
ಸಂತೋಷ ಲಾಡ್
ಹುಬ್ಬಳ್ಳಿ: ‘ಇಷ್ಟು ವರ್ಷಗಳ ಕಾಲ ಹಾಡಿದ್ದ ಜನಗಣಮನ ಗೀತೆ, ಈಗ ಯಾಕೆ ಬಿಜೆಪಿಯವರಿಗೆ ಬೇಡವಾಗಿದೆ? ಮಾಧ್ಯಮಗಳಲ್ಲಿ ಪ್ರಚಾರ ಸಿಗುತ್ತದೆ ಎನ್ನುವ ಕಾರಣಕ್ಕೆ ಅವರು, ಯಾವ ಸಿದ್ಧಾಂತವೂ ಇಲ್ಲದೆ ಮಾತನಾಡುತ್ತಾರೆ’ ಎಂದು ಸಚಿವ ಸಂತೋಷ ಲಾಡ್ ಕಿಡಿಕಾರಿದರು.
ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಬಿಜೆಪಿಯವರು ಆಡುವ ಯಾವ ಮಾತಿಗೂ ಹುರುಳಿಲ್ಲವಾಗಿದೆ. ದಿನಬೆಳಗಾದರೆ ಕಾಂಗ್ರೆಸ್‌ಗೆ ಬಯ್ಯುವುದು, ಅರ್ಥವಿಲ್ಲದ ಹೇಳಿಕೆ ನೀಡಿ ಪ್ರಚಾರ ಪಡೆಯುವುದೇ ಅವರ ಧ್ಯೇಯವಾಗಿದೆ’ ಎಂದು ಆರೋಪಿಸಿದರು.
‘ರೈತರ ಹೋರಾಟ ನಿರಂತರವಾಗಿದೆ. ಆದರೆ, ಕಾಂಗ್ರೆಸ್ ಆಡಳಿತವಿದ್ದ ರಾಜ್ಯದಲ್ಲಿ ಪ್ರತಿಭಟನೆ ನಡೆಸಿದರೆ, ರಾಷ್ಟ್ರೀಯ ಸಮಸ್ಯೆಯನ್ನಾಗಿ ಪ್ರತಿಬಿಂಬಿಸಲಾಗುತ್ತಿದೆ. ದೆಹಲಿಯಲ್ಲಿ ಹಾಗೂ ಬಿಜೆಪಿ ಸರ್ಕಾರವಿರುವ ರಾಜ್ಯದಲ್ಲಿ ಪ್ರತಿಭಟನೆ ನಡೆಸಿದ ರೈತರಿಗೆ ದೇಶದ್ರೋಹಿ ಪಟ್ಟಕಟ್ಟಿ, ಅವರ ಹಕ್ಕು ಕಿತ್ತುಕೊಳ್ಳುತ್ತಾರೆ’ ಎಂದರು.
‘ದೆಹಲಿಯಲ್ಲಿ ಪ್ರತಿಭಟನೆ ನಡೆದಾಗ ನೂರಾರು ಮಂದಿ ರೈತರು ಮೃತಪಟ್ಟರು. ಆಗ ಸುಮ್ಮನಿದ್ದ ಇದೇ ಬಿಜೆಪಿ ನಾಯಕರು, ಈಗ ರಾಜ್ಯದಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಕಾಂಗ್ರೆಸ್ ಮೇಲೆ ಮುಗಿಬೀಳುತ್ತಿದ್ದಾರೆ’ ಎಂದು ಹರಿಹಾಯ್ದ ಸಚಿವ ಲಾಡ್, ‘ಕಬ್ಬು ಬೆಳೆದ ರೈತರ ಸಮಸ್ಯೆ ಪರಿಹಾರಕ್ಕೆ ಮುಖ್ಯಮಂತ್ರಿ ಸಭೆ ಕರೆದಿದ್ದು, ಶೀಘ್ರ ಪರಿಹಾರ ಸಿಗಲಿದೆ’ ಎಂದರು.
‘ದೇಶದಾದ್ಯಂತ ಮತಗಳ್ಳತ ನಡೆದಿದ್ದು, ಚುನಾವಣೆ ವ್ಯವಸ್ಥೆಯನ್ನೇ ಹಾಳು ಮಾಡಲಾಗಿದೆ. ಪ್ರಧಾನಿ ನರೇಂಂದ್ರ ಮೋದಿ ಅವರ ತಂತ್ರ ಜನತೆಗೆ ಗೊತ್ತಾಗಿದೆ. ಇನ್ನು ಮುಂದಾದರೂ ವಿಶ್ವಗುರು ಎನ್ನುತ್ತ ಪ್ರಚಾರ ಮಾಡುವುದು, ನಾಟಕ ಮಾಡುವುದು ನಿಲ್ಲಿಸಲಿ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.