ADVERTISEMENT

ಬಿಜೆಪಿ ಚುನಾವಣಾ ತಾಲೀಮು ಆರಂಭ: ಏಪ್ರಿಲ್‌ ಮೊದಲ ವಾರ ಮೋದಿ, ಶಾ ರಾಜ್ಯಕ್ಕೆ

ಪ್ರಧಾನಿ ಮೋದಿ, ಶಾ ಏಪ್ರಿಲ್‌ ಮೊದಲ ವಾರ ರಾಜ್ಯಕ್ಕೆ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2022, 19:19 IST
Last Updated 27 ಮಾರ್ಚ್ 2022, 19:19 IST
ಬಿಜೆಪಿ ವರಿಷ್ಠ ನಾಯಕರು
ಬಿಜೆಪಿ ವರಿಷ್ಠ ನಾಯಕರು    

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಗೆ ಒಂದು ವರ್ಷ ಬಾಕಿ ಇರುವಾಗಲೇ ಚುನಾವಣಾ ತಾಲೀಮು ಆರಂಭಿಸಲುಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಏಪ್ರಿಲ್‌ ಮೊದಲ ವಾರ ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ.

ಯಾವುದೇ ರಾಜ್ಯದಲ್ಲಿ ಚುನಾವಣೆ ಇದ್ದರೂ ಸರಿ ಸುಮಾರು ಒಂದು ವರ್ಷ ಮೊದಲೇ ಪ್ರಧಾನಿ ಮೋದಿ ಮತ್ತು ಶಾ ಅವರು ಅಲ್ಲಿಗೆ ಭೇಟಿ ನೀಡುತ್ತಾರೆ. ಈ ಮೂಲಕ ಚುನಾವಣಾ ‘ಕಾವು’ ಎಬ್ಬಿಸುವುದು ಬಿಜೆಪಿ ಚುನಾವಣಾ ತಂತ್ರದ ಭಾಗ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಹಲವು ಯೋಜನೆಗಳಿಗೆ ಚಾಲನೆ, ಉದ್ಘಾಟನೆ ಇತ್ಯಾದಿಗಳ ಮೂಲಕ ವೇದಿಕೆ ಸಜ್ಜುಗೊಳಿಸುತ್ತಾರೆ.

ಇತ್ತೀಚೆಗೆ ಉತ್ತರ ಪ್ರದೇಶ, ಪಂಜಾಬ್‌, ಗೋವಾ, ಉತ್ತರಾಖಂಡ, ಮಣಿಪುರಗಳಲ್ಲೂ ಇದೇ ವಿಧಾನ ಅನುಸರಿಸಿದ್ದರು. ಚುನಾವಣೆಗೂ ಮೊದಲು ಭೇಟಿ ನೀಡಿ ಚುನಾವಣಾ ಸಮರಕ್ಕೆ ಮುನ್ನುಡಿ ಬರೆಯುತ್ತಾರೆ. ಕರ್ನಾಟಕದಲ್ಲೂ ಈ ಕಾರ್ಯತಂತ್ರ ಪುನರಾವರ್ತನೆ ಆಗಲಿದೆ.

ADVERTISEMENT

ಅಮಿತ್‌ ಶಾ ಏಪ್ರಿಲ್‌ 1ರಂದು ತುಮಕೂರು ಸಿದ್ಧಗಂಗಾ ಮಠಕ್ಕೆ ಭೇಟಿ ನೀಡುವರು. ನಂತರ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುವ ಸಹಕಾರ ಸಮಾವೇಶದಲ್ಲಿ ಭಾಗಿಯಾಗಿ ‘ಕ್ಷೀರ ಸಮೃದ್ಧಿ ಬ್ಯಾಂಕ್‌’ ಉದ್ಘಾಟಿಸುವರು.

ನರೇಂದ್ರ ಮೋದಿ ಅವರು ಏ.5ರಂದು ಅಂಬೇಡ್ಕರ್‌ ಸ್ಕೂಲ್‌ ಆಫ್‌ ಎಕನಾಮಿಕ್ಸ್‌ ಉದ್ಘಾಟನೆ ಹಾಗೂ ಉಪನಗರ ರೈಲು ಯೋಜನೆ ಕಾಮಗಾರಿಗಳ ಚಾಲನೆಯಲ್ಲಿ ಭಾಗವಹಿಸುವರು. ಉಭಯ ನಾಯಕರ ಭೇಟಿಯನ್ನು ಚುನಾವಣಾ ತಯಾರಿಗೆ ಪೂರಕವಾಗಿ ಬಳಸಿಕೊಳ್ಳಲು ಬಿಜೆಪಿಯ ರಾಜ್ಯ ನಾಯಕರು ಯೋಚಿಸಿದ್ದಾರೆ.

