ADVERTISEMENT

ಪ್ರಜ್ವಲ್‌ ಪರಾರಿ ಹಿಂದೆ ಬಿಜೆಪಿ ಕೈವಾಡ: ಪ್ರಿಯಾಂಕ್ ಖರ್ಗೆ

​ಪ್ರಜಾವಾಣಿ ವಾರ್ತೆ
Published 24 ಮೇ 2024, 16:07 IST
Last Updated 24 ಮೇ 2024, 16:07 IST
<div class="paragraphs"><p>ಪ್ರಿಯಾಂಕ್ ಖರ್ಗೆ</p></div>

ಪ್ರಿಯಾಂಕ್ ಖರ್ಗೆ

   

ಬೆಂಗಳೂರು: ‘ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ವಿದೇಶಕ್ಕೆ ಪರಾರಿಯಾಗಿರುವುದರ ಹಿಂದೆ ಬಿಜೆಪಿಯ ಸಂಚು ಇದೆ’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಪ್ರಿಯಾಂಕ್‌ ಖರ್ಗೆ ಆರೋಪಿಸಿದರು.

‘ಪ್ರಜ್ವಲ್‌ ವಿದೇಶಕ್ಕೆ ಹೋಗುವವರೆಗೂ ರಾಜ್ಯ ಸರ್ಕಾರ ಕತ್ತೆ ಕಾಯುತ್ತಿತ್ತೆ’ ಎಂಬ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿಕೆ ಕುರಿತು ಸುದ್ದಿಗಾರರಿಗೆ ಶುಕ್ರವಾರ ಪ್ರತಿಕ್ರಿಯಿಸಿದ ಅವರು, ‘ಬಿಜೆಪಿಯವರಿಗೆ ಎಲ್ಲ ಗೊತ್ತಿದ್ದೂ ಲೋಕಸಭಾ ಚುನಾವಣೆಯಲ್ಲಿ ಏಕೆ ಟಿಕೆಟ್‌ ಕೊಡಿಸಿದ್ದರು? ಬಿಜೆಪಿ ಮುಖಂಡ ದೇವರಾಜೇಗೌಡ ಎಲ್ಲ ಮಾಹಿತಿಯನ್ನೂ ಅವರ ಪಕ್ಷದವರಿಗೆ ಒದಗಿಸಿದ್ದರು. ಎಫ್‌ಐಆರ್‌ ದಾಖಲಾಗುವ ಮೊದಲು ವಿದೇಶಕ್ಕೆ ಕಳಿಸುವ ಸಂಚು ಮಾಡಿದ್ದೇ ಬಿಜೆಪಿಯವರು’ ಎಂದರು.

ADVERTISEMENT

‘ಜೋಶಿಯವರು ಕೇಂದ್ರದ ಸಂಸದೀಯ ವ್ಯವಹಾರಗಳ ಸಚಿವ. ಸಂಸದನೊಬ್ಬ ಇಂತಹ ಕೃತ್ಯ ಎಸಗಿದ್ದನ್ನು ಖಂಡಿಸಿದ್ದಾರಾ? ಪ್ರಜ್ವಲ್‌ ವಿರುದ್ಧ ಕ್ರಮ ಕೈಗೊಳ್ಳುವಂತೆ ಒಮ್ಮೆಯಾದರೂ ಪತ್ರ ಬರೆದಿದ್ದಾರಾ? ಆರೋಪಿಯ ಪಾಸ್‌ಪೋರ್ಟ್‌ ರದ್ದು ಮಾಡುವಂತೆ ಮುಖ್ಯಮಂತ್ರಿಯವರು ಎರಡು ಬಾರಿ ಪತ್ರ ಬರೆದರೂ ಏಕೆ ಕ್ರಮ ಕೈಗೊಂಡಿಲ್ಲ’ ಎಂದು ಕೇಳಿದರು.

ಜೆಡಿಎಸ್‌ ಪಕ್ಷದವರು ತಮ್ಮ ಸಂಸದನ ಹೀನ ಕೃತ್ಯದ ಬಗ್ಗೆ ಚರ್ಚಿಸುತ್ತಿಲ್ಲ. ನಟ, ನಿರ್ದೇಶಕ, ನಿರ್ಮಾಪಕ ಎಂದು ಏನೇನೋ ಹೇಳುತ್ತಿದ್ದಾರೆ. ಹೀನ ಕೃತ್ಯಕ್ಕಿಂತಲೂ ವಿಡಿಯೊ ಹಂಚಿಕೆಯಾಗಿದ್ದೇ ಅವರಿಗೆ ದೊಡ್ಡ ವಿಷಯವಾಗಿದೆ ಎಂದು ಟೀಕಿಸಿದರು.

