ADVERTISEMENT

ಬಿಜೆಪಿ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಸಿದ್ಧ: ಕೆಲ ಸಂಸದರಿಗೆ ಕೊಕ್‌?

ಇಂದು ಘೋಷಣೆ ಸಾಧ್ಯತೆ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2019, 19:57 IST
Last Updated 17 ಮಾರ್ಚ್ 2019, 19:57 IST
   

ಬೆಂಗಳೂರು: ಕೇಂದ್ರ ಸಚಿವ ಅನಂತ ಕುಮಾರ ಹೆಗಡೆ, ಸಂಸದೆ ಶೋಭಾ ಕರಂದ್ಲಾಜೆ ಪ್ರತಿನಿಧಿಸುವ ಕ್ಷೇತ್ರಗಳಲ್ಲಿ 2–3 ಅಭ್ಯರ್ಥಿಗಳ ಹೆಸರನ್ನು ಶಿಫಾರಸು ಮಾಡಿರುವ ಬಿಜೆಪಿ ಪ್ರಮುಖರ ಸಮಿತಿ, ಐದು ಸಂಸದರ ಸಾಧನೆ ತೃಪ್ತಿಕರವಾಗಿಲ್ಲ ಎಂದು ಟಿಪ್ಪಣಿ ಸಿದ್ಧಪಡಿಸಿದೆ.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಭಾನುವಾರ ನಡೆದ ಪಕ್ಷದ ಪ್ರಮುಖರ ಸಭೆಯಲ್ಲಿ ಸಂಭಾವ್ಯ ಅಭ್ಯರ್ಥಿಗಳ ಹೆಸರನ್ನು ಅಖೈರುಗೊಳಿಸಲಾಯಿತು. ಪಟ್ಟಿಯನ್ನು ಹಿಡಿದುಕೊಂಡು ದೆಹಲಿಗೆ ತೆರಳಿರುವ ನಾಯಕರು, ಪಕ್ಷದ ವರಿಷ್ಠರಿಗೆ ಸಲ್ಲಿಸಲಿದ್ದಾರೆ.

‘ಸಂಸದರ ಸಾಧನೆಯ ಬಗ್ಗೆ ಪ್ರತ್ಯೇಕ ಸಮೀಕ್ಷೆ ಹಾಗೂ ಗೆಲ್ಲುವ ಹುರಿಯಾಳುಗಳ ಬಗ್ಗೆ ವರದಿ ತರಿಸಿಕೊಂಡಿರುವ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ರಾಜ್ಯ ನಾಯಕರ ಪಟ್ಟಿಗೆ ಯಥಾವತ್ತು ಅಂಕಿತ ಹಾಕುವುದು ಅನುಮಾನ. ಶೋಭಾ ಕರಂದ್ಲಾಜೆ, ಸಂಗಣ್ಣ ಕರಡಿ, ಸುರೇಶ ಅಂಗಡಿ ಸೇರಿದಂತೆ ಕೆಲವರಿಗೆ ಟಿಕೆಟ್‌ ಕೈತಪ್ಪಿದರೂ ಅಚ್ಚರಿಯಿಲ್ಲ’ ಎಂದು ಮೂಲಗಳು ಹೇಳಿವೆ.

ADVERTISEMENT

ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ಭಾನುವಾರ ಸುಮಾರು ಮೂರು ತಾಸು ಪ್ರಮುಖರ ಸಮಿತಿ ಸಭೆ ನಡೆಯಿತು. ಪ್ರತಿ ಕ್ಷೇತ್ರದ ಸಂಭಾವ್ಯ ಅಭ್ಯರ್ಥಿಗಳ ಸಾಮರ್ಥ್ಯ ಹಾಗೂ ದೌರ್ಬಲ್ಯಗಳ ಪರಾಮರ್ಶೆ ಬಳಿಕ ಪಟ್ಟಿಗೆ ಸಮಿತಿ ಅಂತಿಮ ರೂಪ ನೀಡಿದೆ.ಈ ಪಟ್ಟಿಯನ್ನು ಹಿಡಿದುಕೊಂಡು ಯಡಿಯೂರಪ್ಪ, ಕೆ.ಎಸ್‌.ಈಶ್ವರಪ್ಪ, ಜಗದೀಶ ಶೆಟ್ಟರ್‌, ಡಿ.ವಿ.ಸದಾನಂದ ಗೌಡ, ಪ್ರಹ್ಲಾದ ಜೋಷಿ ದೆಹಲಿಗೆ ತೆರಳಿದ್ದು, ಪಕ್ಷದ ವರಿಷ್ಠರ ಜತೆಗೆ ಸಮಾಲೋಚನೆ ನಡೆಸಲಿದ್ದಾರೆ. ಪಕ್ಷದ ಚುನಾವಣಾ ಸಮಿತಿಯ ಸಭೆ ಸೋಮವಾರ ನಡೆಯಲಿದ್ದು, ಸಂಜೆ ವೇಳೆಗೆ ಅಭ್ಯರ್ಥಿಗಳ ಪಟ್ಟಿ ಪ್ರಕಟಗೊಳ್ಳಲಿದೆ. ಒಂದೇ ಕಂತಿನಲ್ಲಿ ಎಲ್ಲ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಘೋಷಣೆಯಾಗುವ ಸಾಧ್ಯತೆ ಇದೆ.

