ಕೆ.ಎಸ್. ಈಶ್ವರಪ್ಪ
ಕೊಪ್ಪಳ: ‘ಬಿಜೆಪಿಯಲ್ಲಿ ಕುಟುಂಬ ರಾಜಕಾರಣದ ಬೇರುಗಳು ಗಟ್ಟಿಯಾಗಿದ್ದು, ಸಾಮೂಹಿಕ ನಾಯಕತ್ವ ಇಲ್ಲದಂತಾಗಿದೆ. ಹೊಂದಾಣಿಕೆ ರಾಜಕಾರಣದ ಮೇಲಾಟವಿದೆ. ಹಿಂದೂತ್ವವಾದ ಚಿಗುರಿ ಶುದ್ಧೀಕರಣವಾದ ಬಳಿಕವಷ್ಟೇ ಆ ಪಕ್ಷ ಸೇರುತ್ತೇನೆ’ ಎಂದು ಮುಖಂಡ ಕೆ.ಎಸ್. ಈಶ್ವರಪ್ಪ ಹೇಳಿದರು.
ನಗರದಲ್ಲಿ ಮಂಗಳವಾರ ಸುದ್ದಿಗಾರರ ಜೊತೆ ಮಾತನಾಡಿ ‘ನನ್ನ ಕತ್ತು ಕೊಯ್ದರೂ ಕಾಂಗ್ರೆಸ್ ಸೇರಿದಂತೆ ಯಾವುದೇ ಪಕ್ಷಕ್ಕೂ ಹೋಗುವುದಿಲ್ಲ. ಯು.ಟಿ.ಖಾದರ್ ಕೋಮುವಾದಿ ವ್ಯವಸ್ಥೆಯಲ್ಲಿ ಸಿಲುಕಿದ್ದಾರೆ ಎಂಬಂತೆ ನಡೆದುಕೊಳ್ಳುತ್ತಿದ್ದಾರೆ. ಅದಕ್ಕಾಗಿಯೇ ಗೃಹ ಸಚಿವ ಜಿ.ಪರಮೇಶ್ವರಗೆ ಪತ್ರ ಬರೆದಿದ್ದಾರೆ. ಅನೇಕ ವರ್ಷಗಳಿಂದ ಹಿಂದೂ ಯುವಕರ ಕಗ್ಗೊಲೆಗಳಾಗುತ್ತಿವೆ. ಆಗಲೂ ಖಾದರ್ ಅವರು ಕಾಂಗ್ರೆಸ್‌ನಲ್ಲಿಯೇ ಇದ್ದರು. ಆಗ ಯಾರಿಗೂ ಪತ್ರ ಬರೆಯಲಿಲ್ಲ’ ಎಂದರು.
‘ರಾಜಕಾರಣ ಹಾಗೂ ವೈಯಕ್ತಿಕ ಸ್ನೇಹ ಬೇರೆ. ಬಿ.ಎಸ್.ಯಡಿಯೂರಪ್ಪ ನಾನು ಅಣ್ಣತಮ್ಮಂದಿರಿದ್ದಂತೆ. ನನ್ನ ಜನ್ಮದಿನಕ್ಕೆ ಯಡಿಯೂರಪ್ಪ ಮತ್ತು ಪುತ್ರ ರಾಘವೇಂದ್ರ ಶುಭಕೋರಿದರು. ವೈಯಕ್ತಿಕ ಸ್ನೇಹಕ್ಕೂ, ರಾಜಕಾರಣಕ್ಕೂ ಸಂಬಂಧವಿಲ್ಲ. ನಾನು ವೈಯಕ್ತಿಕವಾಗಿ ಯಾರನ್ನೂ ವಿರೋಧಿಸುವುದಿಲ್ಲ. ಪಕ್ಷ ಅವರ ಕುಟುಂಬದ ಹಿಡಿತದಲ್ಲಿದೆ. ಹಾಗಾಗಿ ಸದ್ಯಕ್ಕೆ ಬಿಜೆಪಿಗೆ ಹೋಗುವುದಿಲ್ಲ. ಹಿಂದೂತ್ವದ ಪರವಾಗಿ ಬಿಜೆಪಿಯಿಂದ ಆಕ್ರೋಶ ಬರುತ್ತಿಲ್ಲ’ ಎಂದು ಹೇಳಿದರು.
ಅಪ್ಪಣ್ಣ ಪದಕಿ, ಮಂಜುನಾಥ ಅಂಗಡಿ, ರಾಜು ಬಾಕಳೆ, ಹಾಲುಮತಾ ಮಹಾಸಭಾದ ಜಿಲ್ಲಾಧ್ಯಕ್ಷ ಹನುಮಂತಪ್ಪ ಕೌದಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.