ADVERTISEMENT

150 ಕ್ಷೇತ್ರಗಳ ಗೆಲುವಿಗೆ ಬಿಜೆಪಿ ಹೈಕಮಾಂಡ್ ಕಾರ್ಯತಂತ್ರ

ಬಿಜೆಪಿ ಕಾರ್ಯಕಾರಿಣಿ: ಪ್ರಮುಖರ ಜೊತೆ ಅರುಣ್‌ ಸಿಂಗ್‌ ಮಾತುಕತೆ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2021, 20:00 IST
Last Updated 28 ಡಿಸೆಂಬರ್ 2021, 20:00 IST
ಹುಬ್ಬಳ್ಳಿಯಲ್ಲಿ ಮಂಗಳವಾರ ಬಿಜೆಪಿ ಕಾರ್ಯಕಾರಿಣಿ ಆರಂಭಕ್ಕೂ ಮುನ್ನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಗೋ ಪೂಜೆ ಮಾಡಿ ಗೋವಿಗೆ ಮುತ್ತಿಟ್ಟರು. ಶಾಸಕ ಜಗದೀಶ ಶೆಟ್ಟರ್‌, ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್‌ ಕಟೀಲ್, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಇದ್ದಾರೆ –ಪ್ರಜಾವಾಣಿ ಚಿತ್ರ
ಹುಬ್ಬಳ್ಳಿಯಲ್ಲಿ ಮಂಗಳವಾರ ಬಿಜೆಪಿ ಕಾರ್ಯಕಾರಿಣಿ ಆರಂಭಕ್ಕೂ ಮುನ್ನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಗೋ ಪೂಜೆ ಮಾಡಿ ಗೋವಿಗೆ ಮುತ್ತಿಟ್ಟರು. ಶಾಸಕ ಜಗದೀಶ ಶೆಟ್ಟರ್‌, ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್‌ ಕಟೀಲ್, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಇದ್ದಾರೆ –ಪ್ರಜಾವಾಣಿ ಚಿತ್ರ   

ಹುಬ್ಬಳ್ಳಿ: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ 150 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲು ಬಿಜೆಪಿ ಹೈಕಮಾಂಡ್‌ ರೂಪಿಸಿರುವ ನೀಲನಕ್ಷೆಯನ್ನು ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌ ಬಿಚ್ಚಿಟ್ಟರು.

ನಗರದ ಡೆನಿಸನ್ಸ್ ಹೋಟೆಲ್‌ನಲ್ಲಿ ಮಂಗಳವಾರ ನಡೆದ ಬಿಜೆಪಿ ರಾಜ್ಯ ಕಾರ್ಯಕಾರಿಣಿಗೂ ಮುನ್ನ ನಡೆದ ಪ್ರಭಾರಿ ಹಾಗೂ ಸಹ ಪ್ರಭಾರಿಗಳ ಸಭೆಯಲ್ಲಿ ಸಿಂಗ್‌ ಅವರು, 2023ರ ಚುನಾವಣೆಯಲ್ಲಿಯೂ ಬಹುಮತ ಗಳಿಸುವ ಬಗೆಗೆ ಹೈಕಮಾಂಡ್ ಗಂಭೀರವಾಗಿದೆ. ಆ ನಿಟ್ಟಿನಲ್ಲಿ ಎಲ್ಲರೂ ಕೆಲಸ ಮಾಡಬೇಕು ಎಂದು ಸೂಚಿಸಿದರು.

ದಾವಣಗೆರೆಯಲ್ಲಿ ಹಿಂದೆ ನಡೆದಿದ್ದ ಕಾರ್ಯಕಾರಿಣಿ ಬಳಿಕ ಪಕ್ಷದಲ್ಲಿ ಆದ ಬೆಳವಣಿಗೆ ಹಾಗೂ ಚುನಾವಣಾ ಫಲಿತಾಂಶಗಳ ಬಗ್ಗೆ ಅರುಣ್ ಸಿಂಗ್ ಹಾಗೂ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್‌ ಕಟೀಲ್ ಅವರು ಪ್ರಭಾರಿಗಳ ಜೊತೆ ಚರ್ಚಿಸಿದರು. ಪಕ್ಷದ ಸಂಘಟನೆ ವಿಸ್ತರಿಸುವ, ಮುಂಬರುವ ಚುನಾವಣೆಗೆ ಸಜ್ಜುಗೊಳ್ಳಲು ರೂಪಿಸಿರುವ ಕಾರ್ಯತಂತ್ರಗಳ ಬಗ್ಗೆ ಅವರಿಗೆ ಮಾಹಿತಿ ನೀಡಲಾಯಿತು.

