ADVERTISEMENT

‘ಕಮಲ’ ಅರಳುವ ನಿರೀಕ್ಷೆಯತ್ತ ಬಿಜೆಪಿ

ರೆಸಾರ್ಟ್‌ನಲ್ಲಿ ಚಿಮ್ಮಿದ ಶಾಸಕರ ಉತ್ಸಾಹ

​ಪ್ರಜಾವಾಣಿ ವಾರ್ತೆ
Published 14 ಜುಲೈ 2019, 19:46 IST
Last Updated 14 ಜುಲೈ 2019, 19:46 IST
ಯಲಹಂಕ ಬಳಿಯ ರೆಸಾರ್ಟ್‌ನಲ್ಲಿ ನಡೆದ ಸಭೆಯಲ್ಲಿ ಶಾಸಕ ಬಸವರಾಜ ಬೊಮ್ಮಾಯಿ ಮಾತನಾಡಿದರು. ಕೆ.ಜಿ. ಬೋಪಯ್ಯ, ಜೆ.ಸಿ. ಮಾಧುಸ್ವಾಮಿ, ಬಿ.ಎಸ್‌. ಯಡಿಯೂರಪ್ಪ ಹಾಗೂ ಗೋವಿಂದ ಕಾರಜೋಳ ಇದ್ದರು
ಯಲಹಂಕ ಬಳಿಯ ರೆಸಾರ್ಟ್‌ನಲ್ಲಿ ನಡೆದ ಸಭೆಯಲ್ಲಿ ಶಾಸಕ ಬಸವರಾಜ ಬೊಮ್ಮಾಯಿ ಮಾತನಾಡಿದರು. ಕೆ.ಜಿ. ಬೋಪಯ್ಯ, ಜೆ.ಸಿ. ಮಾಧುಸ್ವಾಮಿ, ಬಿ.ಎಸ್‌. ಯಡಿಯೂರಪ್ಪ ಹಾಗೂ ಗೋವಿಂದ ಕಾರಜೋಳ ಇದ್ದರು   

ಬೆಂಗಳೂರು: ಕಾಂಗ್ರೆಸ್‌ನ ಎಂ.ಟಿ.ಬಿ. ನಾಗರಾಜ್ ಅವರು ಮುಂಬೈನಲ್ಲಿರುವ ಅತೃಪ್ತ ಶಾಸಕರ ಗುಂಪನ್ನು ಸೇರಿಕೊಂಡ ಬೆನ್ನಲ್ಲೇ, ರಾಜ್ಯದಲ್ಲಿ ‘ಕಮಲ’ ಅರಳುವ ಸಮಯ ಸನ್ನಿಹಿತ ಎಂಬ ಉತ್ಸಾಹ ಬಿಜೆಪಿ ನಾಯಕರಲ್ಲಿ ಮೂಡಿದೆ.

ವಸತಿ ಸಚಿವರೂ ಆಗಿರುವ ಹೊಸಕೋಟೆ ಕ್ಷೇತ್ರದ ಶಾಸಕ ನಾಗರಾಜ್ ಅವರನ್ನು ಮನವೊಲಿಸುವ ಯತ್ನ ಶನಿವಾರ ಇಡೀ ದಿನ ನಡೆದಿತ್ತು. ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ್ದ ನಾಗರಾಜ್‌, ರಾಜೀನಾಮೆ ವಾಪಸ್ ಪಡೆಯುವ ನಿರ್ಧಾರ ಪ್ರಕಟಿಸಿದ್ದರು. ಇದರಿಂದಾಗಿ ಆ ಕ್ಷಣ ಜಂಘಾಬಲ ಉಡುಗಿಹೋಗಿತ್ತು.

ಅರ್ಧಗಂಟೆಯಲ್ಲೇ ತಮ್ಮ ನಿಲುವು ಬದಲಿಸಿದ ನಾಗರಾಜ್‌, ಬಿಜೆಪಿಯತ್ತ ವಾಲಿದರು. ಇದರಿಂದಾಗಿ ಶನಿವಾರ ರಾತ್ರಿಯಿಂದಲೇ ಬಿಜೆಪಿಯಲ್ಲಿ ಸಡಗರದ ವಾತಾವರಣ ಮನೆ ಮಾಡಿತು ಎಂದು ಪಕ್ಷದ ಮೂಲಗಳು ತಿಳಿಸಿವೆ.

