೆ ಮಾಹಿತಿ ನೀಡಿಲ್ಲ?

ಉತ್ತರ: ಯಾವುದೇ ದೇಶದಿಂದ ಈ ಪ್ರಕರಣದ ಮಾಹಿತಿ ಕೋರಿ ಮನವಿ ಬಂದಿಲ್ಲ. ಆರೋಪಿ ಶ್ರೀಕೃಷ್ಣನ ಹೇಳಿಕೆಯಲ್ಲಿ ಹಲವು ಕ್ರಿಪ್ಟೊ ಕರೆನ್ಸಿ ವೆಬ್‌ಸೈಟ್‌ಗಳನ್ನು ಹ್ಯಾಕ್ ಮಾಡಿರುವುದಾಗಿ ತಿಳಿಸಿದ ಕಾರಣ ಸಂಬಂಧಿಸಿದ ದೇಶಗಳಿಗೆ ಮಾಹಿತಿ ನೀಡುವ ಉದ್ದೇಶದಿಂದ ಇಂಟರ್ ಪೋಲ್ ವಿಭಾಗಕ್ಕೆ ಮಾಹಿತಿ ನೀಡಲಾಗಿತ್ತು. ಇದೇ ಮಾಹಿತಿಯನ್ನು ಜಾರಿ ನಿರ್ದೇಶನಾಲಯಕ್ಕೂ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.