ADVERTISEMENT

ಕೇಂದ್ರ ಸಚಿವ ಪ್ರಲ್ಹಾದ
ಜೋಶಿ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ. ರಾಷ್ಟ್ರೀಯ ಉಪಾಧ್ಯಕ್ಷೆ ಅರುಣಾ, ಆರ್. ಅಶೋಕ.,ಗೋವಿಂದ ಕಾರಜೋಳ, ಎಸ್.ಟಿ ಸೋಮಶೇಖರ್, ಡಾ. ಸುಧಾಕರ, ಶಂಕರಪಾಟೀಲ ಮುನೇನಕೊಪ್ಪ, ಕೆ.ಎಸ್.ಈಶ್ವರಪ್ಪ,ಆನಂದ ಸಿಂಗ್‌,ಶಿವರಾಮ ಹೆಬ್ಬಾರ, ಎಂಟಿಬಿ ನಾಗರಾಜ, ಗೋವಿಂದ ಕಾರಜೋಳ, ಮಾಧುಸ್ವಾಮಿ. ಕೋಟ ಶ್ರೀನಿವಾಸ ಪೂಜಾರಿ, ಸುನೀಲ್‌ ಕುಮಾರ್, ಸಂಸದ ಸದಾನಂದಗೌಡ, ಸಂಘಟನಾ ಕಾರ್ಯದರ್ಶಿ ಅರುಣಕುಮಾರ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ಬೆಳಿಗ್ಗೆ 11 ಗಂಟೆಗೆ ನಿಗದಿಯಾಗಿದ್ದ ಉದ್ಘಾಟನಾ ಸಮಾರಂಭ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬರುವುದು ವಿಳಂಬವಾದ್ದರಿಂದ ಮಧ್ಯಾಹ್ನ 3 ಗಂಟೆಗೆ ಉದ್ಘಾಟನೆಗೊಂಡಿತು.

ರಾಜ್ಯ ಸರ್ಕಾರದ ಸಾಧನೆಗೆ ಅಭಿನಂದನಾ ನಿರ್ಣಯ

ಹುಬ್ಬಳ್ಳಿ: ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ರಾಜ್ಯ ಬಿಜೆಪಿ ಸರ್ಕಾರ ಜನಪರವಾಗಿ ಆಡಳಿತಾತ್ಮಕ ಸುಧಾರಣೆಗಳನ್ನು ಜಾರಿಗೆ ತಂದಿದೆ. ನಾಡು, ನುಡಿ, ಗಡಿ, ನೆಲ, ಜಲದ ಬಗ್ಗೆ ತಮ್ಮದೇ ಆದ ಗಟ್ಟಿನಿಲುವು ಕೈಗೊಂಡಿದೆ. ಆದ್ದರಿಂದ ರಾಜ್ಯ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುವ ನಿರ್ಣಯವನ್ನು ಸಭೆಯಲ್ಲಿ ಕೈಗೊಳ್ಳಲಾಯಿತು.

ರಾಜ್ಯ ಸರ್ಕಾರ ಧಾರ್ಮಿಕ ಸ್ವಾತಂತ್ರ್ಯ ಹಕ್ಕಿನ ಸಂರಕ್ಷಣೆಗಾಗಿ ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣೆ ಮಸೂದೆ 2021 ಅನ್ನು ವಿಧಾನಸಭೆಯ ಚಳಿಗಾಲದ ಅಧಿವೇಶನದಲ್ಲಿ ಮಂಡಿಸಿದ್ದು ಐತಿಹಾಸಿಕ ಎಂದು ಕೊಂಡಾಡಿದ ಸಭೆ, ಇದಕ್ಕೂ ಅಭಿನಂದಿಸಿತು.

‘ಎಲ್ಲರೂ ಬರಲೇbjp ಬೇಕು ಎಂದೇನಿಲ್ಲ’

ಹುಬ್ಬಳ್ಳಿ: ‘ಎಲ್ಲಾ ಸಚಿವರು, ಸಂಸದರು ಹಾಗೂ ಶಾಸಕರು ಕಾರ್ಯಕಾರಿಣಿಗೆ ಬರಲೇಬೇಕು ಎಂದೇನಿಲ್ಲ’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

ಬಿ.ಎಸ್. ಯಡಿಯೂರಪ್ಪ, ಜಾರಕಿಹೊಳಿ ಸಹೋದರರು ಸೇರಿದಂತೆ, ಅನೇಕರು ಗೈರಾಗಿರುವ ಕುರಿತು ಮಾಧ್ಯಮದವರ ಪ್ರಶ್ನೆಗೆ ಹೀಗೆ ಪ್ರತಿಕ್ರಿಯಿಸಿದರು.

‘ಯಡಿಯೂರಪ್ಪ ಅವರ ವಿದೇಶ ಪ್ರವಾಸ ಮುಂಚೆಯೇ ನಿಗದಿಯಾಗಿತ್ತು. ಕೆಲವರ ಗೈರು ಹಾಜರಿಗೆ ವಿಶೇಷ ಅರ್ಥ ಕಲ್ಪಿಸಬೇಕಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.