ADVERTISEMENT

ಇನ್ನು ತಡಮಾಡಿದರೆ ಕಷ್ಟ ಎಂದು ಗೊತ್ತಾಗಿದ್ದೇ ತಡ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಆಪ್ತ ಸಹಾಯಕ ಎನ್.ಆರ್. ಸಂತೋಷ್‌, ಶಾಸಕರಾದ ಆರ್. ಅಶೋಕ್‌, ಎಸ್.ಆರ್. ವಿಶ್ವನಾಥ್‌ ಹಾಗೂ ಸತೀಶ್‌ರೆಡ್ಡಿ ಕಾರ್ಯಾಚರಣೆ ನಡೆಸಿ, ನಾಗರಾಜ್ ಅವರನ್ನು ಮುಂಬೈಗೆ ವಿಮಾನ ಹತ್ತಿಸುವಲ್ಲಿ ಯಶಸ್ವಿಯಾದರು. ಅತೃಪ್ತ ಶಾಸಕರ ಗುಂಪು ಕಾಂಗ್ರೆಸ್‌ನತ್ತ ಒಲಿಯಬಹುದು ಎಂಬ ಆತಂಕಕ್ಕೆ ಈಡಾಗಿದ್ದ ಬಿಜೆಪಿ ಶಾಸಕರಲ್ಲಿ, ಅನುಮಾನ ಮರೆಯಾಗಿ ಸಂಭ್ರಮ ಮನೆ ಮಾಡಿತು. ಭಾನುವಾರ ಬೆಳಿಗ್ಗೆಯೇ ವಾಯುವಿಹಾರ ನಡೆಸಿದ ಶಾಸಕರು, ಕ್ರಿಕೆಟ್‌ ಆಡಿ ಕಾಲ ಕಳೆದರು.

ಯಲಹಂಕ ಸಮೀಪದ ರಮಡಾ ರೆಸಾರ್ಟ್‌ನಲ್ಲಿ ಮೊಕ್ಕಾಂ ಮಾಡಿರುವ ತಮ್ಮ‍ಪಕ್ಷದ ಶಾಸಕರನ್ನು ಎರಡು ಬಾರಿ ಭೇಟಿ ಮಾಡಿದ ಯಡಿಯೂರಪ್ಪ, ಧೈರ್ಯ ತುಂಬುವ ಯತ್ನ ಮಾಡಿದರು.

‘ನಮ್ಮ ಬೆಂಬಲಕ್ಕೆ ವರಿಷ್ಠರು ನಿಂತಿದ್ದಾರೆ. ಯಾರೊಬ್ಬರೂ ಆತಂಕ ಪಡುವುದು ಬೇಡ. ವಾರಾಂತ್ಯದಲ್ಲಿ ನಮ್ಮ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ. ಒಗ್ಗಟ್ಟು ಪ್ರದರ್ಶಿಸುವ ಮೂಲಕ ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ತರಲು ಮುಂದಾಗೋಣ’ ಎಂದು ಕರೆ ನೀಡಿದರು ಎಂದು ಪಕ್ಷದ ಮೂಲಗಳು ಹೇಳಿವೆ.

‘ಸರ್ಕಾರ ಉಳಿಸಿಕೊಳ್ಳಲು ಹೆಣಗುತ್ತಿರುವ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್‌ ನಾಯಕರು ನಮ್ಮ ಕೆಲವು ಶಾಸಕರಿಗೆ ಆಮಿಷ ಒಡ್ಡಬಹುದು. ಅಂತಹ ಆಮಿಷ, ಅವಕಾಶ ಅಲ್ಪ ಕಾಲ ಮಾತ್ರ ಉಳಿಯುತ್ತದೆ. ಕಾಂಗ್ರೆಸ್‌ ಮುಕ್ತ ಭಾರತದ ಕನಸು ಸದ್ಯವೇ ನನಸಾಗಲಿದೆ. ಈ ಸಮಯದಲ್ಲಿ ಯಾರೊಬ್ಬರೂ ತಪ್ಪು ಹಾದಿಯ ಹಿಡಿಯಬೇಡಿ. ಸರ್ಕಾರ ಅಸ್ತಿತ್ವಕ್ಕೆ ಬಂದಾಗ ಎಲ್ಲರಿಗೂ ಅಧಿಕಾರ ನೀಡುವುದು ಕಷ್ಟ. ಪಕ್ಷಕ್ಕಾಗಿ ತ್ಯಾಗ ಮಾಡಲು ಎಲ್ಲರೂ ಸಿದ್ಧರಾಗಿರಬೇಕು. ಇದು ವರಿಷ್ಠರ ಸೂಚನೆಯೂ
ಆಗಿದೆ ಎಂದು ಯಡಿಯೂರಪ್ಪ ಹೇಳಿದರು’ ಎಂದು ಮೂಲಗಳು ವಿವರಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.