ADVERTISEMENT

‘ಹಣ ಹಂಚುತ್ತಿರುವ ಡಿಕೆಶಿ’: ಬಿಜೆಪಿ ದೂರು

​ಪ್ರಜಾವಾಣಿ ವಾರ್ತೆ
Published 13 ಮೇ 2019, 20:00 IST
Last Updated 13 ಮೇ 2019, 20:00 IST
   

ಬೆಂಗಳೂರು: ಕುಂದಗೋಳ ವಿಧಾನಸಭಾ ಕ್ಷೇತ್ರದಲ್ಲಿ ಸಚಿವ ಡಿ.ಕೆ.ಶಿವಕುಮಾರ್‌ ವಿವಿಧ ಸಮುದಾಯಗಳ ನಾಯಕರು, ಪ್ರಭಾವಿ ವ್ಯಕ್ತಿಗಳು ಮತ್ತು ಮತದಾರರಿಗೆ ಹಣ ಹಂಚುತ್ತಿದ್ದಾರೆ ಎಂದು ಬಿಜೆಪಿ ಮುಖ್ಯಚುನಾವಣಾಧಿಕಾರಿಗೆ ದೂರು ನೀಡಿದೆ.

ಹುಬ್ಬಳ್ಳಿಯ ವಿಮಾನನಿಲ್ದಾಣದ ಸಮೀಪದಲ್ಲಿರುವ ಕಾಟನ್‌ ಕೌಂಟಿ ಹೊಟೇಲ್‌ನಲ್ಲಿ ಬೀಡು ಬಿಟ್ಟಿರುವ ಶಿವಕುಮಾರ್‌ ಹಣ ಹಂಚುವ ಕಾರ್ಯವನ್ನು ಮುಂದುವರಿಸಿದ್ದಾರೆ. ಇದರಿಂದ ಚುನಾವಣೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ಬಿಜೆಪಿ ಹೇಳಿದೆ.

ಹಣ ವಿತರಿಸುವಸಚಿವರ ಈ ಕೃತ್ಯಕ್ಕೆಅಧಿಕಾರಿಗಳು ಮತ್ತು ಪೊಲೀಸರು ಬೆಂಬಲವಾಗಿ ನಿಂತಿದ್ದಾರೆ. ಚುನಾವಣಾ ಆಯೋಗ ಡಿ.ಕೆ.ಶಿವಕುಮಾರ್‌ ಮೇಲೆ ಕಟ್ಟುನಿಟ್ಟಿನ ನಿಗಾ ಇಡಬೇಕು ಎಂದೂ ಮನವಿ ಮಾಡಿದೆ.

ADVERTISEMENT

ಸಿ.ಎಂ.ಇಬ್ರಾಹಿಂ ವಿರುದ್ಧ ಕ್ರಮಕ್ಕೆ ಆಗ್ರಹ: ಪ್ರಧಾನಮಂತ್ರಿ ನರೇಂದ್ರಮೋದಿ ಅವರನ್ನು ಆಧುನಿಕ ರಾವಣ ಎಂದು ಅಸಭ್ಯವಾಗಿ ಮಾತನಾಡಿರುವ ಕಾಂಗ್ರೆಸ್‌ ಮುಖಂಡ ಸಿ.ಎಂ.ಇಬ್ರಾಹಿಂ ವಿರುದ್ಧ ಕ್ರಮತೆಗೆದುಕೊಳ್ಳಬೇಕು ಎಂದು ಬಿಜೆಪಿ ಮತ್ತೊಂದು ದೂರು ನೀಡಿದೆ.

ಚಿಂಚೋಳಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಪ್ರಚಾರ ನಡೆಸುತ್ತಿರುವ ಇಬ್ರಾಹಿಂ ಪ್ರಧಾನಿ ವಿರುದ್ಧ ವೈಯಕ್ತಿಕವಾಗಿ ಟೀಕೆ ಮಾಡುತ್ತಿದ್ದಾರೆ. ಇದು ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ ಎಂದು ಬಿಜೆಪಿ ತಿಳಿಸಿದೆ.

ಜಾತಿ ಮತ್ತು ಉಪಜಾತಿ ಹೆಸರಿನಲ್ಲಿ ಜನರನ್ನು ಒಡೆಯವ ಕೆಲಸದಲ್ಲೂ ಇಬ್ರಾಹಿಂ ತೊಡಗಿದ್ದಾರೆ. ಇವರಿಗೆ ಪ್ರಚಾರ ನಡೆಸಲು ಅವಕಾಶ ನೀಡಿದರೆ, ಸಾಮಾಜಿಕ ಸಾಮರಸ್ಯ ಹಾಳು ಮಾಡುವ ಹೇಳಿಕೆಗಳನ್ನು ನೀಡುತ್ತಾರೆ. ಆದ್ದರಿಂದ ಅವರ ಪ್ರಚಾರ ಭಾಷಣಕ್ಕೆ ಕಡಿವಾಣ ಹಾಕಬೇಕು ಮತ್ತು ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.