ADVERTISEMENT

ಬಣ ಜಗಳ | ಕಮಲ ವಿದಳ: ಯತ್ನಾಳ ಬಣ, ವಿಜಯೇಂದ್ರ ಬಣ ನಡುವೆ ನಿರಂತರ ಕಿತ್ತಾಟ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2024, 23:24 IST
Last Updated 28 ನವೆಂಬರ್ 2024, 23:24 IST
ಬಿ.ವೈ ವಿಜಯೇಂದ್ರ, ಬಸನಗೌಡ ಪಾಟೀಲ್‌ ಯತ್ನಾಳ
ಬಿ.ವೈ ವಿಜಯೇಂದ್ರ, ಬಸನಗೌಡ ಪಾಟೀಲ್‌ ಯತ್ನಾಳ    

ಬೆಂಗಳೂರು: ಬಿಜೆಪಿಯೊಳಗಿನ ಬಣ ಕಿತ್ತಾಟ ಸ್ಫೋಟಕ ಸ್ಥಿತಿಯತ್ತ ಸಾಗುತ್ತಿದ್ದು, ಪ್ರತಿಷ್ಠೆಗೆ ಬಿದ್ದಿರುವ ಬಣಗಳು ಪಕ್ಷದ ಮೇಲಿನ ಹಿಡಿತಕ್ಕೆ ಅಂತರ್ಯುದ್ಧವನ್ನು ತೀವ್ರಗೊಳಿಸಿವೆ.

ವಕ್ಫ್‌ ವಿರುದ್ಧ ಹೋರಾಟವನ್ನು ಮುಂದುವರಿಸಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಳ ಬಣ ವಿಜಯೇಂದ್ರ ಪದಚ್ಯುತಿಯಾಗಲೇಬೇಕು ಎಂಬ ಹೊಸ ವಾದ ಮುಂದಿಟ್ಟಿದೆ. ಬಿ.ವೈ. ವಿಜಯೇಂದ್ರ ಬೆಂಬಲಕ್ಕೆ ನಿಂತಿರುವ ಮಾಜಿ ಸಚಿವರಾದ ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಎಂ.ಪಿ. ರೇಣುಕಾಚಾರ್ಯ ಮತ್ತಿತರರ ನೇತೃತ್ವದ ಬಣ, ಯತ್ನಾಳ ವಿರುದ್ಧ ಶಿಸ್ತುಕ್ರಮ ಜರುಗಿಸಲೇಬೇಕು ಎಂಬ ಪಟ್ಟನ್ನು ಮತ್ತಷ್ಟು ಬಿಗಿಗೊಳಿಸಿದೆ.

ಏತನ್ಮಧ್ಯೆ, ದೆಹಲಿಗೆ ಬರುವಂತೆ ಪಕ್ಷದ ವರಿಷ್ಠರು ನೀಡಿದ ಸೂಚನೆ ತಿರಿಸ್ಕರಿಸಿರುವ ಯತ್ನಾಳ, ‘ಹೋರಾಟ ಕೈಬಿಟ್ಟು ದೆಹಲಿಗೆ ತೆರಳುವುದಿಲ್ಲ. ಬೆದರಿಸಬಹುದು ಎಂದು ತಿಳಿದುಕೊಂಡಿದ್ದರೆ ನಾನು ಯಾವುದಕ್ಕೂ ಬೆದರುವುದಿಲ್ಲ, ಕ್ಷಮಾಪಣೆ ಕೇಳುವುದಿಲ್ಲ, ನಾನು ಇದುವರೆಗೆ ಮಾತನಾಡಿರುವ ಒಂದೇ ಒಂದು ಪದವನ್ನೂ ವಾಪಸ್‌ ತೆಗೆದುಕೊಳ್ಳುವುದಿಲ್ಲ’ ಎಂದು ಸಡ್ಡು ಹೊಡೆದಿದ್ದಾರೆ.