ರಾಜ್ಯ ಬಿಜೆಪಿ ಈಗಾಗಲೇ ಸದ್ದು ಗದ್ದಲವಿಲ್ಲದೇ ಬೇರು ಮಟ್ಟದಲ್ಲಿ ಕಾರ್ಯಕರ್ತರನ್ನು ಅಣಿಗೊಳಿಸುವ ಕಾರ್ಯ ನಡೆಸಿದೆ.

ಪ್ರಮುಖರ ಸಮಿತಿ ಸಭೆ ಸಾಧ್ಯತೆ: ಅಮಿತ್‌ ಶಾ ಭೇಟಿಯ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಘಟಕದ ಪ್ರಮುಖರ ಸಮಿತಿ (ಕೋರ್‌ ಕಮಿಟಿ) ಸಭೆಯನ್ನೂ ನಡೆಸುವ ಸಾಧ್ಯತೆ ಇದೆ. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌
ಕುಮಾರ್‌ ಕಟೀಲ್‌, ಕೇಂದ್ರ ಗೃಹ ಸಚಿವರ ಜತೆ ಪಕ್ಷದ ಪ್ರಮುಖರ ಸಮಿತಿ ಸಭೆ ನಿಗದಿಗೆ ಪ್ರಯತ್ನಿ
ಸುತ್ತಿದ್ದಾರೆ. ಆದರೆ, ಇನ್ನೂ ಅಂತಿಮಗೊಂಡಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಸಭೆಯಲ್ಲಿ ಕೂಡ ಭಾಗವಹಿಸುವ ಸಾಧ್ಯತೆ ಇದೆ.

ಈ ಸಭೆ ನಡೆದಲ್ಲಿ ಚುನಾವಣಾ ತಯಾರಿಯ ಕಾರ್ಯಸೂಚಿ ಕುರಿತು ಚರ್ಚಿಸುವ ಸಾಧ್ಯತೆ ಇದೆ. ಪಕ್ಷದ ವಿವಿಧ ನಾಯಕರ ರಾಜ್ಯ ಪ್ರವಾಸ, ರಾಜ್ಯ ರಾಜಕೀಯದಲ್ಲಿನ ಬೆಳವಣಿಗೆಗಳು ಸೇರಿದಂತೆ ಪ್ರಮುಖ ವಿಷಯಗಳ ಕುರಿತು ಅಮಿತ್‌ ಶಾ ಅವರೊಂದಿಗೆ ಚರ್ಚಿಸಿ, ಒಪ್ಪಿಗೆ ಪಡೆಯಲು ಯೋಚಿಸಲಾಗಿದೆ. ಅದು ಸಾಧ್ಯವಾದರೆ ಏಪ್ರಿಲ್‌ ಅಂತ್ಯದೊಳಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಬಿಜೆಪಿ ನಾಯಕರು ರಾಜ್ಯ ಪ್ರವಾಸ ಆರಂಭಿಸಲಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ.

ಈ ಮಧ್ಯೆ ಸಚಿವ ಸಂ‍ಪುಟ ವಿಸ್ತರಣೆಯ ಬಗ್ಗೆ ಚರ್ಚೆ ಆರಂಭವಾಗಿದ್ದು, ವಿಸ್ತರಣೆಗೆ ಏಪ್ರಿಲ್‌ನಲ್ಲಿ ಹಸಿರು ನಿಶಾನೆ ನೀಡುವ ಸಾಧ್ಯತೆ ಇದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ಮೋದಿ ಜತೆ ಇಸ್ರೇಲ್‌ ಪ್ರಧಾನಿ ರಾಜ್ಯಕ್ಕೆ?

ಏಪ್ರಿಲ್‌ 5 ರಂದು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಇಸ್ರೇಲ್‌ ಪ್ರಧಾನಿ ನಫ್ತಾಲಿ ಬೆನೆಟ್‌ ಕೂಡ ರಾಜ್ಯಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ. ಉಭಯ ನಾಯಕರು ಒಟ್ಟಾಗಿ ರಾಜ್ಯ ಪ್ರವಾಸ ಕೈಗೊಳ್ಳುವ ಕುರಿತು ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಕ್ಕೆ ಮಾಹಿತಿ ರವಾನಿಸಿದೆ ಎಂದು ಗೊತ್ತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.