ಬೆಂಗಳೂರು: ಒಳಮೀಸಲಾತಿ ಜಾರಿಗಾಗಿ ಇದೇ 5 ರಿಂದ ಆರಂಭವಾಗುವ ಪರಿಶಿಷ್ಟ ಜಾತಿಗಳ ಸಮೀಕ್ಷೆಗೆ ಸಂಬಂಧಿಸಿದಂತೆ ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ ಮತ್ತು ಕೇಂದ್ರದ ಮಾಜಿ ಸಚಿವ ಎ.ನಾರಾಯಣಸ್ವಾಮಿ ನೇತೃತ್ವದ ನಿಯೋಗವು ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ್ ಅವರನ್ನು ಶುಕ್ರವಾರ ಭೇಟಿ ಮಾಡಿ ಚರ್ಚೆ ನಡೆಸಿತು.
ಈ ಸಂದರ್ಭದಲ್ಲಿ ನಿಯೋಗವು ಕೆಲವು ಸಂದೇಹಗಳಿಗೆ ಸ್ಪಷ್ಟೀಕರಣವನ್ನು ಬಯಸಿತು ಮತ್ತು ಕೆಲವು ಸಲಹೆಗಳನ್ನೂ ನೀಡಿತು ಎಂದು ಬಿಜೆಪಿ ಪ್ರಕಟಣೆ ತಿಳಿಸಿದೆ.
‘ನನಗೆ ಜಾತಿ ಗೊತ್ತಿಲ್ಲ’ ಎಂಬ ಕಲಂ ಹಾಕಿರುವ ಉದ್ದೇಶವೇನು? ಜಾತಿ ಗುರುತಿಸಿಕೊಳ್ಳಲು ಬಯಸದ ಜನರ ಸಂಖ್ಯೆ ಲಕ್ಷಗಟ್ಟಲೆ ಆದಾಗ ಏನು ಮಾಡುತ್ತೀರಿ ಎಂದು ಬಿಜೆಪಿ ನಿಯೋಗ ಪ್ರಶ್ನಿಸಿದಾಗ, ‘ಜಾತಿ ಗುರುತಿಸಿಕೊಳ್ಳಲು ಬಯಸದವರೂ ಇದ್ದಾರೆ. ಅದಕ್ಕಾಗಿ ಈ ಕಲಂ ಸೇರಿಸಲಾಗಿದೆ. ಒಂದು ವೇಳೆ ಜಾತಿ ಗುರುತಿಕೊಳ್ಳದೇ ಇದ್ದರೆ ಅವರಿಗೆ ಮಿಸಲಾತಿ ಸೌಲಭ್ಯ ಸಿಗುವುದಿಲ್ಲ’ ಎಂದು ನಾಗಮೋಹನದಾಸ್ ಸ್ಪಷ್ಟಪಡಿಸಿದರು.
‘ಪರಿಶಿಷ್ಟ ಜಾತಿಯ 101 ಜಾತಿಗಳ ಪಟ್ಟಿಯಲ್ಲಿ ಇಲ್ಲದ ಎಷ್ಟೊ ಸಣ್ಣ ಪುಟ್ಟ ಜಾತಿಗಳಿವೆ. ಅವುಗಳಲ್ಲಿ ಕೆಲವರು ಆದಿ ಕರ್ನಾಟಕ ಅಥವಾ ಆದಿ ದ್ರಾವಿಡ ಎಂದು ಬರೆಸುತ್ತಾರೆ, ಜಾತಿ ಹೆಸರು ಬರೆಸುವುದಿಲ್ಲ. ಕರಾವಳಿ ಭಾಗದಲ್ಲಿ ‘ಮನ್ಸ’ ಎಂಬ ಜಾತಿಯವರು ಇದ್ದಾರೆ. ಅವರು ತಮ್ಮನ್ನು ಆದಿ ದ್ರಾವಿಡ ಎಂದು ಬರೆಸುತ್ತಾರೆ. ಆದರೆ, ‘ಮನ್ಸ’ ಜಾತಿ 101 ಜಾತಿಗಳ ಪಟ್ಟಿಯಲ್ಲಿ ಇಲ್ಲ. ಇಂತಹ ವರ್ಗವನ್ನು ಎಲ್ಲಿಗೆ ಸೇರಿಸುತ್ತೀರಿ’ ಎಂದು ಪ್ರಶ್ನಿಸಿದಾಗ ‘ಇಂತಹವರನ್ನು ‘ಜಾತಿ ಇಲ್ಲದ ವರ್ಗ’ ವಿಭಾಗಕ್ಕೆ ಸೇರಿಸಲಾಗುತ್ತದೆ’ ಎಂದು ನಾಗಮೋಹನದಾಸ್ ವಿವರಿಸಿದರು.
ಮತಾಂತರಗೊಂಡ ದಲಿತರ ಜಾತಿ ಗುರುತಿಸುವಿಕೆ, ಬೆಂಗಳೂರಿನಲ್ಲಿ ನೆಲಸಿರುವ ಅನ್ಯ ಭಾಷಿಕ ದಲಿತರ ಗುರುತಿಸುವಿಕೆ, ಕೊಳೆಗೇರಿಗಳಲ್ಲಿ, ಅಲೆಮಾರಿಗಳ ಗುರುತಿಸುವಿಕೆಯ ಬಗ್ಗೆಯೂ ನಿಯೋಗ ಚರ್ಚಿಸಿತು. ‘ನನಗೆ ಜಾತಿ ಗೊತ್ತಿಲ್ಲ’ ಎಂಬ ಕಲಂ ತೆಗೆದುಬಿಡಬೇಕು ಎಂಬ ಮನವಿ ಪತ್ರವನ್ನೂ ಸಲ್ಲಿಸಲಾಯಿತು.
ನಿಯೋಗದಲ್ಲಿ ಬಿಜೆಪಿ ವಕ್ತಾರ ವೆಂಕಟೇಶ್ ದೊಡ್ಡೇರಿ, ಸಾಮಾಜಿಕ ಕಾರ್ಯಕರ್ತ ವಾದಿರಾಜ್, ಎಂಆರ್‌ಪಿಎಸ್‌ನ ಪ್ರಧಾನ ಕಾರ್ಯದರ್ಶಿ ದೇವರಾಜ್, ಬಾಬು, ಸತ್ಯೇಂದ್ರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.