ADVERTISEMENT

'ಬಿಟ್‌ ಕಾಯಿನ್’ ಹಗರಣ: 2 ಹ್ಯಾಕ್‌; ₹ 2,283 ಕೋಟಿ ಗಳಿಕೆ!

ಶ್ರೀಕೃಷ್ಣ ವಿರುದ್ಧದ ದೋಷಾರೋಪ ಪಟ್ಟಿ

ಸಂತೋಷ ಜಿಗಳಿಕೊಪ್ಪ
Published 28 ಅಕ್ಟೋಬರ್ 2021, 22:33 IST
Last Updated 28 ಅಕ್ಟೋಬರ್ 2021, 22:33 IST
ಶ್ರೀಕೃಷ್ಣ
ಶ್ರೀಕೃಷ್ಣ   

ಬೆಂಗಳೂರು: ರೂಪಾಯಿ ಲೆಕ್ಕದಲ್ಲಿ ಸಾವಿರಾರು ಕೋಟಿ ಮೌಲ್ಯದ ಹಣ ಅದಲು ಬದಲಾಗಿರುವ ‘ಬಿಟ್ ಕಾಯಿನ್’ ಹಗರಣ ರಾಜ್ಯದಲ್ಲಿ ಕೋಲಾಹಲ ಎಬ್ಬಿಸಿದೆ. ಇದರಲ್ಲಿ ಕೆಲವು ಪ್ರಭಾವಿ ರಾಜಕಾರಣಿಗಳು ಹಾಗೂ ಅಧಿಕಾರಿಗಳು ಕೈಜೋಡಿಸಿದ್ದಾರೆ ಎಂಬ ವದಂತಿ ದಟ್ಟವಾಗಿದ್ದು, ರಾಜಕೀಯ ಬಿರುಗಾಳಿಗೆ ಕಾರಣವಾಗುವ ಸಾಧ್ಯತೆಯೂ ಇದೆ ಎಂದು ಹೇಳಲಾಗುತ್ತಿದೆ.

ಹಗರಣದ ಸೂತ್ರಧಾರಎನ್ನಲಾದ ಅಂತರರಾಷ್ಟ್ರೀಯ ಹ್ಯಾಕರ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ (26)ಬಗ್ಗೆ ವಿದೇಶದ ಹಾಗೂ ಕೇಂದ್ರ ತನಿಖಾ ತಂಡಗಳು ಮಾಹಿತಿ ಕಲೆ ಹಾಕುತ್ತಿವೆ ಎಂದು ಮೂಲಗಳು ಹೇಳುತ್ತಿವೆ.

ಹಣ ವಿನಿಮಯ ಏಜೆನ್ಸಿಗಳ ಎರಡೇ ಜಾಲತಾಣಗಳನ್ನು ಒಂದೇ ಪ್ರಯತ್ನದಲ್ಲಿ ಹ್ಯಾಕ್‌ ಮಾಡಿದ್ದ ಕೃಷ್ಣ, 5,000 ಬಿಟ್ ಕಾಯಿನ್ ದೋಚಿದ್ದ. ಗುರುವಾರದ(ಅ.28)ಮಾರುಕಟ್ಟೆ ಮೌಲ್ಯದ ಪ್ರಕಾರ ಒಂದು ಬಿಟ್‌ಕಾಯಿನ್‌ಗೆ ₹45.71 ಲಕ್ಷ ಇದ್ದು, ಅದರಂತೆ 5 ಸಾವಿರ ಬಿಟ್‌ಕಾಯಿನ್‌ಗಳು ₹2,283 ಕೋಟಿ ಬೆಲೆ ಬಾಳುತ್ತವೆ. ಇಷ್ಟು ಬೃಹತ್‌ ಮೊತ್ತವನ್ನು ಎರಡೇ ಹ್ಯಾಕ್‌ಗಳಲ್ಲಿ ಶ್ರೀಕೃಷ್ಣ ಲಪಟಾಯಿಸಿದ ಸಂಗತಿ ಹಗರಣದ ಅಗಾಧತೆಯನ್ನು ಬಿಚ್ಚಿಟ್ಟಿದೆ.

