ADVERTISEMENT

ತಿಪ್ಪೆ ಸಾರಿಸುವ ಕ್ಷಮೆ ನಿಮಗೆ ಭೂಷಣವೇ? ರಮೇಶ್‌ ಕುಮಾರ್‌ಗೆ ಬಿಜೆಪಿ ಪ್ರಶ್ನೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 17 ಡಿಸೆಂಬರ್ 2021, 11:28 IST
Last Updated 17 ಡಿಸೆಂಬರ್ 2021, 11:28 IST
ರಮೇಶ್ ಕುಮಾರ್‌
ರಮೇಶ್ ಕುಮಾರ್‌    

ಬೆಂಗಳೂರು: ‘ಅತ್ಯಾಚಾರ’ದ ಕುರಿತು ಮಾಜಿ ಸ್ಪೀಕರ್‌, ಕಾಂಗ್ರೆಸ್‌ ಶಾಸಕ ರಮೇಶ್‌ ಕುಮಾರ್‌ ಅವರು ಗುರುವಾರ ಸದನದಲ್ಲಿ ಆಡಿರುವ ಮಾತಿಗೆ ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಅಲ್ಲದೇ, ತಮ್ಮ ಹೇಳಿಕೆಗೆ ರಮೇಶ್‌ ಕುಮಾರ್‌ ಕ್ಷಮೆ ಯಾಚಿಸಿರುವುದನ್ನು ಗೇಲಿ ಮಾಡಿದೆ.

ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿಯು ಸರಣಿ ಪೋಸ್ಟ್‌ಗಳನ್ನು ಪ್ರಕಟಿಸಿದೆ.

‘ಮಾನ್ಯ ರಮೇಶ್ ಕುಮಾರ್ ಅವರೇ, ಶಾಸನಸಭೆಯಲ್ಲಿ ಎಂತಹ ಮೇಲ್ಪಂಕ್ತಿ ಹಾಕಿ ಬಿಟ್ಟಿರಿ? ಮಹಿಳೆಯರ ಗೌರವದ ಬಗ್ಗೆ ಸದನದಲ್ಲಿ ಈ ರೀತಿ ಮಾತನಾಡಿದ್ದು ಸೂಕ್ತವೇ? ಕಿರಿಯರಿಗೆ ಮೇಲ್ಪಂಕ್ತಿ ಹಾಕಬೇಕಿದ್ದ ನೀವು ಇಂಥ ಕೀಳು ಅಭಿರುಚಿಯ ಮಾತನಾಡಿದ್ದು ಎಷ್ಟು ಸರಿ?’ ಎಂದು ಪ್ರಶ್ನೆ ಮಾಡಿದೆ.

ADVERTISEMENT

‘ಮಾತು ಆಡಿದರೆ ಹೋಯ್ತು, ಮುತ್ತು ಒಡೆದರೆ ಹೋಯ್ತು ಎಂಬ ಆಡುಮಾತಿನ ಅರ್ಥವನ್ನು ರಮೇಶ್ ಕುಮಾರ್ ಅವರಿಗೆ ಹೇಳಿ ಕೊಡಬೇಕಿಲ್ಲ. ಮಹಿಳೆಯರ ಬಗ್ಗೆ ಸಂವೇದನಾ ರಹಿತವಾಗಿ ಆಡಿದ ಮಾತುಗಳು ಕ್ಷಮೆಗೂ ಅರ್ಹವಲ್ಲ. ನಿಮ್ಮ ವಿದ್ವತ್ ಕೇವಲ ಪೊಳ್ಳು ಭಾಷಣಕ್ಕೆ ಸೀಮಿತವಾದಂತಿದೆ,’ ಎಂದು ಟೀಕಿಸಿದೆ.