ADVERTISEMENT

ಯತ್ನಾಳ ತಂಡದ ವಿರುದ್ಧ ಕ್ರಮ ಜರುಗಿಸುವಂತೆ ಆಗ್ರಹಿಸಿ, ಕೋಲಾರ ಜಿಲ್ಲೆಯ ಕುರುಡುಮಲೆ ಗಣಪತಿ ದೇವಸ್ಥಾನದಿಂದ ಶುಕ್ರವಾರ ಪ್ರವಾಸ ಹೊರಟಿರುವ ವಿಜಯೇಂದ್ರ ಬಣ, ಹೋರಾಟದತ್ತ ಹೆಜ್ಜೆ ಇಟ್ಟಿದೆ. ವಿವಿಧ ಜಿಲ್ಲೆಗಳಿಗೆ ಭೇಟಿ ನೀಡಲಿರುವ ಈ ಬಣ, ದಾವಣಗೆರೆಯಲ್ಲಿ ಬೃಹತ್ ಸಮಾವೇಶ ನಡೆಸಲು ತಯಾರಿ ನಡೆಸಿದೆ.  ‘50 ಮಾಜಿ ಶಾಸಕರು ತಮ್ಮ ಬಣದಲ್ಲಿದ್ದಾರೆ’ ಎಂದು ವಿಜಯೇಂದ್ರ ಬಣದ ಎಂ.ಪಿ. ರೇಣುಕಾಚಾರ್ಯ ಹೇಳಿದ್ದಾರೆ.

ತಮಟೆ ಬಾರಿಸಿ ನಾಯಕರಾಗಲು ಅಸಾಧ್ಯ: ಡಿವಿಎಸ್‌

‘ಬೀದಿಯಲ್ಲಿ ತಮಟೆ ಬಾರಿಸಿದ ಮಾತ್ರಕ್ಕೆ ಯಾರೂ ನಾಯಕರಾಗಲು ಸಾಧ್ಯವಿಲ್ಲ. ಬೀದಿಯಲ್ಲಿ ಮಾತ ನಾಡುವವರು ನಮ್ಮ ಪಕ್ಷದಲ್ಲಿ ಇರಲು ಯೋಗ್ಯರಲ್ಲ. ಅಂಥವರು ಎರೆಹುಳು–ನಾಗರಹಾವುಗಳಿದ್ದಂತೆ’ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಟೀಕಿಸಿದರು.

ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಇಂತಹ ಬೆಳವಣಿಗೆಗಳನ್ನು ಸಹಿಸಿಕೊಂಡು ಇರುವ ಬದಲು, ಒಬ್ಬಿಬ್ಬರ ವಿರುದ್ಧ ಕ್ರಮಕೈಗೊಂಡರೆ ಉಳಿದವರೂ ಸರಿದಾರಿಗೆ ಬರುತ್ತಾರೆ. ಕ್ರಮ ಕೈಗೊಳ್ಳದೇ ಇರುವ ಕಾರಣ ಪಕ್ಷಕ್ಕೆ ಇಂತಹ ಪರಿಸ್ಥಿತಿ ಬಂದಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬಿಜೆಪಿಯ ಶಾಸಕರು, ನಾಯಕರು ಪ್ರತ್ಯೇಕ ಸಭೆ ನಡೆಸುವ, ಬೀದಿಗೆ ಇಳಿಯುವ ಬದಲು ದೆಹಲಿ ವಿಮಾನ ಏರಿದ್ದರೆ ಸಮಸ್ಯೆ ಬಗೆಹರಿಯುತ್ತಿತ್ತು. ಹೀಗೆ ಬೀದಿಯಲ್ಲಿ ಕಿತ್ತಾಡಿಕೊಂಡರೆ ಪಕ್ಷದ ನಿಷ್ಠರೆನಿಸಿಕೊಳ್ಳಲು ಹೇಗೆ ಸಾಧ್ಯ? ಪಕ್ಷದ ಪ್ರಸ್ತುತ ಸ್ಥಿತಿ ಕೈಮೀರಿದೆ. ಬೀದಿಗೆ ಇಳಿದವರ ಜತೆ ಹಿರಿಯರು ಮಾತನಾಡಿ ಏನು ಪ್ರಯೋಜನ ಎಂದು ಪ್ರಶ್ನಿಸಿದರು.

