ಬೆಂಗಳೂರು: ‘ವಾಲ್ಮೀಕಿ ಹಗರಣ ಎಲ್ಲಿ ತಮ್ಮ ಬುಡಕ್ಕೆ ಬರಲಿದೆಯೋ ಎಂದು ಮುಖ್ಯಮಂತ್ರಿ ಹೆದರಿಕೊಂಡಿದ್ದಾರೆ. ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ವಿಸ್ತೃತ ಚರ್ಚೆ ನಡೆಸಿ ವಿಪಕ್ಷಕ್ಕೆ ಸವಾಲು ಹಾಕಲಿದ್ದಾರೆ ಎಂಬ ನಿರೀಕ್ಷೆಯಲ್ಲಿದ್ದೆವು. ಆದರೆ, ಮುಖ್ಯಮಂತ್ರಿಯವರು ಪಲಾಯನ ಮಾಡಿದ್ದಾರೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹರಿಹಾಯ್ದರು.
ರಾಜ್ಯಪಾಲರ ಭೇಟಿಯ ಬಳಿಕ ಅವರು ಸುದ್ದಿಗಾರರ ಜತೆ ಮಾತನಾಡಿದರು.
‘ಮುಡಾ ಹಗರಣವನ್ನು ಸಿಬಿಐಗೆ ಕೊಡಬೇಕು. ಮುಖ್ಯಮಂತ್ರಿ ರಾಜಿನಾಮೆ ಕೊಡಬೇಕು ಎಂದು ರಾಜ್ಯಪಾಲರಿಗೆ ಮನವಿ ಮಾಡಿದ್ದೇವೆ. ರಾಜ್ಯಪಾಲರು ನಿನ್ನೆ ಮುಖ್ಯಮಂತ್ರಿಯವರನ್ನು ಕರೆಸಿ ವಿವರಣೆ ಕೇಳಿದ್ದಾರೆ. ನಾವು ಕಾದು ನೋಡಲಿದ್ದೇವೆ’ ಎಂದು ಹೇಳಿದರು.
ವಿಧಾನಸಭೆ ವಿರೋಧಪಕ್ಷದ ನಾಯಕ ಆರ್.ಅಶೋಕ ಮಾತನಾಡಿ, ‘ಈ ಸರ್ಕಾರವು ಬೃಹತ್ ಹಗರಣದಲ್ಲಿ ಪಾಲ್ಗೊಂಡಿರುವುದು ಬಯಲಾಗಿದೆ. ಇತಿಹಾಸದಲ್ಲಿ ಯಾವುದೇ ಸದನದಲ್ಲೂ ಆಡಳಿತ ಪಕ್ಷಕ್ಕೆ ಈ ರೀತಿಯ ಅವಮಾನ ಆಗಿಲ್ಲ. ಮುಖ್ಯಮಂತ್ರಿಗಳೇ ಲೂಟಿ ಮಾಡಿದ ಎರಡು ಹಗರಣಗಳು ಚರ್ಚೆಗೆ ಬಂದಿವೆ. ಮುಖ್ಯಮಂತ್ರಿಯವರು ಒಂದು ಕ್ಷಣವೂ ಆ ಸ್ಥಾನದಲ್ಲಿ ಮುಂದುವರಿಯುವ ನೈತಿಕತೆ ಕಳೆದುಕೊಂಡಿದ್ದಾರೆ’ ಎಂದರು.
ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಮಾತನಾಡಿ, ‘ಸದನದಲ್ಲಿ ದಾಖಲೆ ಸಮೇತ ಚರ್ಚೆಗೆ ನಾವು ಸಿದ್ಧರಿದ್ದೆವು. ಮುಖ್ಯಮಂತ್ರಿ ನಿರಪರಾಧಿ ಆಗಿದ್ದರೆ ಸದನದಲ್ಲಿ ಉತ್ತರ ಕೊಡಲು ಅವಕಾಶವಿತ್ತು. ಆದರೆ ಅವರು ಪಲಾಯನ ಮಾಡುವ ಮೂಲಕ ಸದನಕ್ಕೆ ಗೌರವ ನೀಡಿಲ್ಲ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.