ADVERTISEMENT

ಕಾಂಗ್ರೆಸ್ ಎಂಬ ಕಸ ಗುಡಿಸಲು ಒಗ್ಗೂಡಬೇಕಿದೆ ಬಿಜೆಪಿ: ಸಿ.ಟಿ.ರವಿ

​ಪ್ರಜಾವಾಣಿ ವಾರ್ತೆ
Published 13 ಜುಲೈ 2024, 15:46 IST
Last Updated 13 ಜುಲೈ 2024, 15:46 IST
ಸಿ.ಟಿ.ರವಿ
ಸಿ.ಟಿ.ರವಿ   

ದಾವಣಗೆರೆ: ರಾಜ್ಯದಲ್ಲಿ ಕಾಂಗ್ರೆಸ್‌ ಎಂಬ ಕಸ ಗುಡಿಸಲು ಬಿಜೆಪಿ ಪೊರಕೆಯಾಗಿ ಕೆಲಸ ಮಾಡಬೇಕಿದೆ. ಕಟ್ಟುಬಿಚ್ಚಿದ ಪೊರಕೆಯೇ ಕಸವಾಗುವ ಅಪಾಯವಿದೆ. ಒಗ್ಗೂಡಿ ಮುನ್ನಡೆದರೆ ಕಸಗುಡಿಸಲು ಸಾಧ್ಯ ಎಂದು ವಿಧಾನಪರಿಷತ್‌ ಸದಸ್ಯ ಸಿ.ಟಿ.ರವಿ ಮಾರ್ಮಿಕವಾಗಿ ನುಡಿದರು.

ಇಲ್ಲಿನ ಅಭಿನವ ರೇಣುಕ ಮಂದಿರದಲ್ಲಿ ಜಿ.ಎಂ.ಸಿದ್ದೇಶ್ವರ ಅಭಿಮಾನಿ ಬಳಗದ ವತಿಯಿಂದ ಮಾಜಿ ಸಂಸದ ಜಿ.ಎಂ.ಸಿದ್ದೇಶ್ವರ ಅವರ 72ನೇ ಜನ್ಮದಿನದ ಅಂಗವಾಗಿ ಶನಿವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಬಿಜೆಪಿಗೆ ಅಧಿಕಾರ ಸಾಧನ ಮಾತ್ರ. ಭಾರತ ವಿಶ್ವಗುರು ಆಗಬೇಕು ಎಂಬುದು ನಮ್ಮ ಗುರಿ. ಇದಕ್ಕೆ ಪಕ್ಷದ ಪ್ರತಿಯೊಬ್ಬರೂ ಕೆಲಸ ಮಾಡಬೇಕು. ಪಕ್ಷಕ್ಕೆ ದ್ರೋಹ ಮಾಡಿದವರು ಪ್ರತಿಫಲ ಉಣ್ಣುತ್ತಾರೆ. ಪಕ್ಷ ಹಾಗೂ ರಾಷ್ಟ್ರ ನಿಷ್ಠೆಗೆ ಚ್ಯುತಿ ಬಾರದ ಹಾಗೆ ಬದುಕೋಣ’ ಎಂದು ಕಾರ್ಯಕರ್ತರಿಗೆ ಮನವಿ ಮಾಡಿದರು.

ADVERTISEMENT

‘ಬಿಜೆಪಿಯಲ್ಲಿರುವ ಬಹುತೇಕರು ಸಿದ್ಧಾಂತಕ್ಕಾಗಿ ರಾಜಕಾರಣಕ್ಕೆ ಬಂದವರು. ಹಿಂದುತ್ವ ಹಾಗೂ ರಾಷ್ಟ್ರಭಕ್ತಿ ಬಿಜೆಪಿಯ ಸಿದ್ಧಾಂತ. ಈ ಸಿದ್ಧಾಂತಕ್ಕೆ ಸೂರ್ಯ–ಚಂದ್ರ ಇರುವವರೆಗೆ ಸೋಲಿಲ್ಲ. ಒಂದು ವೇಳೆ ಈ ಸಿದ್ಧಾಂತಕ್ಕೆ ಸೋಲುಂಟಾದರೆ ಅದು ದೇಶದ ಸೋಲಾಗುತ್ತದೆ. ಚುನಾವಣೆಯ ಸೋಲು ಜೀವನದ ಸೋಲಲ್ಲ. ಪಾಠ ಕಲಿಯಲು, ನಮ್ಮವರನ್ನು ಅರಿಯಲು ಇದೊಂದು ಅವಕಾಶ’ ಎಂದು ಹೇಳಿದರು.