ADVERTISEMENT

ಬೆಂಗಳೂರಿನ ಜಯನಗರ ನಿವಾಸಿಶ್ರೀಕೃಷ್ಣನನ್ನು ಡ್ರಗ್ಸ್ ಪ್ರಕರಣದಲ್ಲಿ 2020ರ ನವೆಂಬರ್ 17ರಂದು ಬಂಧಿಸಿದ್ದ ಸಿಸಿಬಿ ಪೊಲೀಸರು, ಆತನ ಸೈಬರ್ ಅಪರಾಧ ಹಾಗೂ ಬಿಟ್‌ ಕಾಯಿನ್ ಅಕ್ರಮವನ್ನು ಪತ್ತೆ ಮಾಡಿದ್ದರು. ಆತನ ವಿರುದ್ಧ 1ನೇ ಎಸಿಎಂಎಂ ನ್ಯಾಯಾಲಯಕ್ಕೆ 2021ರ ಫೆಬ್ರವರಿ 22ರಂದು 757 ಪುಟಗಳ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ಆತನ ಹಿನ್ನೆಲೆ ಹಾಗೂ ಕೋಟಿಗಟ್ಟಲೇ ಮೌಲ್ಯದ ಬಿಟ್‌ ಕಾಯಿನ್ ಸಂಪಾದನೆ ಬಗ್ಗೆ ಇಂಚಿಂಚು ಮಾಹಿತಿಯನ್ನು ಪಟ್ಟಿಯಲ್ಲಿ ಉಲ್ಲೇಖಿಸಿದ್ದಾರೆ. ಈ ಆರೋಪ ಪಟ್ಟಿಯ ಪ್ರತಿ ‘ಪ್ರಜಾವಾಣಿ’ಗೆ ಲಭ್ಯವಾಗಿದೆ.

‘ಅಮೆರಿಕದ ಹಣ ವಿನಿಮಯ ಏಜೆನ್ಸಿ ‘ಬಿಟಿಸಿ ಇ ಡಾಟ್ ಕಾಮ್’ ಜಾಲತಾಣ ಹ್ಯಾಕ್ ಮಾಡಿದ್ದ ಆರೋಪಿ, ಅದರಿಂದ 3,000 ಬಿಟಿಸಿ (₹1,370 ಕೋಟಿ) ಗಳಿಸಿದ್ದ.

ಹ್ಯಾಕಿಂಗ್‌ನಿಂದ ಗಳಿಸಿದ್ದ ಅತೀ ದೊಡ್ಡ ಮೊತ್ತವಿದು. ಇದಾದ ನಂತರ, ‘ಬಿಟ್‌ ಫಿನಿಕ್ಸ್‌’ ಜಾಲತಾಣ ಹ್ಯಾಕ್ ಮಾಡಿ ಸರ್ವರ್‌ ತನ್ನದಾಗಿಸಿಕೊಂಡಿದ್ದ. ಇದಕ್ಕೆ ಇಬ್ಬರು ಇಸ್ರೇಲ್ ಹ್ಯಾಕರ್ಸ್‌ಗಳ ಸಹಾಯ ಪಡೆದಿದ್ದ. ಇದರಿಂದ 2,000 ಬಿಟಿಸಿ (₹ 913.33 ಕೋಟಿ) ಕಾಯಿನ್ ಸಂಪಾದಿಸಿದ್ದ’ ಎಂಬ ಮಾಹಿತಿ ಆರೋಪ ಪಟ್ಟಿಯಲ್ಲಿದೆ.

ಎಫ್‌ಐಆರ್‌ ಮಾಹಿತಿ ಕೇಳಿದ್ದ ಇ.ಡಿ
ಬಿಟ್‌ ಕಾಯಿನ್ ಅಕ್ರಮದ ಬಗ್ಗೆ ಸಿಸಿಬಿ ತನಿಖೆ ನಡೆಸುತ್ತಿರುವಾಗಲೇ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದರು. ಶ್ರೀಕೃಷ್ಣನ ಪ್ರಕರಣದ ಮಾಹಿತಿ ಕೇಳಿ, 2020ರ ಡಿಸೆಂಬರ್ 1ರಂದು ಸಿಸಿಬಿ ಅಧಿಕಾರಿಗಳಿಗೆ ಇ.ಡಿ ಉಪ ನಿರ್ದೇಶಕ ಎ. ಸಾದಿಕ್ ಮೊಹಮ್ಮದ್ ನೈನಾರ್ ಪತ್ರ ಬರೆದಿದ್ದರು.