‘ಮಹಿಳೆಯರ ಗೌರವದ ಬಗ್ಗೆ ಕಾಂಗ್ರೆಸ್‌ ಹಿರಿಯ ನಾಯಕ ರಮೇಶ್ ಕುಮಾರ್ ಅವರು ತೀರಾ ಕೆಳಮಟ್ಟದಲ್ಲಿ ಮಾತನಾಡಿದ್ದಾರೆ. ಇದು ಮಹಿಳೆಯರ ಬಗ್ಗೆ ಕಾಂಗ್ರೆಸ್‌ ಹೊಂದಿರುವ ಒಳಮನಸ್ಸಿನ ಅಭಿವ್ಯಕ್ತಿ. ರಮೇಶ್ ಕುಮಾರ್ ಅವರು ಅದಕ್ಕೊಂದು ದೃಷ್ಟಾಂತ ಮಾತ್ರ‌. ಮಹಿಳೆಯರ ಬಗ್ಗೆ ಕಾಂಗ್ರೆಸ್ಸಿಗರ ದೃಷ್ಟಿಕೋನವೇ ಇಷ್ಟು,’ ಎಂದು ಹೇಳಿದೆ.

‘ಅತ್ಯಾಚಾರದ ಬಗ್ಗೆ ರಮೇಶ್ ಕುಮಾರ್ ಅವರು ಕೀಳಾಗಿ ಮಾತನಾಡುವಾಗ ಮಹಿಳಾ ಸದಸ್ಯರೂ ಉಪಸ್ಥಿತರಿದ್ದರು. ಉಚಿತ-ಅನುಚಿತ ಪ್ರಜ್ಞೆ ಇಲ್ಲದೇ ಆಡುವ ಮಾತುಗಳು ಕ್ಷಮೆಗೆ ಅರ್ಹವೇ. ರಮೇಶ್‌ ಕುಮಾರ್‌ ಅವರೇ, ತಿಪ್ಪೆಸಾರಿಸುವ ಕ್ಷಮೆ ನಿಮ್ಮಂಥವರಿಗೆ ಭೂಷಣವೇ?’ ಎಂದು ಬಿಜೆಪಿ ಪ್ರಶ್ನಿಸಿದೆ.

ಕರ್ನಾಟಕ ವಿಧಾನಸಭೆಯಲ್ಲಿ ಗುರುವಾರ ನಡೆದ ಚರ್ಚೆಯ ವೇಳೆ ಶಾಸಕರ ಅಸಹಕಾರದ ಬಗ್ಗೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅಸಮಾಧಾನ ವ್ಯಕ್ತಪಡಿಸಿದ್ದರು. ಎಷ್ಟು ಶಾಸಕರು ಬೇಕಾದರೂ ಮಾತನಾಡಲಿ, ನಾನು ಕೇಳುತ್ತಾ ಆನಂದಿಸುವುದನ್ನು ಬಿಟ್ಟರೆ ಇನ್ನೇನು ಮಾಡಲಿ. ಅಜೆಂಡಾದಲ್ಲಿರುವ ಬೇರೆ ಯಾವುದೇ ವಿಷಯಗಳನ್ನು ಕೈಗೆತ್ತಿಕೊಳ್ಳಲು ಸಾಧ್ಯವಾಗುವುದಿಲ್ಲ. ಇದಕ್ಕೆ ಒಂದು ಮಾತಿದೆಯಲ್ಲವೇ, ರಮೇಶ್ ಕುಮಾರ್ ಎಂದು ಪ್ರಶ್ನಿಸಿದ್ದರು. ಇದಕ್ಕುತ್ತರಿಸಿದ್ದ ಕಾಂಗ್ರೆಸ್ ಶಾಸಕ, ‘ದೇರ್‌ ಈಸ್‌ ಎ ಸೇಯಿಂಗ್‌, ವೆನ್‌ ರೇಪ್‌ ಈಸ್‌ ಇನೆವಿಟೆಬಲ್‌ ಲೆಟ್‌ ಲೇ ಡೌನ್‌ ಅಂಡ್‌ ಎಂಜಾಯ್‌’ (ಅಂದರೆ, ಅತ್ಯಾಚಾರದಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗದಿದ್ದರೆ, ಮಲಗಿ ಆನಂದಿಸಿ) ಎಂದು ಹೇಳಿದ್ದರು. ಇದನ್ನು ಕೇಳಿ ಕಾಗೇರಿ ನಗಾಡಿದ್ದರು.

ಹೇಳಿಕೆ ವಿವಾದಕ್ಕೀಡಾಗುತ್ತಿದ್ದಂತೆ ರಮೇಶ್‌ ಕುಮಾರ್ ಕ್ಷಮೆ ಯಾಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.