ADVERTISEMENT

ಡಿಕೆ, ಬೈರತಿ, ಯತೀಂದ್ರರಿಂದ ಹಣ ಸಂಗ್ರಹ: ಎನ್‌.ರವಿಕುಮಾರ್

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2023, 15:38 IST
Last Updated 18 ಅಕ್ಟೋಬರ್ 2023, 15:38 IST
ಎನ್. ರವಿಕುಮಾರ್
ಎನ್. ರವಿಕುಮಾರ್   

ಬೆಂಗಳೂರು: ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಸಚಿವರಾದ ಶಿವಾನಂದ ಪಾಟೀಲ ಮತ್ತು ಬೈರತಿ ಸುರೇಶ್‌ ಮತ್ತು ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ ಅವರು ಹಣ ಸಂಗ್ರಹಿಸುವುದರಲ್ಲಿ ನಿರತರಾಗಿದ್ದಾರೆ. ಡಿ.ಕೆ.ಶಿವಕುಮಾರ್‌ ನೇತೃತ್ವದಲ್ಲಿ ಹಣ ಸಂಗ್ರಹ ನಡೆಯುತ್ತಿದ್ದು, ಈ ಕುರಿತು ಸಿಬಿಐ ಮತ್ತು ಇಡಿ ತನಿಖೆ ನಡೆಸಬೇಕು ಎಂದು ಬಿಜೆಪಿ ರಾಜ್ಯ ಘಟಕದ ಪ್ರಧಾನಕಾರ್ಯದರ್ಶಿ ಎನ್‌.ರವಿಕುಮಾರ್ ಒತ್ತಾಯಿಸಿದ್ದಾರೆ.

ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ರಾಜ್ಯದಲ್ಲಿ ನಡೆದ ಐಟಿ ದಾಳಿ ಸಂದರ್ಭದಲ್ಲಿ ₹94 ಕೋಟಿ ನಗದು ಮತ್ತು ₹8 ಕೋಟಿ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ. ಸುಮಾರು ₹1,000 ಕೋಟಿ ಸಂಗ್ರಹಿಸಲು ಮುಂದಾಗಿರುವ ಮಾಹಿತಿ ಇದೆ. ಆದ್ದರಿಂದ ಸಿಬಿಐ ಮತ್ತು ಇಡಿ ತನಿಖೆ ಅಗತ್ಯ ಎಂದು ಹೇಳಿದರು.

ಅಬಕಾರಿ, ಕೈಗಾರಿಕಾ ವಲಯಗಳಿಂದ ಹಣ ಸಂಗ್ರಹಿಸಲಾಗುತ್ತಿದೆ. ಎಲ್ಲ ಪೊಲೀಸ್‌ ಠಾಣೆಗಳಿಗೆ ಕಲೆಕ್ಷನ್‌ ಗುರಿ ಕೊಟ್ಟಿದ್ದಾರೆ. ಐಎಎಸ್‌, ಐಪಿಎಸ್‌, ಕೆಎಎಸ್‌ ಸೇರಿ ಎಲ್ಲ ರೀತಿಯ ಅಧಿಕಾರಿಗಳಿಂದಲೂ ವರ್ಗಾವಣೆ ವೇಳೆ ಹಣ ಪಡೆದಿದ್ದಾರೆ. ಐಎಎಸ್‌, ಐಪಿಎಸ್‌, ಐಎಫ್‌ಎಸ್‌ ಅಧಿಕಾರಿಗಳ ವರ್ಗಾವಣೆಗೆ ಕನಿಷ್ಠ ₹1ಕೋಟಿಯಿಂದ ₹3 ಕೋಟಿವರೆಗೆ ಲಂಚ ಪಡೆಯುತ್ತಿದ್ದಾರೆ ಎಂದು ಅವರು ಆರೋಪಿಸಿದರು.

ADVERTISEMENT

ನೀರಾವರಿ, ಲೋಕೋಪಯೋಗಿ ಇಲಾಖೆಗಳ ಗುತ್ತಿಗೆದಾರರಿಂದ ಭಾರೀ ಪ್ರಮಾಣದಲ್ಲಿ ಹಣ ಸಂಗ್ರಹಿಸಿದ್ದಾರೆ. ಈ ರೀತಿ ಸಂಗ್ರಹಿಸಿದ ಹಣವನ್ನು ಚುನಾವಣೆ ನಡೆಯುವ ಪಂಚ ರಾಜ್ಯಗಳಿಗೆ ಕಳುಹಿಸಿ ಕೊಡುತ್ತಿದ್ದಾರೆ. ಅದರಲ್ಲಿ ಎಷ್ಟು ಮೊತ್ತ ಕಳುಹಿಸುತ್ತಾರೆ. ಎಷ್ಟು ಜೇಬಿಗೆ ಇಳಿಸುತ್ತಾರೆ ಎಂಬುದರ ತನಿಖೆಯೂ ಆಗಬೇಕು ಎಂದು ರವಿಕುಮಾರ್ ಒತ್ತಾಯಿಸಿದರು.