2014ರ ಚುನಾವಣೆಯಲ್ಲಿ ಪಕ್ಷ 17 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಬಳ್ಳಾರಿ ಉಪಚುನಾವಣೆಯಲ್ಲಿ ಪಕ್ಷ ಸೋತಿತ್ತು. ನವೆಂಬರ್‌ನಲ್ಲಿ ಕೇಂದ್ರ ಸಚಿವ ಅನಂತಕುಮಾರ್‌ ನಿಧನರಾಗಿದ್ದರು. ಇದರಿಂದಾಗಿ ಸಂಸದರ ಸಂಖ್ಯೆ 15ಕ್ಕೆ ಇಳಿದಿತ್ತು. ಹಾಲಿ ಎಲ್ಲ ಸಂಸದರಿಗೆ ಟಿಕೆಟ್‌ ನೀಡಲಾಗುತ್ತದೆ ಎಂದು ಯಡಿಯೂರಪ್ಪ ಘೋಷಿಸಿದ್ದರು. ಇದರಿಂದಾಗಿ, ಟಿಕೆಟ್‌ ಕೈತಪ್ಪುವ ಆತಂಕದಲ್ಲಿದ್ದ ಸಂಸದರ ಮೊಗದಲ್ಲಿ ಮಂದಹಾಸ ಮೂಡಿತ್ತು. ಆದರೆ, ಅಂತಿಮ ಚಿತ್ರಣ ಬದಲಾಗುವ ಸಾಧ್ಯತೆ ದಟ್ಟವಾಗಿದೆ.

ಉಡುಪಿ–ಚಿಕ್ಕಮಗಳೂರಿಗೆ ಶೋಭಾ ಕರಂದ್ಲಾಜೆ ಜತೆಗೆ ಕೆ.ಜಯಪ್ರಕಾಶ ಹೆಗ್ಡೆ ಹಾಗೂ ಯಶ‍ಪಾಲ ಸುವರ್ಣ ಹೆಸರನ್ನೂ ಶಿಫಾರಸು ಮಾಡಲಾಗಿದೆ. ಈ ಮೂಲಕ ಜಯಪ್ರಕಾಶ ಹೆಗ್ಡೆ ಅವರನ್ನು ಸಮಾಧಾನಪಡಿಸುವ ಯತ್ನ ಮಾಡಲಾಗಿದೆ ಎನ್ನಲಾಗುತ್ತಿದೆ.

ಅನಂತ ಕುಮಾರ ಹೆಗಡೆ ಹೆಸರಿನ ಜತೆಗೆ ಉತ್ತರ ಕನ್ನಡ ಜಿಲ್ಲಾ ವೈದ್ಯಕೀಯ ಪ್ರಕೋಷ್ಠದ ಮುಖ್ಯಸ್ಥ ಜಿ.ಜಿ.ಹೆಗಡೆ ಹೆಸರನ್ನು ಕಳುಹಿಸಲಾಗಿದೆ. ಐದು ಬಾರಿ ಸಂಸದರಾಗಿರುವ ಅನಂತಕುಮಾರ ಹೆಗಡೆ ಅವರು ‘ಸಂವಿಧಾನ ಬದಲಾಗಬೇಕು’ ಎಂದು ನೀಡಿದ್ದ ಹೇಳಿಕೆ, ಇಡೀ ರಾಜ್ಯದಲ್ಲಿ ಪಕ್ಷಕ್ಕೆ ಸಾಕಷ್ಟು ಹಾನಿಯುಂಟುಮಾಡಿದೆ. ಹೀಗಾಗಿ ಅವರಿಗೆ ಈ ಬಾರಿ ಚುನಾವಣೆಯಲ್ಲಿ ಟಿಕೆಟ್ ನೀಡಬಾರದು ಎಂದು ಕಾರ್ಯಕರ್ತರು ರಾಜ್ಯ ವರಿಷ್ಠರ ಎದುರು ಬಲವಾದ ಆಗ್ರಹ ಮಾಡಿದ್ದಾರೆ.

