ADVERTISEMENT

ರಾಜ್ಯ ಘಟಕದ ಅಧ್ಯಕ್ಷ ಸ್ಥಾನದ ಆಯ್ಕೆಯಲ್ಲಿ ಯಾವುದೇ ಗೊಂದಲವಿಲ್ಲ: ವಿಜಯೇಂದ್ರ

ನನಗೆ ಒಳ್ಳೆಯದಾಗಲಿದೆ: ಬಿ.ವೈ. ವಿಜಯೇಂದ್ರ ವಿಶ್ವಾಸ

​ಪ್ರಜಾವಾಣಿ ವಾರ್ತೆ
Published 26 ಜೂನ್ 2025, 11:36 IST
Last Updated 26 ಜೂನ್ 2025, 11:36 IST
<div class="paragraphs"><p>ಬಿ.ವೈ.ವಿಜಯೇಂದ್ರ</p></div>

ಬಿ.ವೈ.ವಿಜಯೇಂದ್ರ

   

ಬೆಂಗಳೂರು: ‘ರಾಜ್ಯ ಘಟಕದ ಅಧ್ಯಕ್ಷ ಸ್ಥಾನದ ಆಯ್ಕೆಯಲ್ಲಿ ಯಾವುದೇ ಗೊಂದಲಗಳಿಲ್ಲ. ಬಿಜೆಪಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ ಎಂಬುದನ್ನೂ ಒಪ್ಪುವುದಿಲ್ಲ. ಶೀಘ್ರವೇ ಕರ್ನಾಟಕವೂ ಸೇರಿ ಹಲವು ರಾಜ್ಯಗಳ ಅಧ್ಯಕ್ಷ ಸ್ಥಾನಗಳಿಗೆ ಹೆಸರುಗಳು ಘೋಷಣೆ ಆಗಲಿದೆ’ ಎಂದು ಬಿಜೆಪಿ ರಾಜ್ಯ ಘಟಕ ಅಧ್ಯಕ್ಷ ಬಿ.ವೈ.ವಿಜಯೇಂದ್ರ ವಿಶ್ವಾಸ ವ್ಯಕ್ತಪಡಿಸಿದರು.

ಪಕ್ಷದ ಕಚೇರಿಯಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ‘ಅಧ್ಯಕ್ಷ ಸ್ಥಾನದ ಆಯ್ಕೆ ಸಂಬಂಧಿಸಿದಂತೆ ವರಿಷ್ಟರು ಎಲ್ಲರ ಅಭಿಪ್ರಾಯ ಪಡೆದಿದ್ದಾರೆ. ಒಂದೂವರೆ ವರ್ಷಗಳಿಂದ ಸಂಘಟನಾ ಕಾರ್ಯ ಮಾಡಿದ್ದೇನೆ, ಹೀಗಾಗಿ ನನಗೆ ಒಳ್ಳೆಯದಾಗಲಿದೆ ಎಂಬ ವಿಶ್ವಾಸವಿದೆ’ ಎಂದು ಹೇಳಿದರು.

ADVERTISEMENT

‘ಅಧ್ಯಕ್ಷರ ಆಯ್ಕೆಯಲ್ಲಿ ಗೊಂದಲಗಳಿವೆ. ಆದ್ದರಿಂದ ಆಯ್ಕೆ ಪ್ರಕ್ರಿಯೆ ಮುಂದೂಡುತ್ತಿದ್ದಾರೆ ಎಂಬುದು ಸತ್ಯವಲ್ಲ. 14 ರಾಜ್ಯಗಳಲ್ಲಿ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಮುಗಿಸಿ, ಘೋಷಣೆಯೂ ಆಗಿದೆ. ಅತಿ ಶೀಘ್ರದಲ್ಲೇ ಇನ್ನು ಆರೇಳು ರಾಜ್ಯ ಘಟಕಗಳ ಅಧ್ಯಕ್ಷರ ಘೋಷಣೆಯೂ ಆಗಲಿದೆ ಎಂಬ ಮಾಹಿತಿ ಇದೆ. ಆ ಬಳಿಕವೇ ರಾಷ್ಟ್ರೀಯ ಅಧ್ಯಕ್ಷರ ನೇಮಕಾತಿಯೂ ಆಗಲಿದೆ’ ಎಂದರು.

