ADVERTISEMENT

ಎಲ್ಲೇ ಹೋದರೂ ಬಿಜೆಪಿಗೆ ಖಾಲಿ ಕುರ್ಚಿ ಸ್ವಾಗತ!: ಕಾಂಗ್ರೆಸ್‌ ಟ್ವೀಟ್‌

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 13 ಮಾರ್ಚ್ 2023, 8:53 IST
Last Updated 13 ಮಾರ್ಚ್ 2023, 8:53 IST
   

ಬೆಂಗಳೂರು: ಕೋಲಾರದಲ್ಲಿ ಭಾನುವಾರ ನಡೆಯಬೇಕಿದ್ದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯನ್ನು ಯಾವುದೇ ಕಾರಣವಿಲ್ಲದೆ ದಿಢೀರನೇ ಮುಂದೂಡಿರುವುದನ್ನು ಟೀಕಿಸಿರುವ ಕಾಂಗ್ರೆಸ್‌, ಎಲ್ಲೇ ಹೋದರೂ ಬಿಜೆಪಿಗೆ ಖಾಲಿ ಕುರ್ಚಿಗಳೇ ಸ್ವಾಗತಿಸುತ್ತವೆ ಎಂದು ಲೇವಡಿ ಮಾಡಿದೆ.


‘ಪ್ರಜಾವಾಣಿ’ ವರದಿಯನ್ನು ಉಲ್ಲೇಖಿಸಿ ಟ್ವೀಟ್‌ ಮಾಡಿರುವ ಕರ್ನಾಟಕ ಕಾಂಗ್ರೆಸ್‌, ಖಾಲಿ ಕುರ್ಚಿಗಳು ಬಿಜೆಪಿ ನಿರ್ನಾಮದ ಕತೆ ಹೇಳುತ್ತವೆ. ಹಣ ನೀಡಿದರೂ, ಏನೇ ಸರ್ಕಸ್ ಮಾಡಿದರೂ ಬಿಜೆಪಿಯತ್ತ ಜನ ಸುಳಿಯದಿರುವುದು ಮಡುಗಟ್ಟಿದ ಜನಾಕ್ರೋಶಕ್ಕೆ ನಿದರ್ಶನ ಎಂದು ಟೀಕಿಸಿದೆ.


ಖಾಲಿ ಕುರ್ಚಿ ಕಂಡು ಯಾತ್ರೆ ಮೊಟಕುಗೊಳಿಸುವುದಕ್ಕಿಂತ ನಾಚಿಕೆಗೇಡು ಇನ್ನೇನಿದೆ ಎಂದು ಕಾಂಗ್ರೆಸ್‌ ಪ್ರಶ್ನಿಸಿದೆ.
ಮಾಲೂರು ಪಟ್ಟಣದಲ್ಲಿ ರ‍್ಯಾಲಿ ನಡೆಸಿ ಬಳಿಕ ಕೋಲಾರ ತಾಲ್ಲೂಕಿನ ವಕ್ಕಲೇರಿ, ಪಾಶ್ರ್ವಗಾನಹಳ್ಳಿ, ಛತ್ರಕೋಡಿಹಳ್ಳಿ ಮಾರ್ಗವಾಗಿ ಯಾತ್ರೆ ಕೋಲಾರ ನಗರಕ್ಕೆ ಬಂದಿದೆ. ಅಷ್ಟರಲ್ಲಿ ಪಕ್ಷದ ಮುಖಂಡರು ವಾಪಸ್‌ ತೆರಳಿದರು.

ADVERTISEMENT


ನಗರದ ಬೈರೇಗೌಡ ಬಡಾವಣೆಯ ಬಳಿಯ ಮೈದಾನದಲ್ಲಿ ಬೃಹತ್‌ ವೇದಿಕೆ ಸಿದ್ಧಪಡಿಸಿ ಸಾವಿರಾರು ಕುರ್ಚಿಗಳನ್ನು ಹಾಕಲಾಗಿತ್ತು. ನಗರದೆಲ್ಲೆಡೆ ಬಿಜೆಪಿ ಬಾವುಟಗಳು, ಫ್ಲೆಕ್ಸ್‌, ಬ್ಯಾನರ್‌ಗಳು ರಾರಾಜಿಸುತ್ತಿದ್ದವು. ಸಂಜೆ 5 ಗಂಟೆಗೆ ಪಕ್ಷದ ಸಾರ್ವಜನಿಕ ಸಭೆ ಆರಂಭವಾಗಬೇಕಿತ್ತು. ಆ ಸಮಯದಲ್ಲಿ ಜನರಿಲ್ಲದೆ ಕುರ್ಚಿಗಳು ಖಾಲಿ ಬಿದ್ದಿದ್ದವು. ಇತ್ತ ಯಾತ್ರೆಯೂ ನಿಗದಿಗಿಂತ ಎರಡು ಗಂಟೆ ತಡವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.