‘ಪಂಚ ರಾಜ್ಯಗಳಿಗೆ ಹಣದ ಭಾಗ್ಯ’
ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ನೇತೃತ್ವದ ಸರ್ಕಾರ ತಮಿಳುನಾಡಿಗೆ ನೀರಿನ ಭಾಗ್ಯ ಪಂಚರಾಜ್ಯಗಳಿಗೆ ಹಣದ ಭಾಗ್ಯ ಮತ್ತು ಕರ್ನಾಟಕದ ಜನರಿಗೆ ಕತ್ತಲ ಭಾಗ್ಯ ನೀಡಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್‌ ಕಟೀಲ್ ವ್ಯಂಗ್ಯವಾಡಿದ್ದಾರೆ. ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಮಧ್ಯೆ ಅಧಿಕಾರದ ಕಾದಾಟದ ಪರಿಣಾಮ ಸಿದ್ದರಾಮಯ್ಯ ಅವರನ್ನು ಮನೆಗೆ ಕಳಿಸಲು ಶಿವಕುಮಾರ್‌ ಡಿ.ಕೆ.ಶಿವಕುಮಾರ್ ಅವರನ್ನು ಜೈಲಿಗೆ ಕಳಿಸಲು ಸಿದ್ದರಾಮಯ್ಯ ಪ್ರಯತ್ನ ನಡೆಸಿದ್ದಾರೆ. ಈ ಕಾದಾಟದಲ್ಲಿ ಕರ್ನಾಟಕ ಬಡವಾಗಿದೆ ಎಂದು ಹೇಳಿದರು.
ಕಪ್ಪು ಹಣದ ಖಜಾನೆ ಮೇಲೆ ದಾಳಿ: ವಿಜಯೇಂದ್ರ
‘ಕಪ್ಪು ಹಣದ ಖಜಾನೆ ಇರುವಲ್ಲಿ ದಾಳಿ ನಡೆಸದೇ ಬಡವರ ಮನೆ ಶೋಧಿಸಲಾದೀತೇ’ ಎಂದು ಬಿಜೆಪಿ ಶಾಸಕ ಹಾಗೂ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಪ್ರಶ್ನಿಸಿದ್ದಾರೆ. ಈ ಕುರಿತು ‘ಎಕ್ಸ್‌’ ಮಾಡಿರುವ ಅವರು ‘ಕಲಾವಿದರ ಸಂಭಾವನೆಯಿಂದಲೂ ಕಮಿಷನ್ ವಸೂಲಿ ದಂಧೆಗಿಳಿದಿರುವ ನಿಮ್ಮ ಸರ್ಕಾರದ ಆಡಳಿತದ ಹೀನಾಯ ಭ್ರಷ್ಟ ಮುಖ ಜನರ ಮುಂದೆ ತೆರೆದುಕೊಂಡಿದೆ’ ಎಂದು ಕಿಡಿಕಾರಿದ್ದಾರೆ. ‘ಸದ್ಯದ ಬೆಳವಣಿಗೆಗಳನ್ನು ಗಮನಿಸಿದರೆ ‘ಲಂಚ ಭಾಗ್ಯ’ ಯೋಜನೆ ನಿಮ್ಮ ಮುಂದಿನ ಹೆಜ್ಜೆ. ಪರ್ಸೆಂಟೇಜ್‌ ನಿಗದಿ ನಿಮ್ಮ ಮುಂದಿನ ಗುರಿ ಎಂಬುದು ಖಾತ್ರಿ ಆಗುತ್ತಿದೆ. ರಾಜ್ಯದಲ್ಲಿ ನಡೆದ ಆದಾಯ ತೆರಿಗೆ ಶೋಧ ಕಾರ್ಯವನ್ನು ಮುಖ್ಯಮಂತ್ರಿ ಸ್ಥಾನದಲ್ಲಿರುವ ನೀವು ಸ್ವಾಗತಿಸಬೇಕಿತ್ತು. ದಾಳಿಗೊಳದ ಉದ್ಯಮಿಗಳು ಗುತ್ತಿಗೆದಾರರ ವಕ್ತಾರರಂತೆ ಮಾತನಾಡುತ್ತಿದ್ದೀರಿ’ ಎಂದು ಸಿದ್ದರಾಮಯ್ಯ ಅವರನ್ನು ಉದ್ದೇಶಿಸಿ ಹೇಳಿದ್ದಾರೆ. ‘ಸರ್ಕಾರಿ ತನಿಖಾ ಸಂಸ್ಥೆಗಳ ನೈತಿಕ ಸ್ಥೈರ್ಯ ಕಸಿಯುವ ಹತಾಶೆ ನಿಮ್ಮ ಮಾತುಗಳಲ್ಲಿ ವ್ಯಕ್ತವಾಗುತ್ತಿದೆ. ಜೈಲು ಭಾಗ್ಯಕಂಡ ಹಾಗೂ ಕಾಣಬೇಕಿರುವ ಅನೇಕರು ನಿಮ್ಮ ಪಕ್ಷ ಹಾಗೂ ಸರ್ಕಾರದಲ್ಲಿರುವುದನ್ನು ಮರೆತು ಯಡಿಯೂರಪ್ಪ ಹೆಸರು ಉಲ್ಲೇಖಿಸುತ್ತಿದ್ದೀರಿ. ವ್ಯವಸ್ಥಿತ ರಾಜಕಿಯ ಚಕ್ರವ್ಯೂಹ ಭೇದಿಸಿ ನ್ಯಾಯಾಲಯದ ಹೋರಾಟದ ಮೂಲಕ ನ್ಯಾಯದ ಶ್ರೀರಕ್ಷೆ ಪಡೆದು ಮತ್ತೆ ಜನತಾ ನ್ಯಾಯಾಲಯದಲ್ಲಿ ಜನಾಶೀರ್ವಾದದಿಂದ ಮುಖ್ಯಮಂತ್ರಿ ಸ್ಥಾನ ಮುಡಿಗೇರಿಸಿಕೊಂಡ ಯಡಿಯೂರಪ್ಪ ಅವರ ಇತಿಹಾಸ ಮರೆತಂತೆ ಮಾತನಾಡುವುದು ನಿಮಗೆ ಘನತೆ ತರುವುದಿಲ್ಲ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.