ಬಿಜೆಪಿ ಧ್ವಜ
ಬೆಂಗಳೂರು: ‘ರಾಜ್ಯ ಸಾರಿಗೆ ಸಂಸ್ಥೆಗಳ ನೌಕರರ ಸಮಸ್ಯೆಗಳನ್ನು ಬಗೆಹರಿಸಿ, ಅವರ ಬೇಡಿಕೆಗಳನ್ನು ಈಡೇರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಕ್ಷಣವೇ ನೌಕರರ ಜತೆ ಮಾತುಕತೆ ನಡೆಸಬೇಕು’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಒತ್ತಾಯಿಸಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಸಾರಿಗೆ ನೌಕರರ ಮುಷ್ಕರದಿಂದಾಗಿ ಸಾರ್ವಜನಿಕರು ಮತ್ತು ಶಾಲಾ– ಕಾಲೇಜು ವಿದ್ಯಾರ್ಥಿಗಳಿಗೆ ತೊಂದರೆ ಆಗಿದೆ’ ಎಂದು ತಿಳಿಸಿದರು.
‘ಗ್ಯಾರಂಟಿ’ ಯೋಜನೆಯಿಂದಾಗಿ ಗ್ರಾಮೀಣ ಭಾಗದಲ್ಲಿ ಬಸ್‌ಗಳ ಸಂಖ್ಯೆಯನ್ನೂ ಕಡಿಮೆ ಮಾಡಿದ್ದಾರೆ. ಆರ್ಥಿಕ ಮುಗ್ಗಟ್ಟಿನಿಂದಾಗಿ ಸಾರಿಗೆ ಸಂಸ್ಥೆಗಳ ನೌಕರರಿಗೆ ವೇತನ ಕೊಡಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಸಾರಿಗೆ ಸಂಸ್ಥೆಗಳ ಆರ್ಥಿಕ ಸಮಸ್ಯೆ ಉಲ್ಬಣಿಸಿದ್ದು, ಇದರಿಂದಾಗಿ ನೌಕರರ ಬೇಡಿಕೆಗಳನ್ನು ಈಡೇರಿಸಲು ಸಾಧ್ಯವಾಗುತ್ತಿಲ್ಲ ಎಂದು ಅವರು ದೂರಿದರು.
ಶಾಸಕ ಡಾ.ಸಿ.ಎನ್.ಅಶ್ವತ್ಥನಾರಾಯಣ ಮಾತನಾಡಿ, ‘ಕಾಂಗ್ರೆಸ್ ಪಕ್ಷ ಕೊಟ್ಟ ಮಾತಿನಂತೆ ನಡೆದುಕೊಂಡಿಲ್ಲ. ಅಧಿಕಾರಕ್ಕೆ ಬಂದ ದಿನವೇ ಸಾರಿಗೆ ನೌಕರರ ಬಗ್ಗೆ ಆಡಿದ ಮಾತನ್ನು ಮರೆತಿದ್ದಾರೆ. ನೌಕರರ ಸಮಸ್ಯೆ ಪರಿಹರಿಸುವುದಾಗಿ ಸದನದಲ್ಲೂ ಮಾತುಕೊಟ್ಟಿದ್ದರು. ಆದರೆ ಈವರೆಗೆ ಏನೂ ಮಾಡಿಲ್ಲ’ ಎಂದು ಹೇಳಿದರು.
ನೌಕರರ ವೇತನ ಹಿಂಬಾಕಿಯನ್ನೂ ಕೊಡುತ್ತಿಲ್ಲ. ನಿವೃತ್ತರಿಗೆ ಗ್ರಾಚ್ಯುಯಿಟಿ ಮತ್ತಿತರ ಸೌಲಭ್ಯಗಳನ್ನು ಕೊಟ್ಟಿಲ್ಲ. ಖಜಾನೆ ತುಂಬಿ ತುಳುಕುತ್ತಿದೆ ಎಂದು ಹೇಳಿಕೊಳ್ಳುತ್ತಾರೆ. ಆದರೆ, ಸಾರಿಗೆ ನೌಕರರ ಸಮಸ್ಯೆಗೆ ಸ್ಪಂದಿಸಲು ಏಕೆ ಸಾಧ್ಯವಾಗುತ್ತಿಲ್ಲ ಎಂದು ಅವರು ಪ್ರಶ್ನಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.