ಮಾಜಿ ಸಂಸದ ಜಿ.ಎಂ.ಸಿದ್ದೇಶ್ವರ, ‘ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂಬುದನ್ನು ಮೊದಲೇ ಪಕ್ಷಕ್ಕೆ ಮನವರಿಕೆ ಮಾಡಿಕೊಟ್ಟಿದ್ದೆ. ಚುನಾವಣೆಗೂ ಮುನ್ನ ಕಿವಿ ತೊಂದರೆ ಉಂಟಾಗಿ ೪೨ ದಿನ ಚಿಕಿತ್ಸೆಯಲ್ಲಿದ್ದೆ. ಹೀಗಾಗಿ, ಪತ್ನಿಗೆ ಅವಕಾಶ ಸಿಕ್ಕಿತು. ಕಾಂಗ್ರೆಸ್‌ ಮುಖಂಡರು ನಮ್ಮವರನ್ನೇ ಬುಟ್ಟಿಗೆ ಹಾಕಿಕೊಂಡರು. ಇದು ರಾಜ್ಯ ಮತ್ತು ರಾಷ್ಟ್ರದ ನಾಯಕರ ಗಮನಕ್ಕೂ ಬಂದಿದೆ’ ಎಂದು ಹೇಳಿದರು.

‘ತಾಲ್ಲೂಕು, ಜಿಲ್ಲಾ ಪಂಚಾಯಿತಿ ಹಾಗೂ ಮಹಾನಗರ ಪಾಲಿಕೆ ಚುನಾವಣೆ ಸಮೀಪಿಸುತ್ತಿವೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿಲ್ಲ ಎಂಬ ಭಾವನೆ ಕಾರ್ಯಕರ್ತರಿಗೆ ಬರುವುದು ಬೇಡ. ಇನ್ನೂ ಐದು ವರ್ಷ ಕಾರ್ಯಕರ್ತರ ಸಂಪರ್ಕದಲ್ಲಿದ್ದು, ಕಷ್ಟ–ಸುಖದಲ್ಲಿ ಭಾಗಿಯಾಗುವೆ. ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಮಂಡಳಿ ಸದಸ್ಯ ಬಿ.ಎಸ್‌.ಯಡಿಯೂರಪ್ಪ ಹಾಗೂ ವಿರೋಧ ಪಕ್ಷದ ನಾಯಕ ಆರ್‌.ಅಶೋಕ್‌ ನಮ್ಮೊಂದಿಗೆ ಇದ್ದಾರೆ’ ಎಂದು ಹೇಳಿದರು.

ಸಂಸದ ಗೋವಿಂದ ಕಾರಜೋಳ, ವಿಧಾನಪರಿಷತ್ ಸದಸ್ಯ ಕೆ.ಎಸ್.ನವೀನ್, ಮಾಜಿ ಶಾಸಕರಾದ ಪ್ರೊ.ಎನ್.ಲಿಂಗಣ್ಣ, ಎಸ್‌.ವಿ.ರಾಮಚಂದ್ರಪ್ಪ, ಎಚ್‌.ಪಿ.ರಾಜೇಶ್‌, ಮುಖಂಡರಾದ ವೀರೇಶ್ ಹನಗವಾಡಿ, ಯಶವಂತರಾವ್ ಜಾಧವ್, ಜಿ.ಎಂ.ಲಿಂಗರಾಜು, ಜಿ.ಎಸ್‌.ಅನಿತ್ ಕುಮಾರ್, ಉಪ‌ಮೇಯರ್ ಯಶೋದ, ಶಿವಕುಮಾರ್ ದೇವರಮನಿ, ಜೀವನಮೂರ್ತಿ, ಚಿತ್ರದುರ್ಗ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎ.ಮುರುಳಿ ಇದ್ದರು.