‘ಅಂತರರಾಷ್ಟ್ರೀಯ ಹ್ಯಾಕರ್ ಶ್ರೀಕೃಷ್ಣನನ್ನು ಬಂಧಿಸಿ, ಆತನ ಬಗ್ಗೆ ನಿಮ್ಮ ಕಚೇರಿಯಲ್ಲಿ (ಸಿಸಿಬಿ) ತನಿಖೆ ನಡೆಸುತ್ತಿರುವುದು ಗಮನಕ್ಕೆ ಬಂದಿದೆ. ಈ ಪ್ರಕರಣದ ಎಫ್‌ಐಆರ್ ಪ್ರತಿ ಹಾಗೂ ಆರೋಪಗಳ ಪಟ್ಟಿ ಸಮೇತ ಮಾಹಿತಿ ನೀಡಬೇಕೆಂದು ಕೋರುತ್ತೇವೆ’ ಎಂದೂ ಪತ್ರದಲ್ಲಿ ಕೋರಿದ್ದರು.

‘ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ ಹಾಗೂ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಶ್ರೀಕೃಷ್ಣನನ್ನು ವಿಚಾರಣೆ ನಡೆಸಬೇಕಿದೆ. ಹೀಗಾಗಿ, ತ್ವರಿತವಾಗಿ ಮಾಹಿತಿ ಕಳುಹಿಸಿ’ ಎಂದೂ ಪತ್ರದಲ್ಲಿ ಉಲ್ಲೇಖಿಸಲಾಗಿತ್ತು.