‘ಬಿಜೆಪಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ’ ಎಂಬ ಡಿ.ವಿ.ಸದಾನಂದ ಗೌಡ ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ವಿಜಯೇಂದ್ರ, ‘ಸದಾನಂದಗೌಡರು ಹಿರಿಯರು. ಪಕ್ಷದ ಸ್ಥಿತಿ ಬೂದಿಮುಚ್ಚಿದ ಕೆಂಡದಂತಿದೆ ಎಂದು ಹೇಳಿರುವುದನ್ನು ಒಪ್ಪಲು ಸಾಧ್ಯವಿಲ್ಲ. ಸಣ್ಣ–ಪುಟ್ಟ ಅಭಿಪ್ರಾಯ ವ್ಯತ್ಯಾಸಗಳಿರುವುದು ಸಹಜ. ಅವರ ಜತೆ ಚರ್ಚೆ ಮಾಡುತ್ತೇನೆ’ ಎಂದು ವಿಜಯೇಂದ್ರ ಹೇಳಿದರು.

‘ನಾನು ದೆಹಲಿಗೆ ಹೋಗಿದ್ದೆ ಇನ್ನೂ ಕೆಲವು ಹಿರಿಯ ನಾಯಕರೂ ದೆಹಲಿಗೆ ಹೋಗಿದ್ದರು.  ಇಷ್ಟಕ್ಕೆ ಬಹಳ ಬೆಳವಣಿಗೆ ಆಗುತ್ತಿದೆ ಎಂದು ವ್ಯಾಖ್ಯಾನಿಸುವುದು ಕೇವಲ ಕಲ್ಪನೆ ಅಷ್ಟೆ. ನಾನು ವೈಯಕ್ತಿಕ ಕಾರಣಕ್ಕೆ ದೆಹಲಿಗೆ ಹೋಗಿದ್ದೆ. ಅಲ್ಲಿ ಪಕ್ಷದ ವರಿಷ್ಟರನ್ನಾಗಲಿ, ಯಾರನ್ನೂ ಭೇಟಿ ಮಾಡಿಲ್ಲ. ವಿರೋಧ ಪಕ್ಷದ ನಾಯಕ ಆರ್‌.ಅಶೋಕ ಅವರು ದೆಹಲಿಗೆ ಹೋಗಬಾರದು, ಮುಖಂಡರನ್ನು ಭೇಟಿ ಮಾಡಬಾರದು ಅಂತ ಏನಾದರೂ ಇದೆಯೇ’ ಎಂದು ಪ್ರಶ್ನಿಸಿದರು.

‘ವಿರೋಧಪಕ್ಷದ ನಾಯಕರಾಗಿ ಆರ್‌.ಅಶೋಕ ಅವರು ವಿಧಾನಸಭೆಯಲ್ಲಿ ಸಮರ್ಥವಾಗಿ ಕೆಲಸ ಮಾಡುತ್ತಿದ್ದಾರೆ. ಆ ಬಗ್ಗೆ ಶಾಸಕರಿಗೂ ತೃಪ್ತಿ ಇದೆ. ವಿರೋಧಪಕ್ಷದ ನಾಯಕರ ಬದಲಾವಣೆ ಬಗ್ಗೆ ಮಾಧ್ಯಮಗಳಲ್ಲಿ ಚರ್ಚೆ ಆಗುತ್ತಿರುವುದು ಖಂಡಿತಾ ಸರಿಯಲ್ಲ. ಆ ಚರ್ಚೆಯಲ್ಲಿ ಯಾವುದೇ ಹುರುಳಿಲ್ಲ’ ಎಂದು ವಿಜಯೇಂದ್ರ ಹೇಳಿದರು.

‘ಎಫ್‍ಐಆರ್ ಗೊಡ್ಡು ಬೆದರಿಕೆಗೆ ಹೆದರಲ್ಲ’

‘ನಮ್ಮ ಪಕ್ಷದ ‘ಎಕ್ಸ್‌’ ಖಾತೆದಾರರ ವಿರುದ್ಧ ಸರ್ಕಾರ ಎಫ್‌ಐಆರ್ ದಾಖಲಿಸಿದೆ. ಇಂಥ ಗೊಡ್ಡು ಬೆದರಿಕೆಗಳಿಗೆ ಹೆದರುವ ಪ್ರಶ್ನೆಯೇ ಇಲ್ಲ’ ಎಂದು ಬಿ.ವೈ.ವಿಜಯೇಂದ್ರ ಹೇಳಿದರು. ‘ಇಂಥ ನೂರು ಎಫ್‌ಐಆರ್ ದಾಖಲಿಸಲಿ. ನಾವು ಮತ್ತು ನಮ್ಮ ಕಾರ್ಯಕರ್ತರು ಅದನ್ನು ಸಮರ್ಥವಾಗಿ ಎದುರಿಸಲು ಸಿದ್ಧ. ಬಿಜೆಪಿ ಕಾರ್ಯಕರ್ತರ ಮೇಲೆ ದಬ್ಬಾಳಿಕೆ, ಗೂಂಡಾಗಿರಿ ನಡೆಸಲು ಸಾಧ್ಯವಿಲ್ಲ’ ಎಂದು ಅವರು ಕಿಡಿಕಾರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.