‘ಕಳೆದ ಒಂದೂವರೆ ವರ್ಷದಿಂದ ಪ್ರಬಲ ವಿರೋಧ ಪಕ್ಷವಾಗುವಲ್ಲಿ ಬಿಜೆಪಿ ಸೋತಿದೆ. ಏನೇ ಆಗಲಿ ಶಸ್ತ್ರತ್ಯಾಗ ಮಾಡಲಾರೆ, ಪಕ್ಷದ ಶುದ್ಧೀಕರಣಕ್ಕಾಗಿ ಪ್ರಯತ್ನಿಸುವೆ’ ಎಂದರು.

ಭ್ರಷ್ಟರ ಕಿತ್ತೊಗೆದರೆ ಮೋದಿ ಮಾತಿಗೆ ಗೌರವ: ಯತ್ನಾಳ

ವಿಜಯಪುರ: ‘ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಬದಲಾವಣೆ ಆಗುವುದಿದ್ದರೆ, ಅವರ ಇಡೀ ತಂಡ ತೊಲಗಬೇಕು’ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಆಗ್ರಹಿಸಿದರು.‌

ಸುದ್ದಿಗಾರರ ಜತೆ ಮಾತನಾಡಿದ ಅವರು, ‘ವಂಶವಾದ, ಭ್ರಷ್ಟಾಚಾರದ ವ್ಯಕ್ತಿಗಳು ಯಾವುದೇ ರಾಜ್ಯದಲ್ಲಿ ಇರಲಿ ಅವರನ್ನು ಕಿತ್ತೊಗೆಯುವ ಕೆಲಸವಾಗಬೇಕು, ಆಗ ಮಾತ್ರ ಪ್ರಧಾನಿ ನರೇಂದ್ರ ಮೋದಿ ಅವರ ಮಾತಿಗೆ ಗೌರವ ಬರುತ್ತದೆ’ ಎಂದರು.

‘ಯಾವುದೇ ವ್ಯಕ್ತಿಗೆ ಬಲಿಯಾಗದೇ ಇರುವವರು ಪ್ರಾಮಾಣಿಕರು ಬಿಜೆಪಿ ರಾಜ್ಯ ಘಟಕದ ಸಾರಥ್ಯ ವಹಿಸಲಿ. ವರಿಷ್ಠರು ಎಲ್ಲರ ಅಭಿಪ್ರಾಯ ಪಡೆದು ಹೊಸಬರನ್ನು ನೇಮಿಸಬೇಕು. ಯಾರನ್ನೋ ತಂದು ಹೇರಿದರೆ ಒಪ್ಪಿಕೊಳ್ಳುವುದಿಲ್ಲ’ ಎಂದರು.

‘ಕಾಂಗ್ರೆಸ್‌ ಜೊತೆ ನಾನು ಕೈಜೋಡಿಸಿದ್ದೇನೆ ಎಂದು ಆರೋಪಿಸುವ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರೇ, ಈ ಬಗ್ಗೆ ದಾಖಲೆಗಳಿದ್ದರೆ ಬಿಡುಗಡೆ ಮಾಡಿ. ನೀವು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಬಳಿ ಹೋಗಿ 20 ಪತ್ರಗಳಿಗೆ ಸಹಿ ಮಾಡಿಸಿಕೊಂಡು ಬಂದಿದ್ದೀರಿ. ಈ ಬಗ್ಗೆ ನನ್ನ ಬಳಿ ವಿಡಿಯೊ ಇದೆ’ ಎಂದು ವಿಜಯೇಂದ್ರಗೆ ಸವಾಲು ಹಾಕಿದರು.