‘ಪತ್ರದ ಬಗ್ಗೆ ಪ್ರತಿಕ್ರಿಯಿಸಲಲ್ಲ’

ಪೊಲೀಸರ ಎದುರು ಹಾಜರಾಗುವಂತೆ ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ ಅವರು ತಮ್ಮ ಮೊಮ್ಮಗ ಪ್ರಜ್ವಲ್‌ ರೇವಣ್ಣಗೆ ಪತ್ರ ಬರೆದಿರುವುದು ಕೌಟುಂಬಿಕ ವಿಚಾರ. ಆ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೇಳಿದರು. ಸುದ್ದಿಗಾರರ ಜತೆ ಶುಕ್ರವಾರ ಮಾತನಾಡಿದ ಅವರು ‘ಕ್ಷಮಿಸಿ ದೇವೇಗೌಡರ ಪತ್ರದ ಕುರಿತು ಪ್ರತಿಕ್ರಿಯಿಸಲು ನಾನು ಇಚ್ಛಿಸುವುದಿಲ್ಲ’ ಎಂದರು. ಬಿಜೆಪಿ ಶಾಸಕರಾದ ಶಿವರಾಮ್‌ ಹೆಬ್ಬಾರ್‌ ಮತ್ತು ಎಸ್‌.ಟಿ. ಸೋಮಶೇಖರ್‌ ಭೇಟಿ ಕುರಿತು ಕೇಳಿದಾಗ ‘ಅವರು ನಮ್ಮ ಸ್ನೇಹಿತರು. ಆಗಾಗ ಬಂದು ಭೇಟಿಯಾಗುತ್ತಾರೆ’ ಎಂದು ಉತ್ತರಿಸಿದರು.

‘ದೂರವಾಣಿ ಕದ್ದಾಲಿಕೆ: ಸಾಕ್ಷ್ಯ ಒದಗಿಸಲಿ’

 ‘ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡರ ಕುಟುಂಬದವರ ದೂರವಾಣಿಗಳನ್ನು ಕದ್ದಾಲಿಸಲಾಗುತ್ತಿದೆ ಎಂಬ ಆರೋಪದ ಕುರಿತು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಸಾಕ್ಷ್ಯ ಒದಗಿಸಿದರೆ ತನಿಖೆಗೆ ಸಿದ್ಧ’ ಎಂದು ಗೃಹ ಸಚಿವ ಜಿ. ಪರಮೇಶ್ವರ ಹೇಳಿದರು.

ಸುದ್ದಿಗಾರರ ಜತೆ ಶುಕ್ರವಾರ ಮಾತನಾಡಿದ ಅವರು ‘ಚೀನಾದಿಂದ ಉಪಕರಣಗಳನ್ನು ತರಿಸಿದವರು ಯಾರು? ಯಾರ ದೂರವಾಣಿಗಳನ್ನು ಕದ್ದಾಲಿಕೆ ಮಾಡಿದ್ದಾರೆ? ಎಂಬುದು ಕುಮಾರಸ್ವಾಮಿ ಅವರಿಗೆ ಗೊತ್ತಿರಬಹುದು. ಹಾಗಿದ್ದರೆ ಆಧಾರಗಳನ್ನು ಒದಗಿಸಲಿ. ಸುಮ್ಮನೆ ಮಾತನಾಡಿದರೆ ಕ್ರಮ ಕೈಗೊಳ್ಳುವುದು ಅಸಾಧ್ಯ’ ಎಂದರು. ದೇವೇಗೌಡರ ಪತ್ರದ ಕುರಿತು ಕೇಳಿದಾಗ ‘ದೇವೇಗೌಡರ ಪತ್ರಕ್ಕೆ ಬೆಲೆ ನೀಡಬೇಕು. ಪ್ರಜ್ವಲ್‌ ರೇವಣ್ಣ ಈಗಲಾದರೂ ಮರಳಿ ಬಂದು ತನಿಖೆಗೆ ಸಹಕಾರ ನೀಡಲಿ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.