ಈ ಕಾರಣಕ್ಕೆ ಕುಮಟಾದ ಡಾ.ಜಿ.ಜಿ.ಹೆಗಡೆ ಹೆಸರನ್ನು ಪರಿಗಣಿಸಿರುವ ಪಕ್ಷದ ರಾಜ್ಯ ಪ್ರಮುಖರು, ಎರಡೂ ಹೆಸರು ಕೇಂದ್ರಕ್ಕೆ ಕಳುಹಿಸಿದ್ದಾರೆ ಎನ್ನಲಾಗಿದೆ. ಬಳ್ಳಾರಿಯಲ್ಲಿ ರಮೇಶ ಜಾರಕಿಹೊಳಿ ಸಂಬಂಧಿಯೂ ಆದ ಜಿಲ್ಲಾ ಪಂಚಾಯಿತಿಯ ಮಾಜಿ ಸದಸ್ಯ ದೇವೇಂದ್ರಪ್ಪ ಅವರಿಗೆ ಟಿಕೆಟ್‌ ನೀಡಲು ರಾಜ್ಯ ಘಟಕ ಒಲವು ಹೊಂದಿದೆ. ಒಂದು ವೇಳೆ, ಬಳ್ಳಾರಿ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್‌ ಶಾಸಕ ಬಿ.ನಾಗೇಂದ್ರ ಸಹೋದರ ವೆಂಕಟೇಶ ಪ್ರಸಾದ್‌ ಪಕ್ಷಕ್ಕೆ ಸೇರ್ಪಡೆಯಾದರೆ ಅವರು ಕಣಕ್ಕೆ ಇಳಿಯಬಹುದು ಎಂದು ಗೊತ್ತಾಗಿದೆ.

‘ಮಿತ್ರ’ರ ಮಧ್ಯೆ ಹುಳಿ

ಕ್ಷೇತ್ರ ಹಂಚಿಕೆ, ಬೆಂಬಲ ನೀಡುವ ವಿಚಾರದಲ್ಲಿ ಜೆಡಿಎಸ್‌–ಕಾಂಗ್ರೆಸ್ ನಾಯಕರ ಮಧ್ಯದ ಮುನಿಸು ಭುಗಿಲೆದ್ದಿದ್ದು, ಮಿತ್ರರ ವಿಶ್ವಾಸಕ್ಕೆ ಹುಳಿ ಹಿಂಡಿದಂತಾಗಿದೆ.

ತಮ್ಮ ಗಮನಕ್ಕೂ ತರದೇ ತುಮಕೂರು ಕ್ಷೇತ್ರವನ್ನು ಜೆಡಿಎಸ್‌ಗೆ ನೀಡಿರುವುದಕ್ಕೆ ಉಪಮುಖ್ಯಮಂತ್ರಿ ಜಿ.ಪರಮೇಶ್ವರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮೈಸೂರು ಉಳಿಸಿಕೊಂಡು ತುಮಕೂರು ಬಿಟ್ಟುಕೊಡಲು ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಒಪ್ಪಿದರು ಎಂಬುದು ಪರಮೇಶ್ವರ ಆಕ್ರೋಶಕ್ಕೆ ಕಾರಣ ಎನ್ನಲಾಗಿದೆ.

ಪರಮೇಶ್ವರ ಅವರನ್ನು ಭಾನುವಾರ ಭೇಟಿಯಾದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್‌ ಈ ಕುರಿತು ಒಂದು ಗಂಟೆಗೂ ಹೆಚ್ಚು ಕಾಲ ಚರ್ಚಿಸಿದರು. ‘ಕ್ಷೇತ್ರ ಕೈಬಿಟ್ಟು ಹೋದ ಬಗ್ಗೆ ನಮಗೆಲ್ಲರಿಗೂ ಬೇಸರ ಇದೆ. ವರಿಷ್ಠರ ಜತೆ ಚರ್ಚಿಸಿ, ಕ್ಷೇತ್ರ ಉಳಿಸಿಕೊಳ್ಳಲು ಯತ್ನಿಸೋಣ’ ಎಂದು ದಿನೇಶ್ ಈ ಸಂದರ್ಭದಲ್ಲಿ ತಿಳಿಸಿದರು ಎಂದು ಗೊತ್ತಾಗಿದೆ.

ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ದಿನೇಶ್, ‘ನಾವೆಲ್ಲ ಮುದ್ದ ಹನುಮೇಗೌಡರ ಪರ ಇದ್ದೇವೆ. ಅವರಿಗೆ ಆಗಿರುವ ಅನ್ಯಾಯ ಸರಿಪಡಿಸಿರುವ ನಿಟ್ಟಿನಲ್ಲಿ ದೇವೇಗೌಡರ ಜತೆಯೂ ಮಾತನಾಡಿದ್ದೇನೆ. ಕೇಂದ್ರ ಚುನಾವಣಾ ಸಮಿತಿ ಸಭೆ ಮುಗಿದ ಬಳಿಕ ಎಲ್ಲವೂ ಸ್ಪಷ್ಟವಾಗಲಿದೆ’ ಎಂದರು.

ಮಹೇಶ್ ಹೇಳಿಕೆಗೆ ಕೋಪ

‘ಮಂಡ್ಯ, ಹಾಸನದಲ್ಲಿ ಬೆಂಬಲ ಕೊಟ್ಟರೆ ಮಾತ್ರ ಮೈಸೂರಿನಲ್ಲಿ ಬೆಂಬಲಿಸುತ್ತೇವೆ’ ಎಂದು ಜೆಡಿಎಸ್‌ನ ಸಾ.ರಾ.ಮಹೇಶ್ ನೀಡಿದ ಹೇಳಿಕೆಗೆ ಸಿದ್ದರಾಮಯ್ಯ ತಿರುಗೇಟು ಕೊಟ್ಟಿದ್ದಾರೆ.

‘ಮೈತ್ರಿ ಮಾಡಿಕೊಂಡು ಸರ್ಕಾರ ನಡೆಸುತ್ತಿದ್ದೇವೆ. ಅಂತಹ ಹೊತ್ತಿನಲ್ಲಿ ಈ ರೀತಿಯ ಹೇಳಿಕೆ ನೀಡುವುದು ಸರಿಯಲ್ಲ’ ಎಂದು ಮೈಸೂರಿನಲ್ಲಿ ಹೇಳಿದ್ದಾರೆ.

ಮಂಡ್ಯ ಕ್ಷೇತ್ರಕ್ಕೂ ಅಭ್ಯರ್ಥಿ ಹೆಸರು

ಮಂಡ್ಯ ಕ್ಷೇತ್ರಕ್ಕೂ ಸಂಭವನೀಯ ಅಭ್ಯರ್ಥಿಗಳ ಹೆಸರನ್ನು ಪ್ರಮುಖರ ಸಮಿತಿ ಶಿಫಾರಸು ಮಾಡಿದೆ.

‘ಸುಮಲತಾ ಅವರನ್ನು ನಂಬಿ ಅಭ್ಯರ್ಥಿಯನ್ನು ಕಣಕ್ಕೆ ಇಳಿಸದೇ ಇರುವುದು ಸರಿಯಲ್ಲ. ನಮ್ಮ ಅಭ್ಯರ್ಥಿಯನ್ನು ಕಣಕ್ಕೆ ಇಳಿಸೋಣ. ಅವರು ಕಣದಲ್ಲಿ ಉಳಿದರೆ ಕೊನೆಯ ಕ್ಷಣದಲ್ಲಿ ನಮ್ಮ ಅಭ್ಯರ್ಥಿಯ ನಾಮಪತ್ರ ವಾಪಸು ‍ಪಡೆಯೋಣ. ರಾಮನಗರದ ಸ್ಥಿತಿಯನ್ನು ತಂದುಕೊಳ್ಳುವುದು ಬೇಡ’ ಎಂದು ಕೆಲವು ನಾಯಕರು ಸಭೆಯಲ್ಲಿ ಸೂಚ್ಯವಾಗಿ ತಿಳಿಸಿದರು.

ಸುಮಲತಾ ಅವರಿಗೆ ಬೆಂಬಲ ನೀಡುವ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಯಿತು. ವರಿಷ್ಠರ ಸಲಹೆ ಪಡೆದು ಮುಂದಿನ ಹೆಜ್ಜೆಯಿಡಲು ತೀರ್ಮಾನಿಸಲಾಯಿತು ಎಂದು ಮೂಲಗಳು ಹೇಳಿವೆ.

* ರಾಜ್ಯದ ನಾಯಕರು ಅಮಿತ್ ಶಾ ಅವರನ್ನು ಭೇಟಿಯಾಗಿ ಸಮಾಲೋಚನೆ ನಡೆಸಲಿದ್ದಾರೆ. ಸೋಮವಾರ ಸಂಜೆಯೊಳಗೆ ಪಟ್ಟಿ ಹೊರಬೀಳುವ ಸಾಧ್ಯತೆ ಇದೆ

-ಅರವಿಂದ ಲಿಂಬಾವಳಿ, ಪ್ರಧಾನ ಕಾರ್ಯದರ್ಶಿ, ಬಿಜೆಪಿ ರಾಜ್ಯ ಘಟಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.