ADVERTISEMENT

ಮುಖ್ಯಮಂತ್ರಿ ವಿರುದ್ಧ ರಾಜ್ಯಪಾಲರಿಗೆ ಬಿಜೆಪಿ ದೂರು

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2019, 20:17 IST
Last Updated 9 ಏಪ್ರಿಲ್ 2019, 20:17 IST

ಬೆಂಗಳೂರು: ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಪ್ರಮಾಣವಚನ ಸ್ವೀಕರಿಸುವ ವೇಳೆ ಮಾಡಿದ್ದ ಗೋಪ್ಯತೆಯ ಪ್ರಮಾಣವನ್ನು ಹಲವು ಬಾರಿ ಉಲ್ಲಂಘಿಸಿದ್ದಾರೆ ಎಂದು ದೂರಿ ಬಿಜೆಪಿ ರಾಜ್ಯ ನಿಯೋಗವು ರಾಜ್ಯಪಾಲ ವಜುಭಾಯಿ ವಾಲಾ ಅವರಿಗೆ ಮಂಗಳವಾರ ದೂರು ನೀಡಿದೆ.

ರಾಜ್ಯಸಭಾ ಸದಸ್ಯ ರಾಜೀವ್‌ ಚಂದ್ರಶೇಖರ್‌, ಶಾಸಕ ಸಿ.ಎನ್‌.ಅಶ್ವತ್ಥನಾರಾಯಣ್‌, ಪಕ್ಷದ ಸಹವಕ್ತಾರ ಎ.ಎಚ್‌.ಆನಂದ್‌ ನಿಯೋಗದಲ್ಲಿದ್ದರು.

‘ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ದಾಳಿಯನ್ನು ಕುಮಾರಸ್ವಾಮಿ ಅವರು ಒಂದು ದಿನ ಮುಂಚಿತವಾಗಿಯೇ ಬಹಿರಂಗಪಡಿಸಿದ್ದಾರೆ. ಅಲ್ಲದೆ, ಸಂಪುಟದ ಬಹುತೇಕ ಸಚಿವರ ಜತೆಗೂಡಿ ಆದಾಯ ತೆರಿಗೆ ಇಲಾಖೆ ಎದುರು ಪ್ರತಿಭಟನೆ ನಡೆಸಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ. ಈ ಮೂಲಕ ದೇಶದ ಒಕ್ಕೂಟ ವ್ಯವಸ್ಥೆಗೆ ಚ್ಯುತಿ ತಂದಿದ್ದಾರೆ’ ಎಂದು ರಾಜೀವ್‌ ಚಂದ್ರಶೇಖರ್‌ ತಿಳಿಸಿದರು.

ADVERTISEMENT

‘ದೇಶದ ಭದ್ರತೆ ವಿಷಯದಲ್ಲೂ ಮುಖ್ಯಮಂತ್ರಿ ತಪ್ಪು ಎಸಗಿದ್ದಾರೆ. ಪುಲ್ವಾಮಾ ದಾಳಿ, ಸರ್ಜಿಕಲ್‌ ಸ್ಟ್ರೈಕ್‌ ನಡೆಯುತ್ತದೆ ಎಂದು ಎರಡು ವರ್ಷಗಳ ಮೊದಲೇ ಗೊತ್ತಿತ್ತು ಎಂದಿದ್ದಾರೆ’ ಎಂದರು.

ದೂರಿನ ಪ್ರತಿಯನ್ನು ಮಂಗಳವಾರವೇ ಕೇಂದ್ರ ಗೃಹ ಸಚಿವಾಲಯಕ್ಕೆ ಕಳುಹಿಸುವುದಾಗಿ ರಾಜ್ಯಪಾಲರು ಭರವಸೆ ನೀಡಿದ್ದಾರೆ ಎಂದರು.

ಸಿ.ಎನ್‌.ಅಶ್ವತ್ಥನಾರಾಯಣ, ‘ಪುಲ್ವಾಮಾ ದಾಳಿಯ ಬಗ್ಗೆ ಹೇಳಿಕೆ ನೀಡುವ ಮೂಲಕ ಮುಖ್ಯಮಂತ್ರಿ ದೇಶಕ್ಕೆ ದ್ರೋಹ ಎಸಗಿದ್ದಾರೆ. ಪಾಕಿಸ್ತಾನದ ಪರ ವಕಾಲತ್ತು ವಹಿಸುವ ರೀತಿಯಲ್ಲಿ ಕುಮಾರಸ್ವಾಮಿ ಮಾತನಾಡಿದ್ದಾರೆ. ಚುನಾವಣೆಯಲ್ಲಿ ಗೆಲ್ಲುವ ಉದ್ದೇಶದಿಂದ ಈ ರೀತಿ ಹೇಳಿಕೆ ನೀಡಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.