ಬೆಂಗಳೂರು: ರಾಜ್ಯಕ್ಕೆ ಹೊಸ ಮುಖ್ಯಮಂತ್ರಿ ಆಯ್ಕೆಯ ಕುರಿತು ಚರ್ಚೆಗಳು ಒಂದೆಡೆಯಾದರೆ, ಬಿ.ಎಸ್.ಯಡಿಯೂರಪ್ಪ ಅವರ ರಾಜೀನಾಮೆಗೆ ಕಾರಣ ಬಹಿರಂಗ ಪಡಿಸಲಿ ಎಂದು ವಿರೋಧ ಪಕ್ಷಗಳು ಕುಟುಕುತ್ತಿವೆ. ‘2019ರಲ್ಲಿ ಪ್ರವಾಹ ಬಂದಾಗ ಸಚಿವ ಸಂಪುಟ ಇರಲಿಲ್ಲ. ಈ ಬಾರಿ ಪ್ರವಾಹ ಬಂದಾಗ ಮುಖ್ಯಮಂತ್ರಿಯೇ ರಾಜೀನಾಮೆ ನೀಡಿದ್ದಾರೆ. ಇದು ಕರ್ನಾಟಕದ ದುರ್ದೈವವೇ ಸರಿ' ಎಂದು ಸಿದ್ದರಾಮಯ್ಯ ಅವರು ಮಾಡಿರುವ ಟೀಕೆಗೆ ಬಿಜೆಪಿ ತಿರುಗೇಟು ನೀಡಿದೆ.
'2019ರಲ್ಲಿ ನೆರೆ ಬಂದಾಗ ನಿಮ್ಮಲ್ಲಿ ರಾಜಕೀಯ ಅಸ್ಥಿರತೆಯನ್ನೇ ಮೂಡಿಸಿದ್ದ ಸಂದರ್ಭದಲ್ಲಿ ನಿಮ್ಮನ್ನು ಗೆಲ್ಲಿಸಿದ ಬಾದಾಮಿ ಕ್ಷೇತ್ರಕ್ಕೆ ಭೇಟಿ ನೀಡಲು ಕಣ್ಣು ನೋವಿನ ಅಡ್ಡಿ ಹೇಳಿದ್ದು ಮರೆತು ಹೋಯಿತೇ?' ಎಂದು ಬಿಜೆಪಿ ರಾಜ್ಯ ಘಟಕದ ಟ್ವಿಟರ್ ಖಾತೆಯಲ್ಲಿ ಸಿದ್ದರಾಮಯ್ಯ ಅವರ ಹೇಳಿಕೆಗಳನ್ನು ಪ್ರಶ್ನಿಸಲಾಗಿದೆ.
'ಬಿ.ಎಸ್. ಯಡಿಯೂರಪ್ಪ ಅವರನ್ನು ಬಿಜೆಪಿ ಹೈಕಮಾಂಡ್‌ನವರು ಹೆದರಿಸಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಪಡೆದಿದ್ದಾರೆ. ಯಡಿಯೂರಪ್ಪ ಸ್ವಇಚ್ಛೆಯಿಂದ ರಾಜೀನಾಮೆ ನೀಡಿಲ್ಲ' ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನಿನ್ನೆ ಬೆಳಗಾವಿಯಲ್ಲಿ ಹೇಳಿದ್ದರು.
ಹಿಂದೆ ಕಾಂಗ್ರೆಸ್ ಪಕ್ಷ ರಾಜ್ಯದ ಮುಖ್ಯಮಂತ್ರಿಗಳಿಂದ ರಾಜೀನಾಮೆ ಪಡೆದಿರುವ ಘಟನೆಗಳನ್ನು ನೆನಪಿಸಿಕೊಳ್ಳುವಂತೆ ಬಿಜೆಪಿ ಟ್ವೀಟಿಸಿದೆ. 'ಮುಖ್ಯಮಂತ್ರಿ ಸ್ಥಾನದಲ್ಲಿದ್ದ ವೀರೇಂದ್ರ ಪಾಟೀಲ ಅವರನ್ನು ಅನಾರೋಗ್ಯದಲ್ಲಿರುವಾಗಲೇ, ವಿಮಾನ ನಿಲ್ದಾಣದಲ್ಲಿ ರಾಜೀವ್ ಗಾಂಧಿ "ಮುಖ್ಯಮಂತ್ರಿ ಪದವಿಯಿಂದ ಕಿತ್ತೆಸೆದದ್ದನ್ನು" ರಾಜ್ಯದ ಜನತೆ ಮರೆತಿಲ್ಲ' ಎಂದು ಪ್ರಕಟಿಸಿದೆ.
'ದೇವರಾಜ್ ಅರಸು, ರಾಮಕೃಷ್ಣ ಹೆಗಡೆ, ಬಂಗಾರಪ್ಪ ಕೂಡಾ ವಿಧಾನಸಭೆ ವಿಸರ್ಜನೆಗೆ ಮುನ್ನ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು' ಅವರೆಲ್ಲರೂ ಮಧ್ಯದಲ್ಲೇ ಯಾವ ಕಾರಣದಿಂದ ಹೊರನಡೆದರು ಎಂದು ಸಿದ್ದರಾಮಯ್ಯ ಅವರನ್ನು ಬಿಜೆಪಿ ಪ್ರಶ್ನಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.