‘ಡಿ.ವಿ. ಸದಾನಂದಗೌಡ, ಬಿ.ಸಿ. ಪಾಟೀಲ, ಎಂ.ಪಿ. ರೇಣುಕಾಚಾರ್ಯ ಅವರ ಬಗ್ಗೆ ನಾನು ಮಾತನಾಡಿಲ್ಲ. ಅವರು ನನ್ನ ಬಗ್ಗೆ ಮಾತನಾಡುವುದಿದ್ದರೆ ಸತ್ಯ ಮಾತನಾಡಲಿ, ಇಲ್ಲವೇ ಬಾಯಿ ಮುಚ್ಚಿಕೊಂಡು ಇರಲಿ. ಇಲ್ಲವಾದರೆ ಅವರ ಬಂಡವಾಳ ಬಯಲು ಮಾಡಬೇಕಾಗುತ್ತದೆ’ ಎಂದು ಅವರು ಎಚ್ಚರಿಕೆ ನೀಡಿದರು.

‘ವಂಶವಾದ, ಭ್ರಷ್ಟಚಾರದ ವಿರುದ್ಧ ಹೋರಾಟ ನನ್ನದು. ಯಡಿಯೂರಪ್ಪ ಅವರನ್ನು ಪಕ್ಷ ನಾಲ್ಕು ಬಾರಿ ಮುಖ್ಯಮಂತ್ರಿ ಮಾಡಿದೆ, ಪಕ್ಷದ ಅಧ್ಯಕ್ಷರನ್ನಾಗಿ ಮಾಡಲಾಗಿದೆ. ಇನ್ನೂ ನಾನು ಸೈಕಲ್‌ನಲ್ಲಿ ಓಡಾಡಿದ್ದೇನೆ, ಪಕ್ಷ ಕಟ್ಟಿದ್ದೇನೆ ಎಂದು ಹೇಳಿದರೆ ಹೇಗೆ? ನಾವೇನು ಅಂಬಾಸಿಡರ್‌ ಕಾರಿನಲ್ಲಿ ಓಡಾಡಿದ್ದೇವೆಯೇ? ನಾವು ಕೂಡ ಸೈಕಲ್‌ನಲ್ಲಿ ಓಡಾಡಿ ಪಕ್ಷ ಕಟ್ಟಿದ್ದೇವೆ’ ಎಂದರು.

ಒಳ ಜಗಳ: ತರುಣ್‌ ಚುಗ್ ರಾಜ್ಯಕ್ಕೆ

ರಾಜ್ಯ ಬಿಜೆಪಿಯಲ್ಲಿ ವರ್ಷಗಳಿಂದಲೇ ‘ಭಿನ್ನ’ಸ್ವರ ಮೂಡುತ್ತಾ ಬಂದಿದೆ. ಬಸನಗೌಡ ಪಾಟೀಲ ಯತ್ನಾಳ ಅವರು ಯಡಿಯೂರಪ್ಪ ಹಾಗೂ ವಿಜಯೇಂದ್ರ ವಿರುದ್ಧ ನಿರಂತರವಾಗಿ ಟೀಕಿಸಿದ್ದರೂ ಇದುವರೆಗೂ ಯಾವುದೇ ಕ್ರಮ ಕೈಗೊಳ್ಳದ ಪಕ್ಷದ ವರಿಷ್ಠರು ಕೊನೆಗೂ ರಂಗಪ್ರವೇಶ ಮಾಡಿದ್ದಾರೆ.

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತರುಣ್‌ ಚುಗ್‌ ಅವರನ್ನು ರಾಜ್ಯಕ್ಕೆ ಕಳುಹಿಸುತ್ತಿರುವ ಆ ಪಕ್ಷದ ವರಿಷ್ಠರು, ಡಿ. 2 ಮತ್ತು 3ರಂದು ಪಕ್ಷದ ಪ್ರಮುಖ ನಾಯಕರ ಸಭೆ ನಡೆಸಿ, ವರದಿ ಸಲ್ಲಿಸಲು ಸೂಚಿಸಿದ್ದಾರೆ ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.