₹ 333 ಕೋಟಿ ದೋಚಿದ ಪ್ರಕರಣಗಳು
* ಕಾಲೇಜಿನಲ್ಲಿದ್ದಾಗಲೇ ‘ರೂನೆಸ್ಕೆಪ್ ಡಾಟ್ ಕಾಮ್’ ಗೇಮಿಂಗ್ ಸರ್ವರ್ ಹ್ಯಾಕ್ ಮಾಡಿದ್ದ ಶ್ರೀಕೃಷ್ಣ, ₹ 7.48 ಕೋಟಿ ಸಂಪಾದಿಸಿದ್ದ.
* ‘ಜಿಜಿ ಪೋಕರ್’ ಗೇಮಿಂಗ್ ಸರ್ವರ್‌ ಹ್ಯಾಕ್ ಮಾಡಿದ್ದ ಆರೋಪಿ, 90 ಬಿಟಿಸಿ (₹ 41.22 ಕೋಟಿ) ಸಂಪಾದಿಸಿದ್ದ. ಸುನೀಶ್‌ ಹೆಗ್ಡೆ ಸಹಕಾರ ನೀಡಿದ್ದ
* 'ಬಿಟ್‌ ಕಾಯಿನ್ ಟಾಲ್ಕ್ ಡಾಟ್ ಒಆರ್‌ಜಿ' ಸರ್ವರ್‌ನ್ನು 2013ರಲ್ಲಿ ಹ್ಯಾಕ್ ಮಾಡಿದ್ದ.
* ‘ಬಿಟ್ ಸೆಂಟ್ರಲ್’ ಸರ್ವರ್ ಹ್ಯಾಕ್ ಮಾಡಿ, ₹ 74.89 ಲಕ್ಷ ಗಳಿಸಿದ್ದ.
* ‘ಸ್ಲಸ್ ‍ಪೂಲ್’ ಸರ್ವರ್ ಹ್ಯಾಕ್ ಮಾಡಿದ್ದ ಶ್ರೀಕೃಷ್ಣ, ₹ 37.44 ಲಕ್ಷ ದೋಚಿದ್ದ.
* 2017ರಲ್ಲಿ ‘ಬಿಟ್ ಕ್ಲಬ್‌ ನೆಟ್‌ವರ್ಕ್‌’ ಸರ್ವರ್‌ ಹ್ಯಾಕ್ ಮಾಡಿದ್ದ ಶ್ರೀಕೃಷ್ಣ, ಅದರಿಂದ 100 ಬಿಟಿಸಿ (₹ 45.66 ಕೋಟಿ) ಗಳಿಸಿದ್ದ.
* ಚೀನಾ ತಂತ್ರಜ್ಞರು ಅಭಿವೃದ್ಧಿಪಡಿಸಿದ್ದ ‘ಪಿಪಿ ಪೋಕರ್' ಗೇಮಿಂಗ್ ಸರ್ವರ್‌ನ್ನು 2017–18ರಲ್ಲಿ ಹ್ಯಾಕ್ ಮಾಡಿ ₹ 2 ಕೋಟಿ ಗಳಿಸಿದ್ದ.
* 2017ರ ಆಗಸ್ಟ್‌ನಲ್ಲಿ ‘ಸಿಸಿಐ ಪನಮ್’ ಜಾಲತಾಣ ಹ್ಯಾಕ್ ಮಾಡಿ ವೆಬ್ ಪ್ಯಾನಲ್ ತನ್ನ ತೆಕ್ಕೆಗೆ ತೆಗೆದುಕೊಂಡಿದ್ದ.
* ‘ಪೋಕರ್‌ ಬಾಜಿ’ ಗೇಮಿಂಗ್ ಸರ್ವರ್ ಹ್ಯಾಕ್ ಮಾಡಿದ್ದ. ಆಟಗಾರರಿಗೆ ಅಕ್ರಮವಾಗಿ ಗೋಲ್ಡ್ ಕಾಯಿನ್ ಮಾರಾಟ ಮಾಡಿ ಆರ್‌ಬಿಎಲ್‌ ಬ್ಯಾಂಕ್‌ನಿಂದ ₹ 70 ಲಕ್ಷವನ್ನು ತನ್ನ ಖಾತೆಗೆ ವರ್ಗಾಯಿಸಿಕೊಂಡಿದ್ದ. ಆದರೆ, ಈ ಪ್ರಕರಣದ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಹಣ ವಾಪಸ್ ಹೋಗಿತ್ತು.
* 2018ರ ನವೆಂಬರ್‌ನಲ್ಲಿ ‘ಹೆಲಿಕ್ಸ್ ಮಿಕ್ಸರ್’ ಹ್ಯಾಕ್ ಮಾಡಿದ್ದ ಆರೋಪಿ, 510 ಬಿಟಿಸಿ (₹ 232.90 ಕೋಟಿ) ಗಳಿಸಿದ್ದ.
* ‘ಪೋಕರ್ ದಂಗಲ್’ ಹಾಗೂ ‘ಪೋಕರ್ ಬಾಜಿ’ ಗೇಮಿಂಗ್ ಜಾಲತಾಣವನ್ನು 2015ರ ಏಪ್ರಿಲ್‌ನಲ್ಲಿ ಹ್ಯಾಕ್ ಮಾಡಿದ್ದ. ಅದರಿಂದ ₹ 1.50 ಕೋಟಿ ದೋಚಿದ್ದ.

***

ಅಮೆರಿಕದ ತನಿಖಾ ಸಂಸ್ಥೆ ಫೆಡರಲ್‌ ಬ್ಯುರೊ ಆಫ್‌ ಇನ್‌ವೆಸ್ಟಿಗೇಷನ್‌ (ಎಫ್‌ಬಿಐ) ತಂಡ ಬೆಂಗಳೂರಿಗೆ ಬಂದೇ ಇಲ್ಲ. ಅಂತಹ ಸುದ್ದಿಗಳೆಲ್ಲ ಊಹಾಪೋಹ.
-ಆರಗ ಜ್ಞಾನೇಂದ್ರ, ಗೃಹ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.