ಚುನಾವಣೆಯಲ್ಲಿ ಗಾಯತ್ರಿ ಸಿದ್ದೇಶ್ವರ ಗೆಲ್ಲುವ ವಿಶ್ವಾಸವಿತ್ತು. ಸೋಲು ದೈವ ಇಚ್ಛೆಯೋ ಅಥವಾ ನಮ್ಮವರ ಮೋಸವೊ ಗೊತ್ತಿಲ್ಲ. ಸಂಬಂಧಪಟ್ಟವರು ಆತ್ಮಾವಲೋಕನ ಮಾಡಿಕೊಳ್ಳಬೇಕು.
-ಎನ್.ರವಿಕುಮಾರ್, ವಿಧಾನಪರಿಷತ್ ಮುಖ್ಯ ಸಚೇತಕ
ರಾಜ್ಯ ಸರ್ಕಾರ ಎಷ್ಟು ದಿನ ಇರುತ್ತದೆ ಎಂಬುದು ಗೊತ್ತಿಲ್ಲ. ನಿತ್ಯ ಒಂದಿಲ್ಲೊಂದು ಭ್ರಷ್ಟಾಚಾರದಲ್ಲಿ ಮುಳುಗಿದೆ. ಲೋಕಸಭಾ ಚುನಾವಣೆಯಲ್ಲಿ ೧೪೨ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿಗೆ ಮುನ್ನಡೆ ಸಿಕ್ಕಿದೆ.
-ಮುರುಗೇಶ್ ನಿರಾಣಿ, ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ

‘ರಾಜ್ಯಸಭೆಗೆ ಕಳುಹಿಸಿ’

ದಾವಣಗೆರೆ ಸೇರಿ ಮಧ್ಯ ಕರ್ನಾಟಕದಲ್ಲಿ ಬಿಜೆಪಿಯನ್ನು ಸಬಲಗೊಳಿಸಲು ಮಾಜಿ ಸಂಸದ ಜಿ.ಎಂ.ಸಿದ್ದೇಶ್ವರ ಅವರನ್ನು ರಾಜ್ಯಸಭೆಗೆ ಕಳುಹಿಸಲು ರಾಜ್ಯ ನಾಯಕರು ಒಲವು ತೋರಬೇಕು ಎಂದು ಶಾಸಕ ಬಿ.ಪಿ.ಹರೀಶ್ ಮನವಿ ಮಾಡಿದರು.

‘ಬಿಜೆಪಿ ಅಧಿಕಾರದಲ್ಲಿದ್ದ ಅವಧಿಯಲ್ಲಿ ಜಿಲ್ಲೆಗೆ ಸಚಿವ ಸ್ಥಾನ ಸರಿಯಾಗಿ ಸಿಕ್ಕಿಲ್ಲ. ಪಕ್ಷ, ಅಧಿಕಾರಯುತ ಹುದ್ದೆಗಳು ಕೈತಪ್ಪಿವೆ. ದಾವಣಗೆರೆ ಬಿಜೆಪಿಯ ಭದ್ರಕೋಟೆಯಾಗಿ ಮುಂದುವರಿಯಲು ಸಿದ್ದೇಶ್ವರ ಸಕ್ರಿಯ ರಾಜಕಾರಣದಲ್ಲಿ ಉಳಿಯಬೇಕು. ಅವರನ್ನು ರಾಜ್ಯ ಸಭೆಗೆ ಕಳುಹಿಸುವ ವ್ಯವಸ್ಥೆಯನ್ನು ನಾಯಕರು ಮಾಡಬೇಕು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.